Site icon Vistara News

Karnataka Election | ಮುಂದಿನ ಸಿಎಂ ದಲಿತ ಸಮಾಜದವರೇ ಆಗಬೇಕು: ಎಸ್‌ಸಿ, ಎಸ್‌ಟಿ ಗುರುಪೀಠಗಳ ಸ್ವಾಮೀಜಿಗಳ ನಿರ್ಣಯ

Karnataka Election

ಬೆಳಗಾವಿ: ರಾಜ್ಯದಲ್ಲಿ ಪಂಚಮಸಾಲಿ, ಒಕ್ಕಲಿಗರ ನಂತರ ತಮ್ಮ ಸಮುದಾಯದಲ್ಲಿನ ಪಂಗಡ, ಉಪಪಂಗಡಗಳನ್ನು ಒಗ್ಗೂಡಿಸಲು ಎಸ್‌ಸಿ, ಎಸ್‌ಟಿ ಗುರುಪೀಠಗಳ ಸ್ವಾಮೀಜಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಗರದ ಬಾಕ್ಸೈಟ್‌ ರಸ್ತೆಯ ನಕ್ಷತ್ರ ಲಾಂಜ್ ಸಭಾಗೃಹದಲ್ಲಿ ವಿವಿಧ ಸ್ವಾಮೀಜಿಗಳು, ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಒಕ್ಕೂಟದ ಸಭೆಯಿಂದ ʼಎಸ್‌ಸಿ, ಎಸ್‌ಟಿಗಳು ಏಕೆ ಒಂದಾಗಬೇಕು?ʼ ಎಂಬ ವಿಷಯದ ಕುರಿತು ಸಂವಾದ ಆಯೋಜಿಸಲಾಗಿತ್ತು. ಈ ವೇಳೆ ದಲಿತ ಸಮಾಜದವರನ್ನು ಮುಂದಿನ ಮುಖ್ಯಮಂತ್ರಿ(Karnataka Election) ಮಾಡಲು ಸ್ವಾಮೀಜಿಗಳು ಒಕ್ಕೊರಲಿನ ನಿರ್ಣಯ ಕೈಗೊಂಡರು.

ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರಾ ಗುರುಪೀಠದ ಸಂತ ಸೇವಾಲಾಲ್‌ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಹಾಗೂ ದಲಿತ ಸಮಾಜದ ಅನೇಕ ಮುಖಂಡರು ಭಾಗಿಯಾಗಿದ್ದರು. ಸಭೆಯ ಬಳಿಕ ಮಾಜಿ ಸಚಿವ ರಮೇಶ ಜಾರಕಿಹೊಳಿ, ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರನ್ನು ಸ್ವಾಮೀಜಿಗಳು ಭೇಟಿಯಾಗಿ ಮಾತುಕತೆ ನಡೆಸಿದರು.

ಇದನ್ನೂ ಓದಿ | Karnataka election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಆ್ಯಕ್ಟಿವ್; ಎಲೆಕ್ಷನ್‌ ಗೆಲ್ಲಲು ಮರಾಠ ಅಸ್ತ್ರ

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯ 101 ಉಪಜಾತಿಗಳು, ಪರಿಶಿಷ್ಟ ಪಂಗಡದ 50 ಉಪಜಾತಿಗಳೆಲ್ಲವೂ ಒಂದೇ ಒಕ್ಕೂಟದಲ್ಲಿ ತರುವ ಅಭಿಪ್ರಾಯ ವ್ಯಕ್ತವಾಯಿತು. ರಾಜ್ಯದಲ್ಲಿ 2 ಕೋಟಿಯಷ್ಟು ಪರಿಶಿಷ್ಟರು ಇದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಒಬ್ಬರನ್ನು ಮುಖ್ಯಮಂತ್ರಿ ಮಾಡಲೇಬೇಕೆಂದು ಸಂಕಲ್ಪ ಮಾಡಲಾಯಿತು. ನಾವು ಯಾರಿಗೆ ಹೇಳುತ್ತೇವೋ ಅವರಿಗೆ ಮತ ಚಲಾಯಿಸಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಮತಗಳು ಚದುರಿಹೋಗದಂತೆ ಎಚ್ಚರಿಕೆ ವಹಿಸಲು ಮಠಾಧಿಪತಿಗಳು ಎಚ್ಚರಿಕೆ ನೀಡಿದರು.

