Site icon Vistara News

Karnataka Election | ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭ; ಜನಾರ್ದನ ರೆಡ್ಡಿ ಪಾಳಯಕ್ಕೆ ಜಿಗಿತ

bellary party news ಬಳ್ಳಾರಿಯಲ್ಲಿ ರಾಜೀನಾಮೆ ಪರ್ವ ಜನಾರ್ದನ ರೆಡ್ಡಿ

ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಹೊಸ ಪಕ್ಷ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ದಿಂದಾಗಿ ಬಿಜೆಪಿಯಲ್ಲಿ ಆತಂಕ ಶುರುವಾಗಿದೆ. ಮಂಗಳವಾರ (ಡಿ.೨೭ರಂದು) ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ದಮ್ಮೂರು ಶೇಖರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ರಾಜೀನಾಮೆ ಪರ್ವವೂ ಆರಂಭವಾದಂತಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಪಕ್ಷ ನಡೆಸಿಕೊಂಡಿರುವ ರೀತಿಯಿಂದ ಬೇಸತ್ತು, ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ರೆಡ್ಡಿಯವರ ಪ್ರಮುಖ ಪಾತ್ರ ವಹಿಸಿದ್ದರೆಂದು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಸ್ತಾಪಿಸಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾಹರಿಗೌಡ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ನೀಡಿದ್ದರು. ಈ ರಾಜೀನಾಮೆಯನ್ನು ಅಧ್ಯಕ್ಷರು ಅಂಗೀಕರಿಸಿದ್ದಾರೆ.

ದಮ್ಮೂರು ಶೇಖರ್ ಅವರು ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ರಾಜ್ಯ ಬಿಜೆಪಿ ಯುವ ಮೋರ್ಚ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿಯೂ ಈ ಹಿಂದೆ ಕೆಲಸ ಮಾಡಿದ್ದರು.

ಇದನ್ನೂ ಓದಿ | Karnataka Politics | ಕಾಂಗ್ರೆಸ್ ಮೊದಲ ಅಧಿವೇಶನದ ರಾಜ್ಯದ ಪ್ರತಿನಿಧಿ ಬಳ್ಳಾರಿಯವರು!

ಚಂದ್ರು ರಾಜೀನಾಮೆ
ಬುಧವಾರ (ಡಿ.೨೮) ಬಳ್ಳಾರಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಪಾಲಿಕೆ ಸದಸ್ಯ ಚಂದ್ರು ಅವರು ಬಿಜೆಪಿ ಪಕ್ಷದಲ್ಲಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಈ ಹಿಂದೆ ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾಗಿದ್ದರು.

ಹೊಸ ಪಕ್ಷದ ಬಗ್ಗೆ ಆಸಕ್ತಿ, ಕರೆ
ಕೆಲವೊಬ್ಬರು ಜನಾರ್ದನ ರೆಡ್ಡಿ ಅವರನ್ನು ಖುದ್ದಾಗಿ ಭೇಟಿ ಮಾಡಿ, ತಮ್ಮ ಪಕ್ಷಕ್ಕೆ ನಾವು ಬರುತ್ತೇವೆ ಎಂದು ಹೇಳುತ್ತಿದ್ದಾರೆ, ಇನ್ನೊಂದು ಕಡೆ ಕೆಲವೊಬ್ಬ ಮುಖಂಡರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನದ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ. ಇನ್ನು ಯಾರು ಯಾರು ರಾಜೀನಾಮೆ ನಿಡುತ್ತಾರೆಂಬ ಆತಂಕ ಬಿಜೆಪಿ ವಲಯದಲ್ಲಿ ಶುರುವಾಗಿದೆ.

ಜ.೧೧ರಂದು ಬಳ್ಳಾರಿಯಲ್ಲಿ ಸಮಾವೇಶ?
ಜನವರಿ 11ರಂದು ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬ ಇರುವುದರಿಂದ ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆಂದು ಹೇಳಲಾಗುತ್ತಿದೆ. ರೆಡ್ಡಿ ಬಳ್ಳಾರಿಗೆ ಬರುವುದಕ್ಕೆ ನಿರ್ಬಂಧ ಇರುವುದರಿಂದ ಅವರ ಪತ್ನಿ ಅರುಣಾ ಲಕ್ಷ್ಮಿ ನೇತೃತ್ವದಲ್ಲಿ ಸಮಾವೇಶ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ, ಅರುಣಾ ಲಕ್ಷ್ಮಿ ಅವರು ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ಅವರೇ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಜನಾರ್ದನ ರೆಡ್ಡಿ ಅವರು ವರ್ಚ್ಯುವಲ್ ಮೂಲಕ ಪಕ್ಷದ ಹೆಸರು ಘೋಷಣೆ ಜತೆಗೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Ramanagara | ಅಶ್ವತ್ಥನಾರಾಯಣ ಮಂದಿರವನ್ನು ಕಟ್ಟಲಿ ಎಂದ ಡಿಕೆಶಿ; ಅವರಿಗೂ ರಾಮನಗರಕ್ಕೂ ಸಂಬಂಧ ಏನು ಎಂದ ಎಚ್‌ಡಿಡಿ

Exit mobile version