Site icon Vistara News

Karnataka Election : ಮೈತ್ರಿ ಸರ್ಕಾರ ಉರುಳಿಸಿದ್ದು ಸಿದ್ದರಾಮಯ್ಯ; ಸುಧಾಕರ್‌ ಮಾತು ಬೆಂಬಲಿಸಿದ ಸೋಮಶೇಖರ್‌

ST Somashekhar also alleges sidaramaiah asked them to join BJP

ST Somashekhar also alleges sidaramaiah asked them to join BJP

ಬೆಂಗಳೂರು: 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಪತನಕ್ಕೆ (Coalition Government) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷ ಕಾರಣ ಎಂಬ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ಹೇಳಿಕೆಯನ್ನು ಅವರೊಂದಿಗೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಇನ್ನೊಬ್ಬ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌‌ (ST Somashekhar) ಅನುಮೋದಿಸಿದ್ದಾರೆ.

2019ರಲ್ಲಿ 14 ಮಂದಿ ಶಾಸಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಪಕ್ಷಾಂತರಗೊಂಡ ಪ್ರಕರಣದಲ್ಲಿ ಎಸ್‌ಟಿ ಸೋಮಶೇಖರ್‌ ಕೂಡಾ ಒಬ್ಬರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು ಕಾಂಗ್ರೆಸ್‌ ಬಿಟ್ಟು ಬಜೆಪಿ ಸೇರಿ ಮತ್ತೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಮಂತ್ರಿಯಾಗಿದ್ದರು. 2023ರ ಚುನಾವಣೆಯಲ್ಲಿ ಅವರು ಯಶವಂತಪುರ ಕ್ಷೇತ್ರದಿಂದ ಮತ್ತೆ ಗೆದ್ದಿದ್ದಾರೆ.

ಈ ನಡುವೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೋಲು ಕಂಡ ಡಾ.ಕೆ. ಸುಧಾಕರ್‌ ಅವರು 17 ಶಾಸಕರ ಪಕ್ಷಾಂತರ ಪ್ರಕರಣಕ್ಕೆ ಸಿದ್ದರಾಮಯ್ಯ ಅವರೇ ಪ್ರೇರಣೆ ಎಂದು ಟ್ವೀಟ್‌ ಮಾಡಿದ್ದಾರೆ. ಅದನ್ನು ಎಸ್‌.ಟಿ ಸೋಮಶೇಖರ್‌ ಅವರು ಫೇಸ್‌ ಬುಕ್‌ ಪೋಸ್ಟ್‌ ಮೂಲಕ ಅನುಮೋದಿಸಿದ್ದಾರೆ.

ʻʻಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದುʼʼ ಎಂದು ಎಸ್‌.ಟಿ. ಸೋಮಶೇಖರ್‌ ಅವರು ಹೇಳಿಕೊಂಡಿದ್ದಾರೆ.

ಆವತ್ತು 14 ಕಾಂಗ್ರೆಸ್‌ ಶಾಸಕರು ಪಕ್ಷ ಬಿಟ್ಟು ಹೋದಾಗಲೇ ಅವರೆಲ್ಲ ಸಿದ್ದರಾಮಯ್ಯ ಬೆಂಬಲಿಗರು, ಅವರ ಸಲಹೆ ಇಲ್ಲದೆ ಪಕ್ಷ ಬಿಟ್ಟಿರಲಾರರು ಎಂಬ ಅಭಿಪ್ರಾಯ ಸಾರ್ವಜನಿಕರ ವಲಯದಲ್ಲಿ ಇತ್ತು. ಅದು ಈಗ ಇಬ್ಬರು ಪ್ರಮುಖ ನಾಯಕರ ಹೇಳಿಕೆಯ ಮೂಲಕ ಸ್ಪಷ್ಟವಾಗಿದೆ.

ಹಾಗಿದ್ದರೆ ಡಾ. ಕೆ. ಸುಧಾಕರ್‌ ಹೇಳಿದ್ದೇನು?

ಸುಧಾಕರ್‌ ಅವರು ತಮ್ಮ ಟ್ವಿಟರ್‌ ಮೂಲಕ ಸಿದ್ದರಾಮಯ್ಯ ಅವರು ಹೇಗೆ ಅಸಹಾಯಕರಾಗಿದ್ದರು ಮತ್ತು ಹೇಗೆ ತಮಗೆ ಪಕ್ಷ ಬಿಡುವಂತೆ ಪ್ರೇರಣೆ ನೀಡಿದರು ಎಂಬುದನ್ನು ವಿವರಿಸಿದ್ದಾರೆ. ಅದರ ವಿವರ ಇಲ್ಲಿದೆ.

1.2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.

2.2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.

3.ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?

ಇದನ್ನೂ ಓದಿ: Karnataka Election : ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ: ಡಾ. ಸುಧಾಕರ್‌ ಸ್ಫೋಟಕ ಹೇಳಿಕೆ

Exit mobile version