ಬೆಂಗಳೂರು: ಇವತ್ತಿನ ಫಲಿತಾಂಶದ (Karnataka Election Results 2024) ಆಧಾರದ ಮೇಲೆ ಸ್ವಾರ್ಥದ ರಾಜಕಾರಣ ಮಾಡಬಾರದು ಎಂಬುವುದು ತಿಳಿಯುತ್ತದೆ. ಹಾಸನದಲ್ಲಿ ಗೆದ್ದಿರುವುದು ಕಾಂಗ್ರೆಸ್‌ನ ಗೆಲುವಲ್ಲ. ಹಾಸನದಲ್ಲಿ ದೇವೇಗೌಡರ ಫ್ಯಾಮಿಲಿ ಯಾವತ್ತೂ ದಬ್ಬಾಳಿಕೆ ಮಾಡಿಲ್ಲ. ಕೆಲವು ವ್ಯಕ್ತಿಗಳ ನಡವಳಿಕೆಯಿಂದ ಸೋಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೇ ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿ, ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿ ಸರ್ಕಾರ ರಚನೆಯಾಗುತ್ತೆ. ನಾಳೆ ಎನ್‌ಡಿಎ ಮೈತ್ರಿ ಪಕ್ಷಗಳ ಸಭೆ ಕರೆದಿದ್ದಾರೆ. ನಾನು ಹೋಗುತ್ತೇನೆ. ನನ್ನ ನಿರೀಕ್ಷೆ ಇದ್ದಿದ್ದು ಎನ್‌ಡಿಎಗೆ 25 ಸ್ಥಾನ. ಕಾಂಗ್ರೆಸ್‌ಗೆ 4-5 ಸ್ಥಾನ ಬರುತ್ತೆ ಅಂದುಕೊಂಡಿದ್ದೆ. ನಮ್ಮ ಕೆಲವು ಸಮಸ್ಯೆಗಳಿಂದ ಅವರು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಆಡಳಿತ ನಡೆಸುತ್ತಾರೋ ಕಾದು ನೋಡೋಣ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳನ್ನು ಜನ ಒಪ್ಪಿಲ್ಲ. ಒಂದು ವರ್ಷ ಇದೇ ರೀತಿ ಆಡಳಿತ ಮುಂದುವರಿಸಿದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಜನರ ಮನಸ್ಸಿನಿಂದ ಕಾಂಗ್ರೆಸ್ ದೂರ ಆಗುತ್ತೆ. ಚನ್ನಪಟ್ಟಣ ಬೈ ಎಲೆಕ್ಷನ್‌ಗೆ ಎನ್‌ಡಿಎ ಮೈತ್ರಿ ಅಭ್ಯರ್ಥಿಯೇ ಇರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | Election Results 2024: ತ.ನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಪ್ರಮಾಣ ಶೇ. 3.57ರಿಂದ 11.04ಕ್ಕೆ ಜಿಗಿತ!
ಸಿಎಂ ಸಿದ್ದರಾಮಯ್ಯರ ರಿಪಬ್ಲಿಕ್ ಆಫ್ ಹಾಸನ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ರಿಪಬ್ಲಿಕ್ ಆಫ್ ಗ್ರಾಮಾಂತರ ರಿಸಲ್ಟ್ ನೋಡಲಿ. ಕಾಂಗ್ರೆಸ್‌ನವರು ತಂತ್ರ-ಕುತಂತ್ರ ಅನ್ನೋಕೆ ಆಗಲ್ಲ. ಗ್ರಾಮಾಂತರದಲ್ಲಿ ಮಂಜುನಾಥ್ ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.