Site icon Vistara News

Karnataka Election: ಹಾಸನಕ್ಕೆ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವುದು ಬಿಡಿ; ಭವಾನಿಯೇ ಅಭ್ಯರ್ಥಿ: ಸೂರಜ್‌ ರೇವಣ್ಣ

Karnataka Election news Let alone stop activists for Hassan Bhavani is the candidate says Suraj Revanna

ಹಾಸನ: ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜಕೀಯ ಅಖಾಡ ಸಿದ್ಧಗೊಳ್ಳುತ್ತಿದೆ. ಸದ್ಯ ಹಾಸನ ವಿಧಾನಸಭಾ ಕ್ಷೇತ್ರ ರಾಜ್ಯದ ಜನತೆಯ ಗಮನ ಸೆಳೆಯುತ್ತಿದೆ. ಜೆಡಿಎಸ್‌ ಕುಟುಂಬ ರಾಜಕಾರಣದ ತಿಕ್ಕಾಟ ಬೀದಿಗೆ ಬಂದಿದೆ. ಎಲ್ಲವನ್ನೂ ಬಗೆಹರಿಸುತ್ತೇನೆ, ಅಲ್ಲಿಯವರೆಗೆ ಮೌನವಾಗಿರಿ ಎಂಬ ಸೂಚನೆಯನ್ನು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ನೀಡಿದ್ದರೂ ಅಸಮಾಧಾನ ಸ್ಫೋಟಗೊಳ್ಳುವುದು ಮಾತ್ರ ನಿಂತಿಲ್ಲ. ಹಾಸನ ಜೆಡಿಎಸ್‌ ಟಿಕೆಟ್‌ ವಿಷಯವಾಗಿ ರೇವಣ್ಣ ಹಾಗೂ ಪತ್ನಿ ಭವಾನಿ ಮೌನವಾಗಿದ್ದರೂ ಈಗ ಅವರ ಪುತ್ರ ಸೂರಜ್‌ ರೇವಣ್ಣ ಕಿಡಿಕಾರಿದ್ದು, ಭವಾನಿ ರೇವಣ್ಣ ಅವರೇ ಅಭ್ಯರ್ಥಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇನೆ ಎಂಬುದನ್ನು ಬಿಟ್ಟುಬಿಡಬೇಕು. ರೇವಣ್ಣ ಅವರೇ ಫೈನಲ್‌ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಅರಕಲಗೂಡು ತಾಲೂಕಿನ ಹರದೂರು ಗ್ರಾಮದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ, ಕಾರ್ಯಕರ್ತರನ್ನೇ ನಿಲ್ಲಿಸುತ್ತೇನೆ ಎಂಬ ಹೇಳಿಕೆಯನ್ನು ಬಿಡಬೇಕು. ಭವಾನಿ ರೇವಣ್ಣ ಅವರೇ ಸ್ಪರ್ಧೆ ಮಾಡಲಿ ಎಂದು ಕಾರ್ಯಕರ್ತರೇ ಕೇಳುತ್ತಿದ್ದಾರೆ. ಇನ್ನು ಹಾಸನ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಯಾರೇ ಅಭ್ಯರ್ಥಿ ನಿಂತರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತಿರುವುದು ಎಚ್.ಡಿ. ರೇವಣ್ಣ ಅವರು. ಹಾಸನದ ಬಗ್ಗೆ ರೇವಣ್ಣ ಅವರಿಗೆ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಯಾರಿಗೂ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಹಿಂದಿನಿಂದಲೂ ನಮ್ಮ ತಾತ ಅವರೇ ಈ ಜಿಲ್ಲೆ ಬಗ್ಗೆ ನಿರ್ಧಾರ ತೆಗೆದುಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರೂ ಇಲ್ಲಿ ಅಭ್ಯರ್ಥಿಯೇ ಆಗಿದ್ದಾರೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕೆಂಬುದನ್ನು ಅವರೇ ನಿರ್ಧಾರ ಮಾಡಿಕೊಂಡು ಬಂದಿದ್ದಾರೆ. ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಮೊದಲಿಗೆ ವಿಧಾನ ಪರಿಷತ್‌ಗೆ ಭವಾನಿ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ದೇವೇಗೌಡರು ತೀರ್ಮಾನ ಮಾಡಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು. ಅದೇ ರೀತಿ ಸಂಸದರ ಚುನಾವಣೆಯಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಬೇಕಿತ್ತು. ಕೊನೆಗೆ ಸ್ವ-ಇಚ್ಛೆಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ದಾರಿ ಮಾಡಿಕೊಟ್ಟರು. ಅವರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿ, ಭವಿಷ್ಯ ರೂಪಿಸಿಕೊಂಡಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ, ಯಾವ ತಾಲೂಕಿನಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ಅವರೇ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದು ಸೂರಜ್‌ ಹೇಳಿದರು.

