ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಜೋರಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಬಿಜೆಪಿ ಜಾತಿ ಸಮಾವೇಶ, ಸಂಕಲ್ಪ ಯಾತ್ರೆಗಳ ಮೂಲಕ ಸದ್ದು ಮಾಡುತ್ತಿದ್ದರೆ, ಭಾರತ್ ಜೋಡೋ ಯಾತ್ರೆಯ ಮೂಲಕ ಹುಡಿ ಹಾರಿಸಿದ್ದ ಕಾಂಗ್ರೆಸ್ ಈಗ ಪ್ರಜಾ ಧ್ವನಿ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆಗೆ ರೆಡಿಯಾಗಿದೆ. ಈ ಬಸ್ ಯಾತ್ರೆಯ ನಡುವೆಯೇ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ರಾಜ್ಯದಲ್ಲಿ ಜನವರಿ ೧೧ರಿಂದ ಬಸ್ ಯಾತ್ರೆ ಆರಂಭವಾಗಲಿದ್ದು, ಇದರ ಬಗ್ಗೆ ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಿಯಾಂಕಾ ಗಾಂಧಿ ಅವರ ರಾಜ್ಯ ಪ್ರವಾಸವನ್ನು ಪ್ರಕಟಿಸಿದರು. ಜನವರಿ ೧೬ಕ್ಕೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸಲಿದ್ದು, ಅಂದು ಬೃಹತ್ ಸಮಾವೇಶವೊಂದನ್ನು ಆಯೋಜಿಸಬೇಕು, ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಸೇರಿಸಬೇಕು ಎಂದು ಅವರು ಹೇಳಿದರು.
ಪ್ರಿಯಾಂಕಾ ಗಾಂಧಿ ಅವರು ಇದುವರೆಗೆ ಉತ್ತರ ಭಾರತದ ರಾಜಕೀಯದ ವಿಚಾರದಲ್ಲಷ್ಟೇ ಹೆಚ್ಚು ಸಕ್ರಿಯರಾಗಿದ್ದರು. ಕಳೆದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಅವರು ಮಾಡಿದ ಪ್ಲ್ಯಾನ್‌ಗಳು ಸಕ್ಸೆಸ್ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೇಡಿಕೆ ಬಂದಿದೆ. ಹೀಗಾಗಿ ಪ್ರಿಯಾಂಕಾ ಆಗಮನ ರಾಜ್ಯ ಕಾಂಗ್ರೆಸ್‌ನಲ್ಲೂ ಸಂಚಲನ ಮೂಡಿಸಲಿದೆ.
ಬಿಜೆಪಿಯಂತೆ ಬೂತ್ ಪಾಲಿಟಿಕ್ಸ್
ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಮ್ಮ ಭಾರತ ಜೋಡೋ ಬಳಿಕ ಬೇರೆಯವರು ಬೂತ್ ಜೋಡೋ ಶುರು ಮಾಡಿದ್ದಾರೆ. ನಾವು ಬಸ್ ಯಾತ್ರೆಯನ್ನು ಯಶಸ್ವಿಗೊಳಿಸಬೇಕು. ನಾವು ಆ ಅಭಿಯಾನದ ಮೂಲಕ ಬೂತ್ ಮಟ್ಟವನ್ನು ತಲುಪಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್ ಬಸ್ ಯಾತ್ರೆ ಹೇಗೆ? ಎಲ್ಲಿ?
ಜನವರಿ 1೧ರಿಂದ ಬಸ್ ಯಾತ್ರೆ ಎರಡು ತಂಡಗಳಲ್ಲಿ ನಡೆಯಲಿದೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದ ತಂಡ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ತಂಡ ಯಾತ್ರೆ ಕೈಗೊಳ್ಳಲಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಸಂಸದ ಜಿ. ಸಿ. ಚಂದ್ರಶೇಖರ ಅವರು ದಕ್ಷಿಣ ಕರ್ನಾಟಕ ಭಾಗದಲ್ಲಿ ಬಸ್ ಯಾತ್ರೆಯ ಸಂಯೋಜಕರಾಗಿದ್ದು ಮಾಜಿ ಸಚಿವ ಬಸವರಾಜ ರಾಯ ರೆಡ್ಡಿ ಅವರು ಉತ್ತರ ಕರ್ನಾಟಕ ಭಾಗದ ಪ್ರವಾಸದ ಸಂಯೋಜಕರಾಗಿದ್ದಾರೆ.
