Site icon Vistara News

Karnataka Election : ಭ್ರಷ್ಟಾಸುರ ಬೊಮ್ಮಾಯಿ; ಕಾಂಗ್ರೆಸ್‌ ನಾಯಕ ಸುರ್ಜೇವಾಲ ವಾಗ್ದಾಳಿ; ಸರ್ಕಾರಕ್ಕೆ ಪ್ರಶ್ನಾವಳಿ

Bommai surjewala

#image_title

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಹೊಸ ಬ್ರಾಂಡ್‌ ಕ್ರಿಯೇಟ್‌ ಮಾಡಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ʻಭ್ರಷ್ಟಾಸುರʼ ಎಂದು ಕರೆದಿದೆ. ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌ ನಾಯಕರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರು ಮೂರು ಅಂಶಗಳ ಆಧಾರದಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಂಡರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ, ಶಾಸಕ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

ʻʻಮೂರು ವಿಚಾರವಾಗಿ ನಾವು ಸುದ್ದಿ ಗೋಷ್ಠಿ ಮಾಡುತ್ತಿದ್ದೇವೆʼʼ ಎಂದೇ ಮಾತು ಆರಂಭಿಸಿದ ರಣದೀಪ್‌ ಸುರ್ಜೇವಾಲ ಅವರು, ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ ಮತ್ತು ಬಜೆಟ್‌ ವಿಚಾರದಲ್ಲಿ ವಾಗ್ದಾಳಿ ನಡೆಸಿದರು.

ʻʻಬಸವರಾಜ ಬೊಮ್ಮಾಯಿ‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರದಲ್ಲಿ ಅದು ಹೊಸ ಬ್ರಾಂಡ್ ಕ್ರಿಯೇಟ್ ಮಾಡಿದೆʼʼ ಎಂದು ಹೇಳಿದ ಅವರು, ʻಭ್ರಷ್ಟಾಸುರ ಬೊಮ್ಮಾಯಿʼ ಅಂತ ಜರಿದರು.

ʻʻಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರಕ್ಕೆ ಖಜಾನೆಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆರು ಕೋಟಿ ಕನ್ನಡಿಗರಿಗೆ ಮೋಸ ಮಾಡಲಾಗುತ್ತಿದೆʼʼ ಎಂದು ಸುರ್ಜೇವಾಲಾ ಹೇಳಿದರು.

ʻʻಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 650 ಭರವಸೆಗಳ ಪೈಕಿ ಹೆಚ್ಚಿನದವು ಈಡೇರಿಲ್ಲ. ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಯಾವುದೂ ಆಗಿಲ್ಲʼʼ ಎಂದು ಹೇಳಿದರು.

ರಾಜ್ಯದ ಮಹಿಳೆಯರಿಗೆ ಸರಕಾರ ಮೋಸ ಮಾಡಿದೆ. ಸ್ತ್ರೀಯರ ಉನ್ನತಿ ನಿಧಿ ಸ್ಥಾಪಿಸುವುದಾಗಿ ಹೇಳಿತ್ತು. ಅದರ ಕಥೆ ಏನಾಗಿದೆ ಎಂಬುದಕ್ಕೆ ಉತ್ತರವೇ ಇಲ್ಲ ಎಂದು ನೆನಪಿಸಿದರು. ಯುವಕರಿಗೆ ಕೊಟ್ಟಿರುವ ಭರವಸೆ ಈಡೇರಿಸಿಲ್ಲ. ಸರ್ಕಾರಿ ಉದ್ಯೋಗ ಕೊಡುವ ಕೆಲಸ ಮಾಡಿಲ್ಲ ಎಂದು ಜರಿದರು ಸುರ್ಜೇವಾಲಾ.

ʻʻಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳಿಗೆ 41 ಭರವಸೆ ನೀಡಲಾಗಿತ್ತು. ಮನೆ ಕಟ್ಟಿ ಕೊಟ್ಟುವ ಮಾತು ಉಳಿಸಿಕೊಂಡಿಲ್ಲʼʼ ಎಂದು ಹೇಳಿದ ಸುರ್ಜೇವಾಲ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಯಾವ ಭರವಸೆಗಳೂ ಈಡೇರಿಲ್ಲ ಎಂದು ಹೇಳಿದರು.

ಈಡೇರಿಸದ ಭರವಸೆಗಳು: ಸುರ್ಜೇವಾಲ ಪಟ್ಟಿ
೧. 201೮ರಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಶೇ.91 ರಷ್ಟು ಬೇಡಿಕೆ ಈಡೇರಿಸಿಲ್ಲ.
೨. ರೈತರಿಗೆ ನೀಡಿದ ಭರವಸೆ ಈಡೇರಿಸಿಲ್ಲ. ರಾಜ್ಯದ ಮಹಿಳೆಯರಿಗೆ ನೀಡಿದ ಭರವಸೆ ಯಾಕೆ ಈಡೇರಿಸಿಲ್ಲ?
೩. ಯುವಕರಿಗೆ ನೀಡಿದ 18 ಭರವಸೆಗಳಲ್ಲಿ 17ನ್ನು ಈಡೇರಿಸಿಲ್ಲ, ಉದ್ಯೋಗ ಕೊಡಿಸಿಲ್ಲ.
೪. ಶಿಕ್ಷಣಕ್ಕೆ ೩೦೦೦ ಕೋಟಿ ರೂ. ನಿಗದಿ ಮಾಡಿದ್ದರೂ ಒಂದೂ ರೂ. ಕೂಡಾ ನೀಡಿಲ್ಲ.
೫. 4500 ಕೋಟಿ ರೂ. ಮೊತ್ತದ ಎಸ್ಸಿ ಎಸ್ಟಿ, ಒಬಿಸಿ ಸಮುದಾಯದ ಪ್ರತಿಭಾ ಪುರಸ್ಕಾರ ಈಡೇರಿಸಿಲ್ಲ‌.

ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ಪ್ರಶ್ನೆಗಳು
೧. ನಮ್ಮ ಕ್ಲಿನಿಕ್ ಆರಂಭ, ಕಲ್ಯಾಣ ಕರ್ನಾಟಕಕ್ಕೆ ಘೋಷಿಸಿದ್ದ ಹಣ ಯಾಕೆ ಬಳಸಿಕೊಂಡಿಲ್ಲ?
೨. ಒಕ್ಕಲಿಗ ಅಭಿವೃದ್ಧಿ ಹಾಗೂ ಬಿಲ್ಲವ ಕೋಶಕ್ಕೆ ನೀಡಿದ್ದ ಅನುದಾನ ಬಿಡುಗಡೆ ಯಾಕೆ ಮಾಡಿಲ್ಲ?
೩. ಪಂಚಮಸಾಲಿ ಲಿಂಗಾಯಿತರಿಗೆ ನೀಡಿದ ಭರವಸೆ ಈಡೇರಿಸಿಲ್ಲ?ಮೀಸಲಾತಿ ಭರವಸೆ ಈಡೇರಿಸಿಲ್ಲ.
೪. ಗೋವಾದಲ್ಲಿ ಯಾಕೆ ಕನ್ನಡ ಭವನ ನಿರ್ಮಾಣವಾಗಿಲ್ಲ.

ಇದನ್ನೂ ಓದಿ : ಬೆಳಗಾವಿ ಅಧಿವೇಶನ | ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸುರ್ಜೇವಾಲ ನೀಡಿದ 12 ಸೂತ್ರಗಳು

Exit mobile version