Site icon Vistara News

Karnataka Election: ಎಚ್ಚರವಿರಲಿ, ಇವರು ಗೆಲುವಿಗಾಗಿ ಯಾರನ್ನು ಬೇಕಾದರೂ ಕೊಲ್ಲಬಲ್ಲರು ಎಂದ ಸಿದ್ದರಾಮಯ್ಯ

siddaramaiah Ashwathnarayana

#image_title

ಬೆಂಗಳೂರು: ಟಿಪ್ಪು ಸುಲ್ತಾನ್‌ನಂತೆಯೇ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ನಡುವೆಯೇ ಸ್ವತಃ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ. ʻʻಇವರು ಗೆಲ್ಲುವುದಕ್ಕಾಗಿ ಯಾರನ್ನು ಬೇಕಾದರೂ ಕೊಲ್ಲಬಲ್ಲರುʼʼ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ʻಕೊಲೆಗಡುಕ ಮನಸ್ಥಿತಿಯ ಬಿಜೆಪಿʼ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿರುವ ಟ್ವೀಟ್‌ನಲ್ಲಿ ಡಾ. ಅಶ್ವತ್ಥ ನಾರಾಯಣ ಅವರನ್ನು ಸಂಪುಟದಿಂದ ಕಿತ್ತು ಹಾಕುವಂತೆಯೂ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.

ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್‌ಗಳು ಇಲ್ಲಿವೆ.

೧. ಹತ್ಯೆ ಮಾಡಲು ಕರೆ ನೀಡುವ ಸಚಿವರಿಗೆ ಸಂಪುಟದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ರಾಜ್ಯಪಾಲರು ತಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸುತ್ತೇನೆ.

೨. ಜನತೆಯ ಮಾನ-ಪ್ರಾಣ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ. ಇಂತಹ ಸಚಿವರು ತಾವೇ ಖುದ್ದಾಗಿ ಹತ್ಯೆಗೆ ಪ್ರಚೋದಿಸಿದರೆ? ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಇರುತ್ತದೆ? ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಅವರ ಗಮನಕ್ಕೆ ಬಂದಿಲ್ಲವೇ?

೩. ಕೊಲೆಗಡುಕ ಮನಸ್ಥಿತಿಯ ಅಂತಹವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೆ ನಾಲಾಯಕ್. ಇಂತಹವರು ಉನ್ನತ ಶಿಕ್ಷಣ ಸಚಿವರಾದರೇ? ಡಾ. ಅಶ್ವತ್ಥನಾರಾಯಣ ಸಮಾಜಕ್ಕೆ ಯಾವ ಸಂದೇಶ ಕೊಡಲಿಕ್ಕೆ ಹೊರಟಿದ್ದಾರೆ?

೪. ಸೈದ್ಧಾಂತಿಕವಾಗಿ ಎದುರಿಸಲಾಗದ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರನ್ನು ಗೋಡ್ಸೆ ಕೊಂದ. ಅದೇ ಗೋಡ್ಸೆ ಸಂತಾನವೇ ವಿದ್ವಾಂಸರಾಗಿದ್ದ ಎಂ.ಎಂ.ಕಲಬರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು.

೫. ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯೇ ಅವರ ಬೌದ್ಧಿಕ ದಿವಾಳಿತನದ ಪ್ರತೀಕ. ಸೈದ್ಧಾಂತಿಕವಾಗಿ ನನ್ನನ್ನು ಎದುರಿಸುವ, ಇಲ್ಲವೇ ಸಾಧನೆಯ ಆಧಾರದಲ್ಲಿ ಮತ ಕೇಳುವ ಧಮ್-ತಾಕತ್ ಅವರಿಗೆ ಇಲ್ಲ. ಕರ್ನಾಟಕ ಬಿಜೆಪಿ ಸರ್ಕಾರದ್ದು ಅವರದು ಶೂನ್ಯ ಸಾಧನೆ ಮತ್ತು ಪೊಳ್ಳು ಸಿದ್ಧಾಂತ.

೬. ಸಾವಿನ ಭಯ ನನಗಿಲ್ಲ. ಇಂತಹ ಕೊಲೆಗಡುಕ ಮನಸ್ಥಿತಿಯವರು ಅಧಿಕಾರದಲ್ಲಿದ್ದರೆ ರಾಜ್ಯದ ಯಾವುದೇ ವ್ಯಕ್ತಿ ಸುರಕ್ಷಿತನಲ್ಲ. ಸೋಲಿನ ಭಯದಿಂದ ತತ್ತರಿಸಿಹೋಗಿರುವ ಈ ಕೊಲೆಗಡುಕ ಮನಸ್ಸುಗಳು ಗೆಲುವಿಗಾಗಿ ಯಾರ ಹತ್ಯೆಯನ್ನೂ ಮಾಡಬಹುದು. ಈ ಬಗ್ಗೆ ಜನ ಎಚ್ಚರಗೊಳ್ಳಬೇಕು.

ಇದನ್ನೂ ಓದಿ : Karnataka Election: `ಸಿದ್ದರಾಮಯ್ಯರನ್ನು ಹೊಡೆದು ಹಾಕಿ’ ಹೇಳಿಕೆ ವಿರುದ್ಧ ಅಶ್ವತ್ಥನಾರಾಯಣ ಮೇಲೆ 2 ಕೇಸ್‌; ಪ್ರತಿಭಟನೆ

Exit mobile version