ಪರಿಶಿಷ್ಟರಿಗೂ ಅಧಿಕಾರ ಸಿಗಲಿ ಎಂದು ಅಂಬೇಡ್ಕರ್ ಸಂವಿಧಾನ ರಚಿಸಿದರು. ಸಂವಿಧಾನ ಅಂಗೀಕಾರವಾಗಿ 7 ದಶಕಗಳೇ ಕಳೆದರೂ ದಲಿತರಿಗೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ದಲಿತ ಸಮಾಜದವರು ಸಿಎಂ ಆದರೆ ಸಂವಿಧಾನದ ಉದ್ದೇಶ ಈಡೇರುವುದು ಎಂದು ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. 36 ಕ್ಷೇತ್ರ ಪರಿಶಿಷ್ಟ ಜಾತಿ, 15 ಕ್ಷೇತ್ರ ಪರಿಶಿಷ್ಟ ಪಂಗಡ ಸೇರಿ ಸೇರಿ ರಾಜ್ಯದಲ್ಲಿ 51 ಮೀಸಲು ಕ್ಷೇತ್ರಗಳು ಇವೆ. ಇನ್ನೂ 58 ಕ್ಷೇತ್ರಗಳಲ್ಲಿ ದಲಿತ ಮತಗಳೇ ಹೆಚ್ಚಾಗಿದ್ದು, ಅಲ್ಲಿಯೂ ಗೆಲ್ಲಲು ಅವಕಾಶ ಇದೆ. ಈಗ ಎಲ್ಲ ಪರಿಶಿಷ್ಟ ಮಠಾಧೀಶರೂ ಒಂದಾಗಿದ್ದೇವೆ, ಮುಂದೆ ಹಿಂದುಳಿದ ವರ್ಗದ ಪೀಠಾಧಿಪತಿಗಳೂ ಸೇರುತ್ತಾರೆ. ಪರಿಶಿಷ್ಟ–ಹಿಂದುಳಿದ ಮಠಾಧೀಶರ ಮೂಲಕ ಮಹಾನ್‌ ಸಂಘಟನೆ ಮಾಡಿ ಶ್ರೇಷ್ಠ ಸಂವಿಧಾನದ ಮೂಲಕ ಚುನಾವಣೆಗೆ ಸಿದ್ಧತೆ ಮಾಬೇಕು ಎಂದು ಸ್ವಾಮೀಜಿಗಳು ತಿಳಿಸಿದರು.

24 ಬೇಡಿಕೆ ಈಡೇರಿಸಲು ಆಗ್ರಹಿಸಿ ಜನಜಾಗೃತಿ
ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ‌ಮಾತನಾಡಿ, ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸ್ವಾಮೀಜಿಗಳ ಸ್ವಾಭಿಮಾನಿ ಒಕ್ಕೂಟ ರಚನೆ ಮಾಡಿದ್ದೇವೆ. 25 ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಎಸ್‌ಸಿ, ಎಸ್‌ಟಿಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದೆ. ಇನ್ನಳಿದ 24 ಬೇಡಿಕೆ ಈಡೇರಿಸಲು ಆಗ್ರಹಿಸಿ ಜನ ಜಾಗೃತಿ ಮಾಡಲಾಗುತ್ತಿದೆ. ಸಮುದಾಯದವರು ಒಂದಾಗಬೇಕು ಎಂದು ಚರ್ಚೆ ಮಾಡಿದ್ದೇವೆ. ಈ ಸಂಬಂಧ ಔಪಚಾರಿಕವಾಗಿ ಜಾರಕಿಹೊಳಿ ಸಹೋದರರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ನಾವೆಲ್ಲರೂ ನಿಮ್ಮ ಪರವಾಗಿ ಇದ್ದೇವೆ ಎಂದು ನೈತಿಕ ಧೈರ್ಯ ತುಂಬಿದ್ದೇವೆ ಎಂದರು.

ಸಂವಿಧಾನ ಅಂಗೀಕಾರ ಆಗಿ 7 ದಶಕ ಕಳೆದಿದೆ. ಶಾಸನ ಮಾಡುವ ಜಾಗದಲ್ಲಿ ನಮ್ಮ ಸಮುದಾಯದವರು ಇಲ್ಲ. ಹೀಗಿದ್ದಲ್ಲಿ ಅದು ಹೇಗೆ ಪ್ರಜಾಪ್ರಭುತ್ವ ಆಗುತ್ತದೆ. 2023ರ ಚುನಾವಣೆಯಲ್ಲಿ ಎಸ್‌ಸಿ ಎಸ್‌ಟಿಗಳೇ ಮುಖ್ಯಮಂತ್ರಿ ಆಗಬೇಕು. ನಮ್ಮವರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ನಾವೆಲ್ಲರೂ ಬಹುಮತ ಉಳ್ಳವರು, ಹೀಗಾಗಿ ನಮ್ಮ ಸಮಾಜದವರೇ ಸಿಎಂ ಆಗಬೇಕು ಎಂದು ಹೇಳಿದ ಅವರು, ಸಮಾಜದವರೆಲ್ಲರೂ ಒಗ್ಗಟ್ಟಾಗಿದ್ದೇವೆ, ಇನ್ನು ಮುಂದೆ ಪ್ರಜಾಪ್ರಭುತ್ವ ನಿರ್ಮಾಣ ಮಾಡುತ್ತೇವೆ ಎಂದರು.

ಜನರ ಆಶೀರ್ವಾದ ಜಾರಕಿಹೊಳಿ ಕುಟುಂಬದ ಮೇಲಿದೆ
ಸ್ವಾಮೀಜಿಗಳ ಜತೆ ಸಭೆ ಬಳಿಕ ಎಂಎಲ್‌ಸಿ ಲಖನ್ ಜಾರಕಿಹೊಳಿ ಮಾತನಾಡಿ, ಪರಿಶಿಷ್ಟ ಸಮುದಾಯದ ಸ್ವಾಮೀಜಿಗಳ ಜತೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಚುನಾವಣೆಗೆ ‌6 ತಿಂಗಳು ‌ಇರುವಾಗ ಜಾರಕಿಹೊಳಿ ಸಹೋದರರ ಬಗ್ಗೆ ಅಪ್ರಚಾರವಾಗುತ್ತಿದೆ. ಒಳ್ಳೆಯ ಕೆಲಸ ಯಾರು ಮಾಡಿದ್ದಾರೆ ಎಂಬುದನ್ನು ನೋಡಿ ಗೆಲ್ಲಿಸಬೇಕೋ ಬೇಡವೋ ಎಂದು ಜನರೇ ತೀರ್ಮಾನ ಮಾಡುತ್ತಾರೆ. ಭಾಷಣ ಮಾಡುವವರು ಯಾರೂ ಈ ಬಗ್ಗೆ ತೀರ್ಮಾನ ಮಾಡಲ್ಲ. ಜನರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇದೆ ಎಂದರು.

ಇದನ್ನೂ ಓದಿ | Congress Padayatra | ಕಾಂಗ್ರೆಸ್‌ ಸರ್ಕಾರ ಬಂದ್ರೆ ಯಾವೊಬ್ಬ ರೈತನನ್ನೂ ಒಕ್ಕಲೆಬ್ಬಿಸಲು ಬಿಡಲ್ಲ: ಡಿ.ಕೆ.ಶಿವಕುಮಾರ್‌

Exit mobile version