Site icon Vistara News

Karnataka Election: ಕರ್ನಾಟಕ ಹನುಮನ ಜನ್ಮಸ್ಥಳ ಎಂಬುದನ್ನು ಬಿಜೆಪಿ ತಿರಸ್ಕರಿಸಿದೆ; ಪವನ್‌ ಖೇರಾ ತಿರುಗೇಟು

Karnataka Election: The BJP has denied the birthplace of Lord Hanuman; Says Pawan Khera

Karnataka Election: The BJP has denied the birthplace of Lord Hanuman; Says Pawan Khera

ಬೆಂಗಳೂರು: ಕರ್ನಾಟಕದಲ್ಲಿ ಬಜರಂಗದಳವನ್ನು ನಿಷೇಧಿಸಲಾಗುತ್ತದೆ ಎಂದು ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೊರಡಿಸಿದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದು ಈಗ ವಿವಾದದ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, “ನಾವೂ ಹನುಮನ ಭಕ್ತರೇ” ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿ ವಿರುದ್ಧ ಕಾಂಗ್ರೆಸ್‌ ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹನುಮನ ಜನ್ಮಸ್ಥಳ ಕರ್ನಾಟಕ ಎಂಬುದನ್ನು ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಿರಾಕರಿಸಿದೆ. ಹನುಮನ ಜನ್ಮಸ್ಥಳ ವಿಚಾರವಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ವಾದ-ವಿವಾದ ನಡೆಯುತ್ತಿದ್ದಾಗ ಸಂಸತ್ತಿನಲ್ಲಿ ಕೊಪ್ಪಳ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರು ಕರ್ನಾಟಕ ಹನುಮನ ಜನ್ಮಸ್ಥಳವಲ್ಲ ಎಂದು ಹೇಳಿದ್ದಾರೆ. ಆದರೆ, ಈಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ” ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪವನ್‌ ಖೇರಾ ಸುದ್ದಿಗೋಷ್ಠಿ

“ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಬಜರಂಗಬಲಿ ಎಂದು ಹೇಳುತ್ತಾರೆ. ಮತ್ತೊಂದೆಡೆ ಬಿಜೆಪಿ ಕರ್ನಾಟಕದಲ್ಲಿ ಹನುಮಂತನ ಜನ್ಮ ಹಾಗೂ ಅಸ್ತಿತ್ವವನ್ನು ನಿರಾಕರಿಸುತ್ತದೆ. ಹನುಮಂತನನ್ನು ಬಜರಂಗದಳಕ್ಕೆ ಹೋಲಿಕೆ ಮಾಡಿದಾಗಲೇ ಬಿಜೆಪಿಯ ಷಡ್ಯಂತ್ರ ಅರ್ಥವಾಗುತ್ತದೆ. ಇದು ಹನುಮ ಭಕ್ತರಿಗೆ ಮಾಡುವ ದೊಡ್ಡ ಅಪಮಾನ. ಹನುಮಂತನು ಹಂಪಿಯ ಅಂಜನಾದ್ರಿಯಲ್ಲಿ ಜನಿಸಿದ್ದಾರೆ. ಈ ವಿಚಾರವಾಗಿ ಅಧ್ಯಯನ ಮಾಡಲು ಬಿಜೆಪಿ ಸರ್ಕಾರ ಒಂದು ಸಮಿತಿಯನ್ನು ನೇಮಕ ಮಾಡಿ ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಸುತ್ತಿಲ್ಲ” ಎಂದು ದೂರಿದರು.

“ಹನುಮನ ವಿಚಾರದಲ್ಲೂ ಬಿಜೆಪಿಯವರು ರಾಜ್ಯದ ಹಿತಾಸಕ್ತಿ ವಿರುದ್ಧವಾಗಿ ಹೋಗುತ್ತಿದ್ದಾರೆ. 2017ರಲ್ಲಿ ಸಂಸತ್ತಿನಲ್ಲಿ ಕೇಂದ್ರದ ಸಂಸ್ಕೃತಿ ಸಚಿವರಾಗಿದ್ದ ಮಹೇಶ್ ಶರ್ಮಾ ಅವರಿಗೆ ಸೀತಾ ಮಾತೆಯ ಜನ್ಮಸ್ಥಳದ ಬಗ್ಗೆ ಕೇಳಲಾಗಿತ್ತು. ಆಗ ‘ಇದು ನಂಬಿಕೆಗೆ ಬಿಟ್ಟ ವಿಚಾರ. ಇದಕ್ಕೆ ಯಾವುದೇ ಆಧಾರವಿಲ್ಲ’ ಎಂದು ಹೇಳಿದ್ದರು. ಕೋಟ್ಯಂತರ ಸೀತಾ ಭಕ್ತರಿಗೆ ಅಪಮಾನ ಮಾಡಿದ್ದಾರೆ. ಆದರೆ ಇಂದು ಕೇವಲ ಮತಕ್ಕಾಗಿ ಬಿಜೆಪಿಯವರು ಬಜರಂಗದಳವನ್ನು ಹನುಮಂತನಿಗೆ ಹೋಲಿಕೆ ಮಾಡಿದ್ದಾರೆ” ಎಂದರು.

ಇದನ್ನೂ ಓದಿ: Karnataka Election 2023: ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ: ಡಿ ಕೆ ಶಿವಕುಮಾರ್ ಪ್ರಶ್ನೆ

“ಮೋದಿ ಅವರು ಪ್ರತಿ ಸಮಾವೇಶದಲ್ಲಿ ಬಜರಂಗಬಲಿಯ ನಾಮ ಸ್ಮರಣೆ ಮಾಡುತ್ತಿದ್ದಾರೆ. ಅವರಿಗೆ ಹನುಮಂತನ ಮೇಲೆ ನಂಬಿಕೆ ಇದ್ದರೆ, ಹನುಮ ಜನ್ಮಸ್ಥಳದ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ಏಕೆ ರಚನೆ ಮಾಡಿಲ್ಲ? ಇನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಣ ತಿಕ್ಕಾಟದಲ್ಲಿ ಕೇಂದ್ರ ಸರ್ಕಾರ ಯಾಕೆ ಹಸ್ತಕ್ಷೇಪ ಮಾಡುತ್ತಿಲ್ಲ? ಬಿಜೆಪಿ ಯಾವುದೇ ದೇವತೆಗಳ ಜನ್ಮಸ್ಥಳ ನಂಬಿಕೆಗೆ ಬಿಟ್ಟ ವಿಚಾರ ಎಂದು ಹೇಳಿದೆ. ಬಿಜೆಪಿಯವರು ಇದೇ ದೇವತೆಗಳ ಹೆಸರಲ್ಲಿ ಮತ ಕೇಳುತ್ತಿರುವುದೇಕೆ? ಇವರು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ದೇವತೆಗಳ ಹೆಸರು ಬಳಕೆ ಮಾಡುತ್ತಾರಾ” ಎಂದು ಪ್ರಶ್ನಿಸಿದರು.

Exit mobile version