ದೇವದುರ್ಗ (ರಾಯಚೂರು): ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದಲ್ಲಿ (Karnataka Election) ಬಿಜೆಪಿಯ ಅಭ್ಯರ್ಥಿಯಾಗಿರುವ ಕೆ. ಶಿವನಗೌಡ ನಾಯಕ ಅವರ ಪರವಾಗಿ ಪ್ರಚಾರ ನಡೆಸಲು ಚಿತ್ರ ನಟ ಕಿಚ್ಚ ಸುದೀಪ್ (Actor Kiccha sudeep) ಆಗಮಿಸಿದ ವೇಳೆ ಅವರ ಅಭಿಮಾನಿಗಳ ಮೇಲೆ ಲಾಠಿಪ್ರಹಾರ ನಡೆದಿದೆ.
ದೇವದುರ್ಗಕ್ಕೆ ಕಿಚ್ಚ್ ಸುದೀಪ್ ಬರುತ್ತಾರೆ ಎಂಬ ಮಾಹಿತಿ ತಿಳಿದು ಸುದೀಪ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವದುರ್ಗ ಪಟ್ಟಣದಲ್ಲಿ ಎರಡು ಕಿ.ಮೀ. ರೋಡ್ ಶೋಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿದ್ದರು. ಈ ನಡುವೆ ಸಾವಿರಾರು ಅಭಿಮಾನಿಗಳು ಅವರು ಹೆಲಿಕಾಪ್ಟರ್‌ನಲ್ಲಿ ಬಂದಿಳಿಯುವ ದೇವದುರ್ಗದ ಹೆಲಿಪ್ಯಾಡ್‌ನಲ್ಲಿ ಸೇರಿದ್ದರು.
ಹೆಲಿಪ್ಯಾಡ್ ಸುತ್ತಮುತ್ತ ಮಾತ್ರವಲ್ಲ, ಸಮೀಪದ ಬೆಟ್ಟ ಗುಡ್ಡಗಳು, ಮರಗಳ ಮೇಲೆ ಕುಳಿತು ಕಿಚ್ಚನ ಆಗಮನಕ್ಕಾಗಿ ಕಾಯುತ್ತಿದ್ದರು. ಅದರ ನಡುವೆಯೇ ಸುದೀಪ್ ವಿಶೇಷ ಹೆಲಿಕಾಪ್ಟರ್ ಮೂಲಕ ಹೆಲಿಪ್ಯಾಡ್‌ಗೆ ಬಂದಿಳಿದರು. ಆಗ ಒಮ್ಮೆಲೇ ಅಭಿಮಾನಿಗಳು ಎಲ್ಲ ದಿಕ್ಕುಗಳಿಂದಲೂ ಸುದೀಪ್ ಕಡೆಗೆ ಓಡಿ ಬಂದರು.
ಈ ವೇಳೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ನುಗ್ಗಿ ಬರುತ್ತಿರುವುದನ್ನು ಕಂಡು ಪೊಲೀಸರು ಅವರನ್ನು ತಡೆದರು. ಆದರೆ, ಅವರನ್ನು ಮೀರಿಸಿ ಅಭಿಮಾನಿಗಳು ಮುಂದಡಿ ಇಟ್ಟರು. ಈ ವೇಳೆ ಅವರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಅಭಿಮಾನಿಗಳ ಮೇಲೆ ಪೊಲೀಸರು ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದು ಕಂಡುಬಂತು. ಕೆಲವರನ್ನು ಬೆನ್ನಟ್ಟಿ, ಕೆಲವರನ್ನು ಮರಗಳಿಂದ ಇಳಿಸಿಯೂ ಹೊಡೆದಿರುವುದು ಕಂಡುಬಂತು.
ಇದೆಲ್ಲದರ ನಡುವೆಯೇ ದೇವದುರ್ಗ ಪಟ್ಟಣದಲ್ಲಿ ಕಿಚ್ಚ ಸುದೀಪ್ ರೋಡ್ ಶೋ ನಡೆಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮತ ಶಿಕಾರಿ ಸಾರ್ವಜನಿಕ ಕ್ಲಬ್ ಮೈದಾನದವರೆಗೆ ನಡೆಯಿತು.
ಟೀ ತರಿಸಿಕೊಂಡು ಕುಡಿದ ಕಿಚ್ಚ ಸುದೀಪ್
ಈ ನಡುವೆ, ರೋಡ್ ನಡುವೆಯೇ ಸುದೀಪ್ ಅವರು ರಸ್ತೆ ಪಕ್ಕದ ಟೀ ಅಂಗಡಿಯಿಂದ ಚಹಾ ತರಿಸಿಕೊಂಡು ಸೇವಿಸಿದರು. ಚಹಾ ಕುಡಿದ ಸುದೀಪ್ ಸೂಪರ್ ಎಂದು ಸನ್ನೆ ಮಾಡಿದರು. ಅದರ ನಡುವೆ ಭಾಷಣ ಮಾಡಿದ ಅವರು ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ್ ಅವರನ್ನು ಗೆಲ್ಲಿಸಿ ಎಂದು ಸುದೀಪ್ ಕರೆ ನೀಡಿದರು.
ದೇವದುರ್ಗದಲ್ಲಿ ರೋಡ್ ಶೋ ಮುಗಿಸಿದ ಕಿಚ್ಚ ಲಿಂಗಸುಗೂರು, ಮಾನ್ವಿ ಹಾಗೂ ಮಸ್ಕಿ ಕ್ಷೇತ್ರದಲ್ಲೂ ಮತ ಯಾಚನೆ ನಡೆಸಿದರು.
25 ಕ್ಷೇತ್ರ ಆಯ್ತು, ಇನ್ನೂ 20 ಕ್ಷೇತ್ರಗಳಲ್ಲಿ ಸುದೀಪ್ ಪ್ರಚಾರ
ಚಿತ್ರ ನಟ ಸುದೀಪ್ ಅವರು ಸಿಎಂ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡುವುದರ ಜತೆಗೆ ಬಿಜೆಪಿ ಹೇಳಿದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಅದರಂತೆ ಅವರು ಸುಮಾರು 50 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ಒಪ್ಪಿಕೊಂಡಿದ್ದರು.
ಬಹಿರಂಗ ಪ್ರಚಾರಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿರುವ ಸುದೀಪ್ ಈಗಾಗಲೇ 25ರಷ್ಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ. ಉಳಿದ ನಾಲ್ಕು ದಿನಗಳಲ್ಲಿ 20 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ನಾಯಕ ಸಮುದಾಯ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಸುದೀಪ್ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಪ್ರತಿಯಾಗಿ ಮೇ 7ರಂದು ರಾಹುಲ್ ಗಾಂಧಿ ರೋಡ್ ಶೋ