Site icon Vistara News

Karnataka Election | ಗುಜರಾತ್‌ನಂತೆ ಕರ್ನಾಟಕದಲ್ಲಿ ಹಿರಿಯರಿಗೆ ಕೊಕ್‌ ಕೊಡುವ ಸುದ್ದಿ ಇದೆ: ಬೈರತಿ ಬಸವರಾಜ್

BJP

ಬಾಗಲಕೋಟೆ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಬಿಜೆಪಿಯಲ್ಲಿ ಭಾರಿ ಬದಲಾವಣೆ ಆಗುವ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿರುವ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಅವರು, ಗುಜರಾತ್‌ ಮಾದರಿಯಲ್ಲಿ ಕರ್ನಾಟಕ ಚುನಾವಣೆಯಲ್ಲಿಯೂ ಕೆಲವು ಹಿರಿಯರಿಗೆ ಕೊಕ್‌ ಕೊಡುವ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗುಜರಾತ್ ಮಾದರಿ ರೀತಿ
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಹಿರಿಯರಿಗೆ ಕೊಕ್ ಕೊಡುವ ಭಯ ಕಾಡುತ್ತಿದೆಯಾ ಎಂದು ಕೇಳಲಾದ ಪ್ರಶ್ನೆಗೆ, ಹೌದು ಆ ರೀತಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಈಗಲೇ ಏನನ್ನೂ ಹೇಳಲಾಗದು. ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಮಾಡುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಇದಕ್ಕೆಲ್ಲ ಹಿರಿಯರು ಇದ್ದಾರೆ, ನಮ್ಮ ಹೈಕಮಾಂಡ್ ಇದೆ. ಅವರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಏನೇ ಹೇಳಿದರೂ ಬಿಜೆಪಿಯದ್ದೇ ಗೆಲುವು
ರಾಜ್ಯದಲ್ಲಿ ಗುಜರಾತ್ ಚುನಾವಣೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿ ನಾವು ಸುಮ್ಮನೆ ಇದ್ದರೂ ಸಹ ಗೆಲ್ಲುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೈರತಿ ಬಸವರಾಜ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗ ವಿಶ್ವ ನಾಯಕರಾಗಿ ಹೊರಹೊಮ್ಮಿದಾರೆ‌‌. ಸಿದ್ದರಾಮಯ್ಯನವರು ಏನೇ ಹೇಳಬಹುದು. ಅಮೆರಿಕದ ಅಧ್ಯಕ್ಷರು ಸಹ ಮೋದಿಗೆ ಸೆಲ್ಯೂಟ್ ಮಾಡುತ್ತಾರೆ. ಆ ಮಟ್ಟಕ್ಕೆ ಇಂದು ಭಾರತ ದೇಶ ಬೆಳೆಯಲಿಕ್ಕೆ ಮೋದಿಯವರು ಕೊಡುಗೆ ನೀಡಿದ್ದಾರೆ. ಅವರು ಅನೇಕ ಶಾಶ್ವತ ಯೋಜನೆಗಳನ್ನು ರೂಪಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಕೋವಿಡ್ ಬಂದಂತಹ ಸಂದರ್ಭದಲ್ಲಿ ಇಡೀ ದೇಶಕ್ಕೆ ಲಸಿಕೆಯನ್ನು ಉಚಿತವಾಗಿ ಕೊಡುವ ವ್ಯವಸ್ಥೆಯನ್ನು ಮೋದಿ ಮಾಡಿದ್ದಾರೆ. ನಾವೆಲ್ಲರೂ ಇಂದು ಜೀವಂತವಾಗಿ ಇದ್ದೇವೆಂದರೆ ಅದಕ್ಕೆ ಮೋದಿಯವರು ಕಾರಣಿಕರ್ತರಾಗಿದ್ದಾರೆ. ಅವರು ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ‌‌.‌ ಹಾಗಾಗಿ ಅವರು ವಿಶ್ವಮಾನವನಾಗಿ ಹೊರಹೊಮ್ಮುತ್ತಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಯಭೇರಿ ಬಾರಿಸಲಿದೆ. ಮತ್ತೆ ಅಧಿಕಾರಕ್ಕೆ ಬರಲಾಗುವುದು ಎಂದು ಬೈರತಿ ಬಸವರಾಜ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | ಸಿಎಂ ಬೊಮ್ಮಾಯಿ ಭೇಟಿಯಾಗುತ್ತಿರುವ ಆರ್‌ಎಸ್‌ಎಸ್‌ ಮುಖಂಡರು, ಶಾಸಕರು, ಸಚಿವರು

Exit mobile version