ಕೋಲಾರ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಕೋಲಾರವೇ ತಮ್ಮ ಮುಂದಿನ ಚುನಾವಣೆ (Karnataka Election) ಅಖಾಡ ಎಂದು ಘೋಷಿಸುವ ಮೂಲಕ ಅವರ ಸ್ಪರ್ಧೆಯ ವಿಚಾರವಾಗಿ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇವರ ಕ್ಷೇತ್ರ ಆಯ್ಕೆಯ ಹಿಂದೆ ಸಾಕಷ್ಟು ಲೆಕ್ಕಾಚಾರಗಳು, ಅಧ್ಯಯನಗಳು, ಜಾತಿ ಸಮೀಕರಣ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಸಾಧಕ-ಬಾಧಕಗಳ ಚಿಂತನೆಗಳ ಬಳಿಕವೇ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದು ಅವರಿಗೆ ಹೂವಿನ ಹಾಸಿಗೆಯಂತೂ ಅಲ್ಲ ಎಂಬುದಂತೂ ಸ್ಪಷ್ಟ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಈ ಮಧ್ಯೆ ಸಿದ್ದರಾಮಯ್ಯ ಅವರೂ ಸಹ ಎಲ್ಲವೂ ಸರಿಯಾಗಿದೆ ಎಂಬುದನ್ನು ತೋರಿಸುವ ಸಲುವಾಗಿ ಅವರ ವಿರುದ್ಧ ಮುನಿಸು ತೋರಿದ್ದ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಮನವೊಲಿಸಿದ್ದಲ್ಲದೆ, ಅವರ ಜತೆಗೆ ಒಂದೇ ಕಾರಿನಲ್ಲಿ ಬರುವ ಮೂಲಕ ಒಗ್ಗಟ್ಟಿನ ಮಂತ್ರವನ್ನೂ ಜಪಿಸಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಹವಾ
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹವಾ ಜೋರಾಗಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಇಂಗಿತ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಆಂತರಿಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬಣಗಳ ನಡುವೆ ಭಿನ್ನಮತ ತಾರಕಕ್ಕೇರಿದೆ. ಕೋಲಾರದಲ್ಲಿ ಸ್ಪರ್ಧಿಸಲು ಈಗಾಗಲೇ ರಮೇಶ್ ಕುಮಾರ್ ಬಣ ಸಿದ್ದರಾಮಯ್ಯ ಜತೆಗಿದೆ. ಹೀಗಾಗಿ ಸಮಾವೇಶಕ್ಕೆ ಆಗಮಿಸುವುದಕ್ಕೂ ಮುನ್ನ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ವೇಳೆ ರಮೇಶ್ ಕುಮಾರ್ ಬಣದ ಬಗ್ಗೆ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಎಲ್ಲವನ್ನೂ ಸರಿ ಮಾಡೋಣ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಗೆಲ್ಲುವ ಉದ್ದೇಶದಿಂದ ಹಳೆಯದನ್ನು ಮರೆತು ಮುಂದುವರಿಯೋಣ. ಮುನಿಸು ಮರೆತು ಬೆಂಬಲ ನೀಡಬೇಕು ಎಂದು ಮನವೊಲಿಸಿದ್ದಾರೆ. ನಂತರ ಸಿದ್ದರಾಮಯ್ಯ ಹಾಗೂ ಕೆ.ಎಚ್.ಮುನಿಯಪ್ಪ ಒಂದೇ ಕಾರಿನಲ್ಲಿ ಕೋಲಾರ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದರು.
