Site icon Vistara News

Karnataka election results 2024: ಕರ್ನಾಟಕದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ: ಪ್ರಲ್ಹಾದ್‌ ಜೋಶಿ

Karnataka election results 2024

ಧಾರವಾಡ: ಜನತಾ ಜನಾರ್ದನರ ಆಶೀರ್ವಾದದಿಂದ ಗೆಲುವಾಗಿದೆ. ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು. ಎಲ್ಲ ಕಾರ್ಯಕರ್ತರು, ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಪ್ರತಿಸ್ಪರ್ಧಿಗಳು ಅಪಪ್ರಚಾರ ಮಾಡುತ್ತಾ ಬಂದಿದ್ದರು. ಸಾಕಷ್ಟು ಹಣ ಹೆಂಡವನ್ನು ಹಂಚಿದ್ದಾರೆ, ಆದ್ರೆ ಜನರು ನಮ್ಮ ಕೈ ಹಿಡಿದಿದ್ದಾರೆ. ಕರ್ನಾಟಕದ ಜನರು ಈಗಾಗಲೇ ಬಿಜೆಪಿಗೆ ಆಶಿರ್ವಾದ ಮಾಡಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರದ (Karnataka election results 2024) ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಧಾರವಾಡ ವಿಜೇತ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಧಾರವಾಡ ಮತ ಎಣಿಕೆ ಕೇಂದ್ರದ ಬಳಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಈಗಾಗಲೇ ದೇಶದಲ್ಲಿ 300ರ ಗಡಿ ದಾಡುವ ನಿಟ್ಟಿನಲ್ಲಿದ್ದೇವೆ. ನಿರೀಕ್ಷೆಗೆ ತಕ್ಕಂತೆ, ನಾವು ಅಂದುಕೊಂಡಂತೆ ಸೀಟು ಬಂದಿಲ್ಲ. ಎಲ್ಲಿ ಏನು ಆಗಿದೆ, ವಾಸ್ತವಿಕವಾಗಿ ಏನು ಆಗಿದೆ ಅನ್ನೋದನ್ನು ನೋಡಬೇಕಾಗಿದೆ. ಸದ್ಯದಲ್ಲಿ ದೆಹಲಿಗೆ ಹೋಗುತ್ತೇನೆ, ವರಿಷ್ಠರ ಜೊತೆ ಚರ್ಚಿಸುತ್ತೇನೆ. ಚುನಾವಣೆ ಆಗಿದ್ದು ಎನ್‌ಡಿಎ ಮತ್ತು ಇಂಡಿ ನಡುವೆ. ಹೀಗಾಗಿ ಎನ್‌ಡಿಎ ಜೊತೆ ಇದ್ದವರು ಗಟ್ಟಿಯಾಗಿ ನಿಲ್ಲುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.

ಈಗಾಗಲೇ ನಾವು ಕೈಗೊಂಡಿರುವ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ನನ್ನ ಸಚಿವ ಖಾತೆಯನ್ನು ಸರಿಯಾಗಿ ನಿಭಾಯಿಸಿದ್ದೇನೆ. ಐದು ವರ್ಷ ನನಗೆ ಮಂತ್ರಿಯಾಗಲು ಪ್ರಧಾನಿ ಮೋದಿಯವರು ಅವಕಾಶ ಮಾಡಿಕೊಟ್ಟಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಏನೇ ಹೇಳಿದರೂ ಆಶೀರ್ವಾದ ಅಂದಿದ್ದೆ, ಅವರ ಆಶಿರ್ವಾದದಿಂದ ಗೆದ್ದಿದ್ದೇನೆ ಎಂದು ತಿಳಿಸಿದರು .

