ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದರೆ, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ಮಧ್ಯೆ, ವಿಧಾನಸಭೆಗೆ (Karnataka Assembly) ಆಯ್ಕೆಯಾಗಿರುವ 224 ಸದಸ್ಯರ ಪೈಕಿ 217 ಸದಸ್ಯರು ಕೋಟ್ಯಧಿಪತಿಗಳಾಗಿದ್ದು(Crorepatis), ಈ ಪೈಕಿ ಹೆಚ್ಚಿನವರು ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾದವರ ಪೈಕಿ 63, ಕಾಂಗ್ರೆಸ್‌ನಿಂದ 132 ಜನರು ಕೋಟ್ಯಧಿಪತಿಗಳಾಗಿದ್ದಾರೆ. ಜೆಡಿಎಸ್ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ, ಅಲ್ಲೂ ಕೋಟ್ಯಾಧೀಶ್ವರರಿದ್ದಾರೆ. ಗೆದ್ದವರ ಪೈಕಿ ಕಾಂಗ್ರೆಸ್‌ನ ಡಿ ಕೆ ಶಿವಕುಮಾರ್ (DK Shivakumar) ಶ್ರೀಮಂತ ಶಾಸಕರಾಗಿದ್ದಾರೆ. 2018ರಲ್ಲಿ ಆಯ್ಕೆಯಾದ ಕೋಟ್ಯಧಿಪತಿಗಳ ಸಂಖ್ಯೆ 221. ಕಳೆದ ವರ್ಷಕ್ಕೆ ಹೋಲಿಸಿದರೆ, ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಒಂಚೂರು ಕಡಿಮೆಯಾಗಿದೆ!(Karnataka Election Results)
ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದವರ ಸರಾಸರಿ ಆಸ್ತಿ 64.39 ಕೋಟಿ ರೂ. ಇದೆ. 2018ರಲ್ಲಿ ಈ ಸರಾಸರಿ 34.59 ಕೋಟಿ ರೂ. ಇತ್ತು. ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ 67.13 ಕೋಟಿ ರೂ.ಗಳಾಗಿದ್ದರೆ, ಬಿಜೆಪಿಯ ಶಾಸಕರ ಸರಾಸರಿ ಆಸ್ತಿ 44.36 ಕೋಟಿ ರೂ. ಆಗಿದ್ದು, ಜೆಡಿಎಸ್‌ನಲ್ಲಿ 46.01 ಕೋಟಿ ರೂ. ಇದೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ್ ರೆಡ್ಡಿ ಅವರು ತಮ್ಮ ಆಸ್ತಿ ಮೌಲ್ಯ 246.51 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಇದೇ ವೇಳೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು 637 ಕೋಟಿ ರೂ. ಆಸ್ತಿಯ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದರು. ಶ್ರೀಮಂತ ಅಭ್ಯರ್ಥಿ ಡಿ ಕೆ ಶಿವಕುಮಾರ್ ಅವರು 1,413 ಕೋಟಿ ಆಸ್ತಿ ಘೋಷಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಕೆ ಎಚ್ ಪುಟ್ಟಸ್ವಾಮಿಗೌಡ 1,267 ಕೋಟಿ ರೂಪಾಯಿ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1,156 ಕೋಟಿ ರೂ.ನೊಂದಿಗೆ ಪ್ರಿಯಕೃಷ್ಣ ಅವರು ಮೂರನೇ ಸ್ಥಾನದಲ್ಲಿದ್ದಾರೆ.
64 ವಿಜೇತ ಅಭ್ಯರ್ಥಿಗಳು ತಮ್ಮ ವಯಸ್ಸು 25 ರಿಂದ 50 ವರ್ಷಗಳು ಎಂದು ಘೋಷಿಸಿದರೆ, 156 ವಿಜೇತ ಅಭ್ಯರ್ಥಿಗಳು ತಮ್ಮ ವಯಸ್ಸು 51 ರಿಂದ 80 ವರ್ಷಗಳು ಎಂದು ಘೋಷಿಸಿದ್ದಾರೆ. 3 ವಿಜೇತ ಅಭ್ಯರ್ಥಿಗಳ ವಯಸ್ಸು 80 ವರ್ಷಕ್ಕಿಂತ ಮೇಲ್ಪಟ್ಟಿದೆ. ಗೆದ್ದ 224 ಅಭ್ಯರ್ಥಿಗಳಲ್ಲಿ 10 ಮಹಿಳೆಯರಿದ್ದಾರೆ. 2018ರಲ್ಲಿ 7 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಕರ್ನಾಟಕ ಚುನಾವಣೆಯ ಫಲಿತಾಂಶ ಮತ್ತು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.