ಇದನ್ನೂ ಓದಿ | Siddaramaiah Vs BJP : ಇದೇ ನಿಜವಾದ ʻಸಿದ್ದು ನಿಜ ಕನಸುಗಳುʼ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಟೀಂ
ಸಮಾವೇಶಕ್ಕೂ ಮೊದಲು ನಗರದ ಕಾಂಗ್ರೆಸ್ ಕಚೇರಿ ಸಿದ್ದರಾಮಯ್ಯ ಆಗಮಿಸಿದಾಗ, ಮುನಿಯಪ್ಪ ಬಣದಿಂದ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಕಚೇರಿಯಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಸಿದ್ದರಾಮಯ್ಯ, ಮುನಿಯಪ್ಪ ಅವರನ್ನು ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೊಗೆ ಪೋಸ್ ನೀಡಿದರು. ಈ ವೇಳೆ ಶಾಸಕ ರಮೇಶ್ ಕುಮಾರ್ ಉಪಸ್ಥಿತರಿರಲಿಲ್ಲ. ನಂತರ ವೇದಿಕೆ ಮೇಲೂ ಬಲಭಾಗಕ್ಕೆ ಮುನಿಯಪ್ಪರನ್ನು ಸಿದ್ದರಾಮಯ್ಯ ಕೂರಿಸಿಕೊಂಡಿದ್ದರು. ಎಡ ಭಾಗದಲ್ಲಿ ಕೃಷ್ಣ ಭೈರೇಗೌಡ, ನಜೀರ್ ಅಹ್ಮದ್, ರಮೇಶ್ ಕುಮಾರ್ ಕುಳಿತಿದ್ದರು.
ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗುವೆ: ಸಿದ್ದರಾಮಯ್ಯ
ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂದು ಕೆ.ಎಚ್.ಮುನಿಯಪ್ಪ ಸೇರಿ ಹಲವು ಸ್ಥಳೀಯ ನಾಯಕರು ಒತ್ತಾಯ ಮಾಡಿದ್ದಾರೆ. ಜನರ ಆಶೀರ್ವಾದ ಇದ್ದರೆ ಮಾತ್ರ ನಾವು ರಾಜಕೀಯದಲ್ಲಿ ಇರಲು ಸಾಧ್ಯ. ನಾಯಕರಿಗಿಂತ ಜನ ಮುಖ್ಯ ಆಗುತ್ತಾರೆ. ಚಾಮುಂಡಿ ಕ್ಷೇತ್ರದಿಂದ ಶಾಸಕನಾಗಿದ್ದೆ, ವರುಣದಿಂದ ಎರಡು ಬಾರಿ ಹಾಗೂ ಈಗ ಬಾದಾಮಿಯಿಂದ ಶಾಸಕನಾಗಿದ್ದೇನೆ. ಆದರೆ, ಕೆಲವರು ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶ್ರೀನಿವಾಸ್ ಗೌಡ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ನೀವು ಕೋಲಾರದಿಂದ ಸ್ಪರ್ಧೆ ಮಾಡಿದರೆ ನಾನು ನಿಲ್ಲಲ್ಲ ಎಂದು ಹೇಳಿದ್ದರು. 7 ಬಾರಿ ಎಂಪಿ ಆಗಿದ್ದ ಮುನಿಯಪ್ಪ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದಾರೆ. ರಮೇಶ್ ಕುಮಾರ್ ಅವರು ನನಗಿಂತ ಸೀನಿಯರ್ ಆಗಿದ್ದಾರೆ. ನಾರಾಯಣಸ್ವಾಮಿ, ನಂಜೇಗೌಡ ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ನಿಮ್ಮ ಪ್ರೀತಿ ಅಭಿಮಾನ ನಾನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ಇಷ್ಟೆಲ್ಲ ಹೇಳಿದ ಮೇಲೆ ನಾನು ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಲು ತೀರ್ಮಾನ ಮಾಡಿದ್ದೇನೆ. ನಾನು ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ನಾನು ಹಿಂದೆ ಬಿದ್ದಿಲ್ಲ. ನಾನು ಸ್ಪರ್ಧೆ ಮಾಡಿದ ಎಲ್ಲ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಬಾದಾಮಿ ಕೂಡ ಅಭಿವೃದ್ಧಿ ಮಾಡಿದ್ದೇನೆ. ಕೋಲಾರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಮಾಡುತ್ತೇನೆ ಎಂದ ಅವರು, ಕೋಲಾರ ಜಿಲ್ಲೆಯನ್ನು ನಾವು ಯಾವಾಗಲೂ ಸಿಲ್ಕ್ ಮಿಲ್ಕ್ ಎಂದು ಕರೆಯುತ್ತಿದ್ದೆವು. ಈ ಭಾಗದಲ್ಲಿ ಯಾವುದೇ ದೊಡ್ಡ ನದಿಗಳಿಲ್ಲ, ನಾವು ಅಧಿಕಾರಕ್ಕೆ ಬಂದ ತಕ್ಷಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿ ಕೊಡುತ್ತೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು. ನಾವು ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
ನಾವು 7 ಕೆಜಿ ಅಕ್ಕಿ ಕೊಟ್ಟಿದ್ದೆವು. ಆದರೆ ಅದು ಕೇಂದ್ರದ ಯೋಜನೆ ಎಂದು ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಆದರೆ, ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಿದ್ದು ಯಾರು ಮಿಸ್ಟರ್ ಬೊಮ್ಮಾಯಿ ಎಂದು ಪ್ರಶ್ನಿಸಿದ ಅವರು, 150 ಸ್ಥಾನ ಗೆಲ್ಲಲು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಇದರಲ್ಲಿ 140 ಸೀಟ್ ನಾವು ಗೆಲ್ಲುತ್ತೇವೆ. ನಾನು ಇದೇ ಜನವರಿ 23ಕ್ಕೆ ಕ್ಷೇತ್ರಕ್ಕೆ ಮತ್ತೊಮ್ಮೆ ಬರುವೆ, ಆಗ ರಾಜಕೀಯ ಭಾಷಣ ಮಾಡುತ್ತೇನೆ. ನಂತರ ಎಲ್ಲ ಹೋಬಳಿಗೆ ಬರುತ್ತೇನೆ. ಇದಾದ ಮೇಲೆ ರಾಜ್ಯ ಸುತ್ತಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿ ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡಿದ್ದಾರೆ. ಮಿನಿ ವಿಧಾನಸೌಧ, ಜಿಲ್ಲಾ ಆಡಳಿತ ಕಚೇರಿ ಮಾಡಬೇಕಾದರೆ ಸಿದ್ದರಾಮಯ್ಯ 20 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಬಾಲಗಂಗಾಧರ ಸ್ವಾಮೀಜಿ ಆಶೀರ್ವಾದದಿಂದ ಎತ್ತಿನಹೊಳೆ ಯೋಜನೆ ಮಾಡಿದರು. ಕೆಸಿ ವ್ಯಾಲಿ ಸಕಾಲಕ್ಕೆ ಮುಗಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಎಸ್‌ಸಿ, ಎಸ್‌ಟಿ ಜನಾಂಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೊಗಳಿದರು.
ನಾನು ಸಿಡಬ್ಲುಸಿ ಸದಸ್ಯನಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿ ಒಂದು ಸಿಸ್ಟಮ್ ಇದೆ. ಎಲೆಕ್ಷನ್ ಕಮಿಟಿ, ಸ್ಕ್ರೀನಿಂಗ್ ಕಮಿಟಿ ಇದೆ. ಅಲ್ಲಿ ಮೊದಲು ತೀರ್ಮಾನ ಆಗಬೇಕು. ಅದು ಕೆಪಿಸಿಸಿ ಅಧ್ಯಕ್ಷರಾಗಲಿ, ಸಿಎಲ್‌ಪಿ ನಾಯಕರಾಗಲಿ, ಮೊದಲು ಅಲ್ಲಿ ತೀರ್ಮಾನವಾದ ನಂತರ ಕ್ಷೇತ್ರಕ್ಕೆ ಬಂದರೆ ನಾನು ಸ್ವಾಗತ ಮಾಡುತ್ತೇನೆ. ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದರು.
