Site icon Vistara News

Karnataka Election : ಬಂಟ್ವಾಳದಲ್ಲಿ ಫೀಲ್ಡಿಗಿಳಿದ ಮೋದಿ-ಅಮಿತ್ ಶಾ ರೋಡ್ ಶೋ ರಥ!

ನರೇಂದ್ರ ಮೋದಿ - ಅಮಿತ್‌ ಶಾ ರೋಡ್‌ ಶೋ ವಾಹನ ಬಂಟ್ವಾಳ

ಮಂಗಳೂರು: 2023ರ ವಿಧಾನಸಭಾ ಚುನಾವಣಾ (Karnataka Election) ಕಣ ರಂಗೇರುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಇದರ ಭಾಗವಾಗಿ ಈಗ ಬಂಟ್ವಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರೋಡ್ ಶೋ ರಥವು ಬೀದಿಗಿಳಿದಿದೆ.

ಇದು ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದ್ದ ವಾಹನ ಎಂದು ಹೇಳಲಾಗಿದೆ. ಇಸುಜು (ISSUZE) ಕಂಪನಿಯ ಬಾರೀ ಮೊತ್ತದ ಕಾರಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಇದಕ್ಕೆ ಬಂಟ್ವಾಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶನಿವಾರ (ಜ.೧೪) ಚಾಲನೆ ನೀಡಿದರು.

ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು, ಶನಿವಾರದಿಂದ ಜ.26ರ ವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಯಲಿದೆ. ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಇದಾಗಿದೆ.

ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೇ ನಿಮಿಷಾಂಬಾ ದೇವಿ ಹರಕೆ ತೀರಿಸಿದ ಎಡಿಜಿಪಿ ಅಲೋಕ್‌ ಕುಮಾರ್‌

ಗುಜರಾತ್‌ ಚುನಾವಣೆಗೆ ಬಳಕೆಯಾಗಿತ್ತು
ಈ ಕಾರಿನಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರು ಗುಜರಾತ್‌ನಲ್ಲಿ ರೋಡ್ ಶೋ ಮಾಡಿದ್ದರು. ಇದರಲ್ಲಿ ಮೋದಿ, ಶಾ, ನಡ್ಡಾ ಸಹಿತ ಬಿಜೆಪಿ ಪ್ರಮುಖರ ಭಾವಚಿತ್ರವನ್ನು ಹಾಕಲಾಗಿದೆ. ರಾತ್ರಿ ವೇಳೆ ಬಹಿರಂಗ ಸಭೆ ನಡೆಸಲು ವಾಹನದಲ್ಲಿ ಧ್ವನಿವರ್ಧಕ ಸಹಿತ ಪೂರಕ ವ್ಯವಸ್ಥೆಯನ್ನು ಮಾಡಲಾಗಿದೆ.