ಪ್ರವಾಸದ ಪಟ್ಟಿ
ಕಾಂಗ್ರೆಸ್ ಬಸ್ ಯಾತ್ರೆಯು ಜನವರಿ 11ರಂದು ಬೆಳಗ್ಗೆ 8.30ಕ್ಕೆ ಬೆಳಗಾವಿಯಿಂದ ಪ್ರಾರಂಭಗೊಂಡು ಚಿಕ್ಕೋಡಿಗೆ ತೆರಳಲಿದೆ. ಚಿಕ್ಕೋಡಯಲ್ಲಿ ಸಭೆ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿಯಿಂದ ಹೊರಟು 4 ಗಂಟೆಗೆ ಬೆಳಗಾವಿ ತಲುಪಿ ಬೆಳಗಾವಿಯಲ್ಲಿ ಸಭೆ ಹಮ್ಮಿಕೊಳ್ಳಲಾಗುತ್ತದೆ.
ಜ.12ರಿಂದ 16ರವರೆಗೆ ಬಸ್ ಯಾತ್ರೆಗೆ ಬಿಡುವು ನೀಡಲಾಗಿದ್ದು ಜ.17ರ ಬೆಳಗ್ಗೆ 10 ಗಂಟೆಗೆ ಹೊಸಪೇಟೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ಕೊಪ್ಪಳಕ್ಕೆ ತೆರಳಲಿದ್ದು 4 ಗಂಟೆಯ ಬಳಿಕ ಕೊಪ್ಪಳದಲ್ಲಿ ಸಭೆ ನಡೆಸಲಾಗುತ್ತದೆ. ಕೊಪ್ಪಳದಿಂದ ಬಾಗಲಕೋಟೆಗೆ ರಾತ್ರಿ ತೆರಳಲಿದೆ.
ಬಾಗಲಕೋಟೆಯಲ್ಲಿ ಜ.18ರಂದು ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಗದಗಕ್ಕೆ ತೆರಳಲಿದೆ. ಗದಗದಲ್ಲಿ ಸಂಜೆ 4 ಗಂಟೆಗೆ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲಿಂದ ಬಸ್ ಯಾತ್ರೆ ಹುಬ್ಬಳ್ಳಿಗೆ ತೆರಳುವುದು.
ಜ.19ರಂದು ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ಹಾವೇರಿ ತಲುಪಿ ಹಾವೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಜನವರಿ 20ರಂದು ಯಾತ್ರೆಗೆ ಬಿಡುವು ನೀಡಲಾಗಿದೆ.
ಜ.21ರಂದು ಬೆಂಗಳೂರಿನಿಂದ ಹೊರಟು ಬೆಳಗ್ಗೆ 10 ಗಂಟೆಗೆ ಹಾಸನ ತಲುಪಿ ಹಾಸನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುತ್ತದೆ. ಹಾಸನದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಸಂಜೆ 4 ಗಂಟೆಗೆ ಚಿಕ್ಕಮಗಳೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಂಗಳೂರಿಗೆ ತೆರಳಲಿದೆ.
22ರಂದು ಬೆಳಗ್ಗೆ ಮಂಗಳೂರಿನಿಂದ ಹೊರಟು ಉಡುಪಿ ತಲುಪಲಿದ್ದು ಉಡುಪಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿಂದ ಮರಳಿ ಮಂಗಳೂರಿಗೆ ತೆರಳಿ ಸಂಜೆ 4 ಗಂಟೆಗೆ ಮಂಗಳೂರಿನಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುತ್ತದೆ.
23ರಂದು ಬೆಳಗ್ಗೆ 10 ಗಂಟೆಗೆ ಕೋಲಾರದಲ್ಲಿ ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.
24ರಂದು ಬೆಳಗ್ಗೆ 10 ಗಂಟೆಗೆ ತುಮಕೂರು ಹಾಗೂ ಸಂಜೆ 4 ಗಂಟೆಗೆ ದೊಡ್ಡ ಬಳ್ಳಾಪುರದಲ್ಲಿ ಸಭೆ ನಡೆಯಲಿದೆ.
26ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜ ನಗರ, ಸಂಜೆ 4 ಗಂಟೆಗೆ ಮೈಸೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
27ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ, ಸಂಜೆ 4 ಗಂಟೆಗೆ ರಾಮನಗರದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
28ರಂದು ಮಧ್ಯಾಹ್ನ 12 ಗಂಟೆಗೆ ಯಾದಗಿರಿ ಹಾಗೂ ಸಂಜೆ 5 ಗಂಟೆಗೆ ಬೀದರ್‍ನಲ್ಲಿ ಸಭೆ ನಡೆಯಲಿದೆ.
ಇದನ್ನೂ ಓದಿ | Karnataka Election : ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ: ಸಿದ್ದರಾಮಯ್ಯ ಕಿಡಿ