Site icon Vistara News

Karnataka Election: ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದರೇ ಲಕ್ಷ್ಮಿ ಹೆಬ್ಬಾಳ್ಕರ್?

Karnataka Election news Laxmi Hebbalkar visits Gaurigadde to meet Avadhoota Vinay Guruji

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಚುನಾವಣೆ (Karnataka Election) ಕಣ ರಂಗೇರುತ್ತಿದೆ. ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಈಗ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ತಮ್ಮ ವಿರುದ್ಧದ ಸಿಡಿ ವಿಚಾರ ಬಗ್ಗೆ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಮೇಲೆಯೂ ಕಠಿಣ ಮಾತುಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar) ಅವರು, ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಅವಧೂತ ವಿನಯ್ ಗುರೂಜಿ ಭೇಟಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಯ ಕೇಳಿದ್ದು, ಅವಕಾಶ ದೊರೆತರೆ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಈಚೆಗೆ ಲಕ್ಷ್ಮಿ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನಲ್ಲಿರುವ ಗೌರಿ ಗದ್ದೆ ಆಶ್ರಮಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಚರ್ಚೆ ನಡೆಸಲು ೩೦ ನಿಮಿಷಗಳ ಕಾಲಾವಕಾಶವನ್ನು ಕೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ವಿಸ್ತಾರ Money Guide : ನಿಮ್ಮ Net worth ತಿಳಿದುಕೊಳ್ಳುವುದು ಯಾಕೆ ಮುಖ್ಯ?

ಶನಿವಾರ (ಫೆ.೪) ಸಂಜೆಯೇ ಚಿಕ್ಕಮಗಳೂರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ಅವರು ಮೂಡಿಗೆರೆ ಪಟ್ಟಣ ಸಮೀಪದಲ್ಲಿ ಆಯೋಜಿಸಿರುವ ಆಶಾಕಿರಣ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿನಯ್ ಗುರೂಜಿ ಸಹ ಮುಖು ಅತಿಥಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭೇಟಿ, ಚರ್ಚೆಗೆ ಅವಕಾಶವನ್ನು ಕೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಕಾರ್ಯಕ್ರಮ ಮುಗಿದ ಬಳಿಕ ಭೇಟಿಯಾಗುವುದಾಗಿ ವಿನಯ್‌ ಗುರೂಜಿ ಹೇಳಿದ್ದಾರೆನ್ನಲಾಗಿದೆ.

ಲಕ್ಷ್ಮಿ ಸಲುವಾಗಿ ರಾಜ್ಯ ಹಾಳು ಮಾಡಿದ್ದು ಡಿಕೆಶಿ ಎಂದಿದ್ದರು ರಮೇಶ್‌ ಜಾರಕಿಹೊಳಿ

ಯುವತಿಯ ಜತೆಗೆ ತಮ್ಮ ಸಿಡಿ ಪ್ರಕರಣದ ಕುರಿತು ಜನವರಿ ೩೦ರಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಒಬ್ಬ ಗ್ರಾಮೀಣ ಶಾಸಕಿಯ ಸಲುವಾಗಿ ಇಡೀ ರಾಜ್ಯವನ್ನು ಡಿ.ಕೆ. ಶಿವಕುಮಾರ್‌ ಹಾಳುಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

ಇದೊಂದು ಕ್ರಿಮಿನಲ್ ‌ಕೇಸ್. ಕಳೆದ 2 ವರ್ಷಗಳಿಂದ ತೇಜೋವದೆ ಮಾಡಿ, ರಾಜಕೀಯ ಜೀವನ ಹಾಳು ಮಾಡಿದ್ದಾರೆ. ಈ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ನನ್ನ ಧರ್ಮಪತ್ನಿ, ಸಹೋದರರಿಗೆ ನಾನು ಋಣಿ. 2020 ಮಾರ್ಚ್ ತಿಂಗಳಲ್ಲಿ ಸಿಡಿ ರಿಲೀಸ್ ಆಗಿತ್ತು. ಒಂದು ಹೆಣ್ಣನ್ನು ಬಿಟ್ಟು ‌ಷಡ್ಯಂತ್ರ ಮಾಡಿದ್ದಾರೆ. 1990ರಿಂದ ರಾಜಕೀಯ ‌ಜೀವನ ನಡೆಸುತ್ತಿದ್ದೇನೆ. ಅದೇ ಸಮಯದಲ್ಲಿ ಡಿಕೆಶಿ ಸ್ಪರ್ಧಿಸಿದ್ದರು. ಇಬ್ಬರು ಮೊದಲ‌ ಚುನಾವಣೆಯಲ್ಲಿ ಸೋತಿದ್ದೇವೆ.
ಆಗ ಡಿಕೆಶಿ ಹರಕು ಚಪ್ಪಳಿ ಧರಿಸುತ್ತಿದ್ದ, ಇಂದು ಅಗರ್ಭ ಶ್ರೀಮಂತ ಎಂದು ಕಿಡಿಕಾರಿದ್ದರು.