ಜೆಡಿಎಸ್ ಉಚ್ಛಾಟಿತ ಶಾಸಕ ಶ್ರೀನಿವಾಸ್ ಗೌಡ ಮಾತನಾಡಿ, ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಕ್ಷೇತ್ರ ಬಿಟ್ಟುಕೊಡಲು ಸಿದ್ಧವಾಗಿದ್ದೇನೆ. ಈ ಮೊದಲು ಮಾಜಿ ಸಿಎಂ ಕೆ.ಸಿ.ರೆಡ್ಡಿ ಪ್ರತಿಮೆ ನಿರ್ಮಾಣ ಮಾಡಬೇಕು ಎನ್ನುತ್ತಿದ್ದೆ. ಈಗ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಕೆ.ಸಿ.ರೆಡ್ಡಿ ಇಬ್ಬರ ಪ್ರತಿಮೆಗಳನ್ನೂ ಒಂದೇ ಜಾಗದಲ್ಲಿ ಸ್ಥಾಪಿಸೋಣ ಎಂದು ಹೇಳಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೂಗಿದರು.
ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಮಾಜಿ ಸಿಎಂ ಹಾಗೂ ಜನಪ್ರಿಯ ನಾಯಕರಾದ ಸಿದ್ದರಾಮಯ್ಯ ಅವರು ಕೋಲಾರದಿಂದ ಶಾಸಕರು ಆಗಬೇಕು. ಕೋಲಾರ ರೈತರ ನಾಡು. ಕೆರೆಗಳಿಗೆ ನೀರು ತುಂಬಿಸದೇ ಹೋದರೆ ವ್ಯವಸಾಯ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಬಳಿ ಹೋಗಿ ಕೇಳಿದಾಗ, ಕೆಸಿ ವ್ಯಾಲಿ ಯೋಜನೆ ಮಾಡಿ ಕೆರೆಗಳಿಗೆ ನೀರು ತುಂಬಿಸಿದರು. ಜತೆಗೆ ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ಕೊಟ್ಟರು. ಹಾಗೆಯೇ ಮುಚ್ಚಿದ ಡಿಸಿಸಿ ಬ್ಯಾಂಕ್ ತೆರೆಸಲು ಕ್ರಮ, ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ, ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿ ಹಲವು ಜನಪರ ಯೋಜನೆ ಜಾರಿ ಮಾಡಿ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ಕೊಟ್ಟರು ಎಂದು ಹೇಳಿದರು.
ಮೈಸೂರು, ಶಿವಮೊಗ್ಗ, ಹಾಸನಕ್ಕೆ ಹೋಲಿಕೆ ಮಾಡಿದರೆ ಕೋಲಾರ ಇನ್ನೂ ಅಭಿವೃದ್ಧಿ ಆಗಬೇಕು. ಇದಕ್ಕೆ ಸಿದ್ದರಾಮಯ್ಯನಂತಹ ನಾಯಕರು ಶಾಸಕರಾದರೆ ಅಭಿವೃದ್ಧಿಯ ಹೆಬ್ಬಾಗಿಲು ತೆಗೆದಂತಾಗುತ್ತದೆ. ಎರಡೇ ವರ್ಷದ ಒಳಗೆ ಹಳ್ಳಿ ಹಳ್ಳಿಗೂ ನೀರು ಹರಿಸುವ ಜವಾಬ್ದಾರಿ ನಾವು ತೆಗೆದುಕೊಳುತ್ತೇವೆ. ನಮ್ಮ ಸರ್ಕಾರ ಬಂದ ಮೊದಲ ವರ್ಷದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ. ಸಿದ್ದರಾಮಯ್ಯನವರ ಆನೆ ಬಲ ಇದ್ದರೆ ಇಡೀ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಬಹುದು, ಕೋಲಾರದಿಂದಲೇ ಸಿದ್ದರಾಮಯ್ಯ ಶಾಸಕರಾಗಬೇಕು ಎಂದು ಹೇಳಿದರು.
ಇದನ್ನೂ ಓದಿ | Karnataka Election : ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ: ಸಿದ್ದರಾಮಯ್ಯ ಘೋಷಣೆ