ಜನಪರ ಶಾಸಕರ ಅವಶ್ಯಕತೆ ಇದೆ- ಕಟೀಲ್‌
ಇಂದು ಜನಪ್ರಿಯ ಶಾಸಕರ ಅವಶ್ಯಕತೆ ಇಲ್ಲ. ಜನಪರ ಶಾಸಕರ ಅವಶ್ಯಕತೆ ಇದೆ. ಒಂದು ಬಾರಿ ಗೆದ್ದ ತಕ್ಷಣವೇ ಕೆಲವರು ಜನಪ್ರಿಯ ಅಂತ ಹೇಳುತ್ತಾರೆ. ಆದರೆ, ರಾಜೇಶ್ ನಾಯ್ಕ್ ಜಿಲ್ಲೆಯ ಒಬ್ಬ ಜನಪರ ಶಾಸಕರಾಗಿದ್ದಾರೆ. ನನ್ನ ರಾಜಕೀಯ ಪ್ರವೇಶ, ರಾಜಕೀಯ ಚಟುವಟಿಕೆ ಎಲ್ಲವೂ ಬಂಟ್ವಾಳದಿಂದ ಆಗಿದೆ. ಬಂಟ್ವಾಳದಲ್ಲಿ ಶರತ್ ಹತ್ಯೆ, ಕಲ್ಲಡ್ಕ ಗಲಭೆ, ಕಲ್ಲಡ್ಕ ಮಕ್ಕಳ ಹೊಟ್ಟೆಗೆ ಒಡೆಯುವ ಕೆಲಸವು ಕಾಂಗ್ರೆಸ್ ಅವಧಿಯಲ್ಲಿ ಆಯಿತು. ಆದರೆ ಇಂದು ಬಂಟ್ವಾಳದಲ್ಲಿ ಮನೆ ಮನೆಗೆ ಅನ್ನ ನೀಡುವ ಕೆಲಸ ಆಗುತ್ತಿದೆ. ಬಂಟ್ವಾಳದಲ್ಲಿ ಹಿಂದಿನ ಗೂಂಡಾಗಿರಿ ರಾಜಕಾರಣ ನಿಂತು ಹೋಗಿದೆ. ಸ್ಯಾಂಡ್ ಮಾಫಿಯಾ, ಲ್ಯಾಂಡ್ ಮಾಫಿಯಾ ಸಂಪೂರ್ಣ ನಿಂತಿದೆ. ಕೋಮು ಭಾವನೆ ಕೆರಳಿಸುವ ಕೆಲಸ ನಿಂತಿದೆ, ಕೋಮಿನ ತುಷ್ಟೀಕರಣವೂ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕಾಂಗ್ರೆಸ್ ಈ ದೇಶಕ್ಕೆ ಭ್ರಷ್ಟಾಚಾರವಾದ, ಪರಿವಾರವಾದ ಮತ್ತು ಆತಂಕವಾದವನ್ನು ಕೊಡುಗೆಯಾಗಿ ಕೊಟ್ಟಿದೆ. ಗಾಂಧಿ ಕುಟುಂಬದ ಹೆಸರಿನಲ್ಲಿ ದೇಶದಲ್ಲಿ ರಾಜಕಾರಣ ‌ಮಾಡಿದ್ದಾರೆ. ಭಯೋತ್ಪಾದನೆಯ ಇನ್ನೊಂದು ‌ಹೆಸರು ಕಾಂಗ್ರೆಸ್ ಆಗಿದೆ. ಇಂದಿರಾ ಗಾಂಧಿ ಈ ದೇಶದಲ್ಲಿ ಭಯೋತ್ಪಾದನೆಗೆ ಪ್ರೇರಣೆಯಾಗಿ ನಿಂತರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಅಂದದ್ದು ದೊಡ್ಡ ವಿವಾದ ಆಯಿತು. ಅವರಿಗೆ ಮಂಗಳೂರು ‌ಮತ್ತು ಬೆಳಗಾವಿ ಕುಕ್ಕರ್ ಮೇಲೆ ಪ್ರೀತಿ ಎಂದು ಹೇಳಿದ್ದೆ. ಆದರೆ, ಕುಕ್ಕರ್ ಬ್ಲಾಸ್ಟ್ ಕೇಸ್‌ನ ಲಿಂಕ್‌ನಲ್ಲಿ ಉಡುಪಿ ಕಾಂಗ್ರೆಸ್ ‌ಪ್ರಧಾನ ಕಾರ್ಯದರ್ಶಿ ಮಗನ ಬಂಧನ ಆಗಿದೆ. ಉಳ್ಳಾಲದಲ್ಲಿ ‌ಮಾಜಿ ಶಾಸಕರ ಸೊಸೆಯನ್ನು ಐಸಿಸ್ ಲಿಂಕ್‌ನಲ್ಲಿ ಬಂಧಿಸಲಾಗಿದೆ. ಕಾಂಗ್ರೆಸ್ ಕುಟುಂಬದವರನ್ನೇ ಟೆರರ್ ಲಿಂಕ್‌ನಲ್ಲಿ ಬಂಧಿಸಿ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ, ಇದರ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿಯವರೇ ನೀವು ಪವರ್ ಮಿನಿಸ್ಟರ್ ಆದಾಗ ಕೃಷಿಕರ ಪಂಪ್‌ಸೆಟ್‌ಗಳಿಗೆ ಹತ್ತು ಸಾವಿರ ರೂಪಾಯಿ ಶುಲ್ಕ ಹಾಕಿದ್ದೀರಿ. ಸುಳ್ಯದ ಬೆಳ್ಳಾರೆಯ ಯುವಕ ಕರೆಂಟ್ ಕೇಳಿದ್ದಕ್ಕೆ ರಾತ್ರೋರಾತ್ರಿ ಜೈಲಿಗೆ ಹಾಕಿಸಿದ್ದಿರಿ. ಈಗ ಉಚಿತ ವಿದ್ಯುತ್ ಕೊಡುವ ಭರವಸೆ ಕೊಡುತ್ತಾ ಇದ್ದೀರಾ? ನೀವು ಈ ರಾಜ್ಯಕ್ಕೆ ಕೊಟ್ಟಿದ್ದು ಕೊಲೆ ಭಾಗ್ಯ ಮಾತ್ರ. 2023ರಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಹುಡಿಯಾಗುತ್ತೆ. ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ. ಇಲ್ಲಿ ಸಚಿವ ಸ್ಥಾನಕ್ಕೆ ಸೂಟ್ ಹೊಲಿಸಿದವರು ನಿರುದ್ಯೋಗಿ ಆಗುತ್ತಾರೆ ಎಂದು ಕಟೀಲ್‌ ವ್ಯಂಗ್ಯವಾಡಿದರು.

ಇದನ್ನೂ ಓದಿ | Naatu Naatu | ‘ನಾಟು ನಾಟು’ ಅಲ್ಲ, ’ನೋ ಟು ನೋ ಟು’; ವಿಶೇಷ ರೀತಿಯಲ್ಲಿ ಎಚ್ಚರಿಕೆ ಕೊಟ್ಟ ಜೈಪುರ ಪೊಲೀಸರು

Exit mobile version