ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election) ನಾಲ್ಕೇ ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ವಿವಿಧ ಸಮಾವೇಶಗಳು, ಯಾತ್ರೆಗಳು, ಸಭೆಗಳು ಸೇರಿದಂತೆ ಹಲವು ರೀತಿಯ ಚಟುವಟಿಕೆಯನ್ನು ಆಯೋಜನೆ ಮಾಡುತ್ತಿವೆ. ಈ ಮೂಲಕ ಮತದಾರರ ಮನ ಮುಟ್ಟುವ ತಂತ್ರಗಾರಿಕೆಗೆ ಮೊರೆಹೋಗಿವೆ. ಈ ಮಧ್ಯೆ ಸೋಷಿಯಲ್ ಮೀಡಿಯಾ ಮೂಲಕವೂ ಪ್ರಚಾರ-ಅಪಪ್ರಚಾರಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಒಬ್ಬರ ಮೇಲೊಬ್ಬರು ಕೆಸರೆರಚಾಟವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪೇಸಿಎಂ, ಕೆಸಿಸಿ (ಕಂಗಾಲ ಕಾಂಗ್ರೆಸ್ ಕಂಪನಿ) ಗಳಂತಹ ಅಭಿಯಾನಗಳ ಬಳಿಕ ಈಗ “ಥಟ್ ಅಂತ ಹೇಳಿ” ಅಭಿಯಾನವು ಕಾಂಗ್ರೆಸ್-ಬಿಜೆಪಿ ಮಧ್ಯೆ ಶುರುವಾಗಿದೆ.
ಬಿಜೆಪಿ ಟ್ವೀಟ್ ಏನು?
ಥಟ್ ಅಂತ ಹೇಳಿ!- ಹಣದಾಸೆಗೆ ಶಿಕ್ಷಕರ ಸ್ಥಾನಕ್ಕೆ ಅರ್ಹರಲ್ಲದವರನ್ನು ಶಿಕ್ಷಕರನ್ನಾಗಿ ನೇಮಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಬುಡಮೇಲು ಮಾಡಲು ಹೊರಟವರು ಯಾರು? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಂ.ಬಿ ಪಾಟೀಲ್, ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಂದು ಎ,ಬಿ,ಸಿ,ಡಿ ಆಯ್ಕೆಯನ್ನು ಅವರ ಭಾವಚಿತ್ರ ಸಹಿತ ಪೋಸ್ಟರ್ ಮಾಡಿ ಟ್ವೀಟ್ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ ಶರತ್ ಮಡಿವಾಳ, ಪ್ರವೀಣ್ ಪೂಜಾರಿ ಮತ್ತಿತರ ಹಿಂದೂ ಕಾರ್ಯಕರ್ತರ ಕೊಲೆಯಿಂದ ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದವರು ಯಾರು? ಎಂದು #ಥಟ್‌ಅಂತಹೇಳಿ #CriminalCongress ಎಂಬ ಹ್ಯಾಷ್‌ಟ್ಯಾಗ್‌ನಡಿ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಟ್ವೀಟ್ ಏನು?
ಥಟ್ ಅಂತ ಹೇಳಿ!- ರಾಜ್ಯ ಬಿಜೆಪಿ ಸರ್ಕಾರವನ್ನು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಜನ ಕರೆಯುತ್ತಾರೆ? 40%, 50%, 60% ,70% ಕಮಿಷನ್ ಎಂದು ಪೋಸ್ಟರ್ ರಚಿಸಿ ಎಂ.ಬಿ. ಪಾಟೀಲ್ ಟ್ವೀಟ್ ಮಾಡುವ ಮೂಲಕ ಜನರಿಗೆ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ | Ceiling fan price | ಸೀಲಿಂಗ್ ಫ್ಯಾನ್ ದರ 8-20% ಏರಿಕೆ ಶೀಘ್ರ, ಇಲ್ಲಿದೆ ವಿವರ
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ವ್ಯಂಗ್ಯ
ಸೋಮವಾರ (ಜ.೯) ವಿರೋಧ ಪಕ್ಷ ನಾಯಕ ಸಿದ್ದರರಾಮಯ್ಯ ಕೋಲಾರಕ್ಕೆ ಭೇಟಿ ನೀಡುವ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, “ಹೋದಲ್ಲಿ ಬಂದಲ್ಲಿ, ಕೂತಲ್ಲಿ, ನಿಂತಲ್ಲಿ ಎಲ್ಲ ಕಡೆ ನಿದ್ದೆ ಮಾಡುತ್ತಿದ್ದರೆ ಕ್ಷೇತ್ರ ಕಾಣುವುದಾದರೂ ಹೇಗೆ ಸಿದ್ದರಾಮಯ್ಯ ಅವರೇ? ಎಷ್ಟಾದರೂ ಕ್ಷೇತ್ರದಲ್ಲಿ ನಿಲ್ಲಿ. ಆದರೆ, ನಿಮ್ಮಂತೆ ನಿಮಗೂ ಬೆನ್ನಿಗೆ ಕೊಕ್ಕೆ ಹಾಕ್ತಾರೆ ಸ್ವಾಮಿ” ಎಂದು ಬಿಜೆಪಿ ಟ್ವೀಟ್ಟರ್ ಖಾತೆಯಿಂದ ಟ್ವೀಟ್ ಮೂಲಕ ಕಾಲೆಳೆಯಲಾಗಿದೆ.
ಸಂಕ್ರಾಂತಿ ಸ್ಕ್ಯಾಮ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಶೇಷ ಮುತುವರ್ಜಿಯೊಂದಿಗೆ ಬಿಜೆಪಿ ಸರ್ಕಾರ ಈಗ “ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ” ಆಚರಿಸುತ್ತಿದೆ! 40% ಕಮಿಷನ್ ಕಡ್ಡಾಯದೊಂದಿಗೆ 100% ಹುದ್ದೆಗಳ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್! ಇದರೊಂದಿಗೆ ಸಂಕ್ರಾಂತಿಗೆ ‘ಸಿಡಿ ಕ್ರಾಂತಿ’ಯ ನಿರೀಕ್ಷೆಯನ್ನೂ ಜನತೆ ಇಟ್ಟುಕೊಳ್ಳಬಹುದು! ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಅಪ್ಲೋಡ್ ಮಾಡುವ ಮೂಲಕ ವ್ಯಂಗ್ಯವಾಡಿದೆ.
ಇದನ್ನೂ ಓದಿ | ಸರ್ಕಾರ ನಮಗೆ ತಿಂಗಳಿಗೆ 6000 ರೂಪಾಯಿ ಪಿಂಚಣಿ ಕೊಡಲೇಬೇಕು ಎಂದು ಪಟ್ಟು ಹಿಡಿದ ಬೋಳುತಲೆಯ ಮಂದಿ!