Site icon Vistara News

Karnataka Election: ಬಾಗೇಪಲ್ಲಿಯಲ್ಲಿ ಅನಿತಾ ಕುಮಾರಸ್ವಾಮಿಯನ್ನು ಸ್ಪರ್ಧೆಗಿಳಿಸಲು ನನಗೇನು ಹುಚ್ಚೇ ಎಂದ ಎಚ್‌ಡಿಕೆ

Bagepalli News

ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆಗೆ (Karnataka Election) ಬಾಗೇಪಲ್ಲಿಯಲ್ಲಿ ಈಗಾಗಲೇ ನಾಗರಾಜರೆಡ್ಡಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ. ಅಲ್ಲಿ ಪಂಚರತ್ನ ಯಾತ್ರೆಯನ್ನೂ ಮಾಡಿದ್ದೇವೆ. ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ನಾನು ಯಾಕೆ ಅಭ್ಯರ್ಥಿಯನ್ನು ಬದಲಿಸಲಿ? ಅನಿತಾ ಕುಮಾರಸ್ವಾಮಿ ಅವರನ್ನು ತಂದು ಸ್ಪರ್ಧೆಗೆ ಇಳಿಸಲು ನನಗೇನು ಹುಚ್ಚೇ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡುತ್ತಾರೆ ಎಂಬ ಕಾಂಗ್ರೆಸ್‌ ನಾಯಕ ಸುಧಾಕರ್‌ ಹೇಳಿಕೆಗೆ ಬಾಗೇಪಲ್ಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿಯೂ ನಾಗರಾಜರೆಡ್ಡಿ ಅವರಿಗೆ ಟಿಕೆಟ್‌ ಕೊಡಬೇಕು ಎಂದುಕೊಂಡಿದ್ದೆ. ಹೀಗಾಗಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದೇನೆ. ನಾನು ದಡ್ಡತನದಿಂದ ರಾಜಕಾರಣದಲ್ಲಿ ಇದ್ದೇನಾ? ಬೇರೆ ಪಕ್ಷಗಳ ನಾಯಕರು ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.

ನಮ್ಮ ತಂದೆಯನ್ನು ಉಪ ಮುಖ್ಯಮಂತ್ರಿ ಮಾಡಬಹುದಿತ್ತು. ಮೋಸ ಮಾಡಿ ಬಿಟ್ಟರು ಎಂಬ ಕೃಷ್ಣ ಭೈರೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ. ಭೈರೇಗೌಡರು ಬದುಕಿದ್ದಾಗ ಕೃಷ್ಣ ಭೈರೇಗೌಡ ಇಲ್ಲಿ ಇರಲೇ ಇಲ್ಲ. ಅವರ ತಂದೆಯ ರಾಜಕೀಯ ಇವರಿಗೆ ಏನು ಗೊತ್ತಿದೆ? ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ನಾನು ಅವರ ಮನೆಗೆ ಹೋಗಿದ್ದೆ. ಆಗ ಅವರು ಮಲಗಿಕೊಂಡಿದ್ದರು. ನಿಮಗೇನಾದರೂ ಬುದ್ಧಿಗಿದ್ದಿ ಇದೆಯಾ? ಉಪಮುಖ್ಯಮಂತ್ರಿ ಬೇಡಿಕೆ ಈಡೇರದಿದ್ದರೆ ನಮ್ಮ ಸಮಾಜವನ್ನು ಯಾರು ಕೇಳುತ್ತಾರೆ. ಆ ಬಗ್ಗೆ ತಯಾರಿ ನಡೆಸಿ ಎಂದು ಕೇಳಿದವನು ನಾನು. ಈ ಬಗ್ಗೆ ಅವರ ತಾಯಿಯನ್ನು ಕೇಳಲಿ. ವಿದೇಶದಲ್ಲಿದ್ದು ನೆನ್ನೆ ಮೊನ್ನೆ ಬಂದಿರುವ ಇವರು, ವಿಷಯ ತಿಳಿದುಕೊಂಡು ಮಾತನಾಡಲಿ ಎಂದರು.

ಆಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಅವರ ಹಿಂದೆ ಈಗ ನೀವು ಓಡಾಡುತ್ತಿದ್ದೀರಿ, ಭೈರೇಗೌಡರಿಗೆ ಉಪ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೇ ಸಿದ್ದರಾಮಯ್ಯ. ಹಾಗಾದರೆ ಸಿದ್ದರಾಮಯ್ಯ ಅವರ ಬಾಲ ಹಿಡಿದುಕೊಂಡು ಯಾಕೆ ಓಡಾಡುತ್ತೀರಿ, ಲಘುವಾಗಿ ಮಾತನಾಡುವುದು ಬಿಟ್ಟು ಕೆಲಸ ಏನು ಮಾಡಿದ್ದೀರಿ ಹೇಳಿ. ಸಿದ್ದರಾಮಯ್ಯ ಕಾಲದಲ್ಲಿ ಮಂತ್ರಿ ಆಗಿದ್ದಾಗ ಕೋಲಾರ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Budget 2023 : ಕಾಂಗ್ರೆಸ್‌ ತಪ್ಪಿನಿಂದ ಮೇಕೆದಾಟು ವಿವಾದದಲ್ಲಿದೆ : ಕೇಂದ್ರ ಬಜೆಟ್‌ ಅಭಿವೃದ್ಧಿಗೆ ಪೂರಕ ಎಂದ ಸಿಎಂ ಬಸವರಾಜ ಬೊಮ್ಮಾಯಿ

ದೇವೇಗೌಡರು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಅವರ ಬೆನ್ನಿಗೆ ಚೂರಿ ಹಾಕಿದವರಿಗೆ ಜನರೇ ಬುದ್ಧಿ ಕಲಿಸಿದ್ದಾರೆ. ಕೃಷ್ಣ ಬೈರೇಗೌಡರು ಯಾರನ್ನೋ ಮೆಚ್ಚಿಸಲು ಮಾತನಾಡಿದ್ದಾರೆ. ಕೋಲಾರದಲ್ಲಿ ಶ್ರೀನಿವಾಸಗೌಡರನ್ನು ಎಂಎಲ್‌ಎ ಮಾಡಿದ್ದು ಜನತಾ ದಳ. ಆದರೆ, ಇವರು ಜೆಡಿಎಸ್‌ಗೆ ಏನು ಕೊಡುಗೆ ಕೊಟ್ಟಿದ್ದಾರೆ. ಈ ಹಿಂದೆ ಶ್ರೀನಿವಾಸಪುರ ಕ್ಷೇತ್ರದಲ್ಲಿ ವೆಂಕಟಶಿವಾರೆಡ್ಡಿ ಸೋಲಲು, ರಮೇಶ್‌ ಕುಮಾರ್‌ ಗೆಲ್ಲಲು ಅವರೇ ಕಾರಣ ಎಂದು ಆರೋಪಿಸಿದರು.

Exit mobile version