ಇದನ್ನೂ ಓದಿ | Dharwad Election Result 2024: ಪ್ರಲ್ಹಾದ್‌ ಜೋಶಿಗೆ ‘ಧಾರವಾಡ ಪೇಡಾ’; ಅಸೂಟಿಗೆ ಸೋಲು

ಮತದಾರರಿಗೆ ಕಾಗೇರಿ ಧನ್ಯವಾದ

Vishweshwar Hegde Kageri

ಕಾರವಾರ: ಕ್ಷೇತ್ರದಲ್ಲಿ ಪ್ರಾರಂಭದಿಂದಲೂ ಬಿಜೆಪಿ ಗೆಲ್ಲುವ ವಿಶ್ವಾಸದಿಂದ ಕೆಲಸ ಮಾಡಿದ್ದೇವೆ. ಇದರ ಪರಿಣಾಮ ರಾಜ್ಯದಲ್ಲೇ ದಾಖಲೆ ಅಂತರದಿಂದ ಗೆಲುವು ಸಾಧ್ಯವಾಗಿದೆ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಕುಮಟಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಗೇರಿ ಅವರು, ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ ಮೊಟ್ಟಮೊದಲು ಅಭಿನಂದಿಸುತ್ತೇನೆ. 5 ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮತದಾರರು ಬಹುದೊಡ್ಡ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಹೆಸರು ಹೇಳದೇ ಪರೋಕ್ಷವಾಗಿ ಕಾಗೇರಿ ಟಾಂಗ್‌ ನೀಡಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರೇ ಬಿಜೆಪಿ ಶಾಸಕರು ಎಂದು ಕುಮಟಾದ ದಿನಕರ ಶೆಟ್ಟಿ, ಖಾನಾಪುರದ ವಿಠ್ಠಲ ಹಲಗೇಕರ್ ಹೆಸರನ್ನ ಮಾತ್ರ ಹೇಳಿದ ಕಾಗೇರಿ, ಸಂಘಟಿತವಾದ ಪ್ರಯತ್ನ ಈ ಚುನಾವಣಾ ಯಶಸ್ಸಿಗೆ ಕಾರಣ. ಸಂಘಟನೆಯ ಎಲ್ಲ ಹಂತದ ನಾಯಕರು, ಕಾರ್ಯಕರ್ತರಿಗೆ ಅಭಿನಂದಿಸಿದರು.

ಈ ಗೆಲುವು ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿದೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೇಂದ್ರೀಕರಿಸಿ ಕೆಲಸ ಮಾಡಲು ಬದ್ಧನಿದ್ದೇನೆ. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ, ತೊಡಕು ಉಂಟುಮಾಡದೆ, ಎಲ್ಲಾ ರೀತಿ ಸಹಕಾರ ಕೊಟ್ಟಿದ್ದಾಗಿ ಕಾಂಗ್ರೆಸ್‌ಗೆ ಅಭಿನಂದಿಸಿದರು.

ಇದನ್ನೂ ಓದಿ | Uttara Kannada Election Result 2024: ಉತ್ತರ ಕನ್ನಡದಲ್ಲಿ ಗೆದ್ದು ಬೀಗಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತರ ಕನ್ನಡ ಕ್ಷೇತ್ರ ಬಿಜೆಪಿ ನಿರಂತರವಾಗಿ ಗೆಲ್ಲುತ್ತಿದ್ದ ಕ್ಷೇತ್ರ. ಈ ಬಾರಿಯೂ ಗೆಲ್ಲುವ ಮೂಲಕ ವ್ಯಕ್ತಿ ಆಧಾರಿತ ಪಕ್ಷ ನಮ್ಮದಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ನಂಬಿರುವ ಪಕ್ಷ ಬಿಜೆಪಿ. ಕೆಲವರು ಕೆಲವು ಭ್ರಮೆಗಳನ್ನ ಸೃಷ್ಟಿಸುತ್ತಿರುತ್ತಾರೆ, ಅಂತಹವರ ಮುಖವಾಡ ಬಯಲಾಗಿದೆ ಎಂದು ಹೇಳಿದರು.

Exit mobile version