ಇದನ್ನೂ ಓದಿ: ಹುಡುಗಿಯ ಜತೆ ಆಟವಾಡಿದ್ದಕ್ಕೆ ನಾಯಿಮರಿಯನ್ನೇ ಕೊಂದ ಪಾಪಿಗಳು; ವಿಡಿಯೊ ವೈರಲ್‌ ಬಳಿಕ ಬಿತ್ತು ಕೇಸ್‌

ಸ್ವರೂಪ್ ಬೇರೆ ಅಲ್ಲ ಎಚ್.ಎಸ್.ಪ್ರಕಾಶ್ ಅವರು ಬೇರೆ ಅಲ್ಲ. ಆ ಕುಟುಂಬಕ್ಕೂ ನಾಲ್ಕು ಭಾರಿ ಟಿಕೆಟ್ ಕೊಟ್ಟು ಶಾಸಕ ಸ್ಥಾನವನ್ನು ತಂದುಕೊಟ್ಟಿದ್ದೇವೆ. ಅವರು ಅಗಲಿದ ನಂತರ ಅವರ ಮಗನನ್ನು ಜಿಪಂ ಉಪಾಧ್ಯಕ್ಷ ಸ್ಥಾನ, ಸಂಜೀವಿನಿ ಸಹಕಾರ ಆಸ್ಪತ್ರೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಸಾಕಷ್ಟು ಅಧಿಕಾರಗಳನ್ನು ಅವರಿಗೂ ಕೊಟ್ಟಿದ್ದೇವೆ. ನಾವು ಯಾರಿಗೂ ಏನು ಅನ್ಯಾಯ ಮಾಡಿಲ್ಲ. ರಾಜಕೀಯವಾಗಿ ಕಡೆಗಣಿಸಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಶಾಸಕರು ನಮ್ಮ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದ್ದು ಎಲ್ಲರಿಗೂ ಗೊತ್ತಿದೆ. ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಹಾಸನ ತಾಲೂಕಿನಲ್ಲಿ ನಮ್ಮ ಪಕ್ಷದ ಶಾಸಕರನ್ನು ಕಾಣಬೇಕಿದೆ. ಅದು ಆಗೋದು ನಿಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರು, ಜನರ ಅಪೇಕ್ಷೆಯಿದೆ. ನಾವೇನು ಹೋಗಿ ಯಾರ ಮೇಲೂ ಸ್ಪರ್ಧಿಸಬೇಕೆಂದು ಪಣ ತೊಟ್ಟವರಲ್ಲ ಎಂದು ಹೇಳಿದ್ದಾರೆ.

ಸಂಸದರ ಮನೆಗೆ ಕಾರ್ಯಕರ್ತರ ಭೇಟಿ

ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಸಂಸದ ಪ್ರಜ್ವಲ್‌ ರೇವಣ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಎಲ್ಲರೂ ಭವಾನಿ ರೇವಣ್ಣ ಅವರ ಪ್ಲೆಕಾರ್ಡ್‌ ಹಿಡಿದುಕೊಂಡು ಹೋಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದು, ಪ್ರತಿಭಟನೆಗೆ ವೇದಿಕೆಯನ್ನು ಸಹ ಸಿದ್ಧಪಡಿಸಲಾಗಿದೆ.

ದೇವರ ಮೊರೆ ಹೋದ ರೇವಣ್ಣ ಕುಟುಂಬ

ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಎಚ್.ಡಿ.ರೇವಣ್ಣ ಹಾಗೂ ಎ. ಮಂಜು, ಎ.ಟಿ. ರಾಮಸ್ವಾಮಿ ಮುಖಾಮುಖಿಯಾದರು. ಈ ಮೂಲಕ ಟಿಕೆಟ್‌ ಆಕಾಂಕ್ಷಿಗಳು ಜನಪ್ರತಿನಿಧಿಗಳು ದೇವರ ಮೊರೆ ಹೋಗಿದ್ದಾರೆ. ಈ ವೇಳೆ ಭವಾನಿ ರೇವಣ್ಣ ಅವರು ಈಡುಗಾಯಿ ಒಡೆದು ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ: Amit Shah : ಬಿವಿಬಿ ಕಾಲೇಜ್‌ ಕ್ಯಾಂಟೀನ್‌ ಬೋಂಡಾ ಸೂಪ್‌ ಫೇವರಿಟ್‌: ವಿದ್ಯಾರ್ಥಿ ಜೀವನವನ್ನು ನೆನೆದ ಸಿಎಂ ಬಸವರಾಜ ಬೊಮ್ಮಾಯಿ

ಪ್ರವಾಸ ಮುಂದುವರಿಸಿದ ಭವಾನಿ ರೇವಣ್ಣ

ಹಾಸನ ಕ್ಷೇತ್ರದಲ್ಲಿ ಈಗಾಗಲೇ ಪ್ರವಾಸ ಕೈಗೊಂಡಿರುವ ಭವಾನಿ ರೇವಣ್ಣ, ಶನಿವಾರವೂ ಸಹ ಸುತ್ತಾಟವನ್ನು ಮುಂದುವರಿಸಿದ್ದಾರೆ. ಆಟೋ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

Exit mobile version