ಇಬ್ಬರೂ ಕಾಂಗ್ರೆಸ್‌ನಲ್ಲಿ ಇದ್ದಾಗ ಬಹಳ ಒಳ್ಳೆಯ ಸ್ನೇಹಿತರಾಗಿದ್ದೆವು. ಡಿ.ಕೆ. ಶಿವಕುಮಾರ್‌ಗೆ ಅನಾರೋಗ್ಯವಾಗಿದ್ದಾಗ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದೆ. ಆಗ ಡಿ.ಕೆ. ಶಿವಕುಮಾರ್‌ ಧರ್ಮ ಪತ್ನಿ ಉಷಾ ಡಿ.ಕೆ. ಶಿವಕುಮಾರ್‌ ಅವರು ಬಂದು ಮಾತನಾಡಿಸಿದರು. ಅಣ್ಣಾ ನೀವಿಬ್ಬರೂ ಒಳ್ಳೆಯ ಸ್ನೇಹಿತರು, ಮೂರನೆಯವರ ಕಾರಣಕ್ಕೆ ದಯವಿಟ್ಟು ಪಕ್ಷವನ್ನು ಬಿಡಬೇಡಿ ಎಂದು ಮನವಿ ಮಾಡಿದರು. ಆದರೆ, ನಿನ್ನ ಗಂಡ ಬಹಳ ಕೆಟ್ಟವನಿದ್ದಾನೆ. ನಾನು ಪಕ್ಷ ಬಿಡುತ್ತೇನೆ ಎಂದು ಹೇಳಿದೆ. ಗ್ರಾಮೀಣ ಶಾಸಕಿ ಸಂಬಂಧ ಇಡೀ ರಾಜ್ಯ ಹಾಳಾಗಿದೆ. ವಿಷಕನ್ಯೆಗಾಗಿ ಡಿ.ಕೆ. ಶಿವಕುಮಾರ್‌ ಇಡೀ ರಾಜ್ಯಕ್ಕೆ ಮೋಸ ಮಾಡಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಕಿಡಿಕಾರಿದ್ದರು.

ಇದನ್ನೂ ಓದಿ: ಇದು ಕೇವಲ ಹೋರಿಯಲ್ಲ; ಸದ್ದುಗದ್ದಲ, ಕುಣಿತ ಭಜನೆಗಳ ನಡುವೆ ಖುಷಿಯಲ್ಲಿ ನಡೆಯೋ ಸಂಯಮದ ಬಸವಣ್ಣ!

ಹೆಬ್ಬಾಳ್ಕರ್‌ಗೆ ಟಿಕೆಟ್ ಕೊಡಲ್ಲ ಎಂದು ಡಿಕೆಶಿ ‌ಹೇಳಿದ್ರು. ನಾನೇ ಒತ್ತಾಯ ಮಾಡಿ ಟಿಕೆಟ್ ಕೊಡಿಸಿದೆ. ಬೆಳಗಾವಿ ‌ಗ್ರಾಮೀಣ ಕ್ಷೇತ್ರದ ‌ಶಾಸಕಿಯಿಂದ ರಾಜ್ಯ ಹಾಳಾಗಿದೆ. ಮುಂದೆಯೂ ಹಾಳು ಆಗುತ್ತದೆ. ಜಾತಿ ಸಂಘರ್ಷ ಆದ್ರೆ ಡಿಕೆಶಿ- ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ. ಈ ಹಿಂದೆ ಆಕೆಯು ತಾನೇ ಕಿತ್ತೂರು ಚೆನ್ನಮ್ಮ ಎಂದು ಹೇಳಿಕೊಳ್ಳುತ್ತಿದ್ದಳು. ಆಕೆಯನ್ನು ಕುರಿತು ನಾನು ಕೆಟ್ಟ ಶಬ್ದ ಬಳಕೆ ಮಾಡಿದ್ದೆ. ಆ ಧ್ವನಿಯನ್ನು ಕತ್ತರಿಸಿ, ನಾನು ಕಿತ್ತೂರು ಚೆನ್ನಮ್ಮನಿಗೆ ಕೆಟ್ಟ ಶಬ್ದ ಬಳಕೆ ಮಾಡಿದೆ ಎಂದು ಸುಳ್ಳು ಹೇಳಿದರು ಎಂಬುದಾಗಿ ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು. ಇದಲ್ಲದೆ, ಪ್ರಚಾರದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಕುಕ್ಕರ್‌, ಹಣ ಹಂಚಿಕೆ ಸೇರಿದಂತೆ ಇನ್ನಿತರ ವಿಷಯಗಳಿಗಾಗಿ ರಮೇಶ್‌ ಜಾರಕಿಹೊಳಿ ನಿರಂತರವಾಗಿ ವಾಗ್ದಾಳಿ ನಡೆಸಿಕೊಂಡು ಬರುತ್ತಲೇ ಇದ್ದಾರೆ.‌ ಈ ಎಲ್ಲ ವಿಷಯಗಳ ಬಗ್ಗೆ ಈಗ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ವಿನಯ್‌ ಗುರೂಜಿಯನ್ನು ಭೇಟಿಯಾಗಿ ಚರ್ಚೆ ನಡೆಸುವ ಹಾಗೂ ಮಾರ್ಗದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Exit mobile version