Site icon Vistara News

Karnataka Election Result : ಇದು ಮೋದಿಯ ಸೋಲು ಎಂದು ಪ್ರತಿಪಕ್ಷಗಳ ಸಂಭ್ರಮ

#image_title

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election Result) ಮತ ಎಣಿಕೆ ನಡೆಯುತ್ತಿದೆ. ಕಾಂಗ್ರೆಸ್‌ ಬಹುತೇಕ ಸ್ಪಷ್ಟ ಬಹುಮತ ಸಾಧಿಸಿಕೊಳ್ಳುತ್ತಿದ್ದು, ಬಿಜೆಪಿ ಅತ್ಯಂತ ಹೀನಾಯವಾಗಿ ಸೋಲು ಕಾಣುತ್ತಿದೆ. ರಾಜ್ಯಾದ್ಯಂತ ಈಗಾಗಲೇ ಕಾಂಗ್ರೆಸ್‌ ನಾಯಕರು ಸಂಭ್ರಮಿಸಲಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ಕೇಂದ್ರದಲ್ಲೂ ವಿರೋಧ ಪಕ್ಷಗಳ ನಾಯಕರು ಸಂಭ್ರಮದಲ್ಲಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಸೋಲು ಎಂದು ಹೀಯಾಳಿಸಲಾರಂಭಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿರುವ ಜೈರಾಮ್‌ ರಮೇಶ್‌ ಅವರು ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಕರ್ನಾಟಕದಲ್ಲಿ ಫಲಿತಾಂಶ ದೃಢವಾಗುತ್ತಿದ್ದಂತೆ ಕಾಂಗ್ರೆಸ್ ಗೆದ್ದು ಪ್ರಧಾನಿ ಸೋಲುವುದು ಖಚಿತವಾಗಿದೆ. ಬಿಜೆಪಿಯು ಪ್ರಧಾನಿ ಮೋದಿ ಅವರನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿತ್ತು. ಆದರೆ ಜನರು ಅದನ್ನು ತಿರಸ್ಕರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Election result 2023: ಕೊಡಗಿನ ಬಿಜೆಪಿ ಭದ್ರಕೋಟೆ ಛಿದ್ರ; ಎರಡೂ ಕಡೆ ಕಾಂಗ್ರೆಸ್‌
“ಕಾಂಗ್ರೆಸ್‌ ಪಕ್ಷವು ಸ್ಥಳೀಯ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತು. ಜೀವನೋಪಾಯ ಮತ್ತು ಆಹಾರ ಭದ್ರತೆ, ಬೆಲೆ ಏರಿಕೆ, ರೈತರ ಸಂಕಷ್ಟ, ವಿದ್ಯುತ್ ಪೂರೈಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿಚಾರವನ್ನೇ ಜನರ ಮುಂದಿಟ್ಟಿತು. ಈ ಗೆಲುವು ಬೆಂಗಳೂರಿನಲ್ಲಿ ಸಾಮಾಜಿಕ ಸಾಮರಸ್ಯದೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಸಂಯೋಜಿಸುವ ಎಂಜಿನ್‌ ಆಗಿದೆ” ಎಂದು ಹೇಳಿದ್ದಾರೆ.

ಹಾಗೆಯೇ ಕಾಂಗ್ರೆಸ್‌ನ ಮಾಜಿ ನಾಯಕಿ ಮತ್ತು ಉದ್ಧವ್‌ ಸೇನಾದ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದಾರೆ. “ಕರ್ನಾಟಕದಲ್ಲಿ ಪ್ರಧಾನಿ ಅವರ ಪ್ರಚಾರಕ್ಕೆ ಬಜರಂಗ ಬಲಿ ಕೂಡ ಬೆಂಬಲಿಸಿಲ್ಲ. ಇದನ್ನು ಜೆಪಿ ನಡ್ಡಾ ಮತ್ತು ಬೊಮ್ಮಾಯಿ ಅವರ ಸೋಲು ಎಂದು ಮಾಧ್ಯಮದವರು ತೋರಿಸಬಹುದು. ಆದರೆ ಇದು ಪ್ರಧಾನಿ ಮೋದಿ ಅವರದ್ದೇ ಸೋಲು. ಏಕೆಂದರೆ ಪೂರ್ತಿ ಪ್ರಚಾರ ಅವರದೇ ಆಗಿತ್ತು” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

Exit mobile version