Site icon Vistara News

Karnataka Election: ಬಜರಂಗದಳಕ್ಕೆ ಅಪಮಾನ; 100 ಕೋಟಿ ರೂ. ಪರಿಹಾರ ಕೇಳಿ ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್

VHP

VHP

ಬೆಂಗಳೂರು/ನವದೆಹಲಿ: ಬಜರಂಗದಳ ಸಂಘಟನೆಯನ್ನು ನಿಷೇಧಿಸುವ ಕುರಿತು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೊರಡಿಸಿದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯು ಇದೇ ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರ‍್ಯಾಲಿ, ಸಮಾವೇಶಗಳಲ್ಲಿ ಜೈ ಬಜರಂಗಬಲಿ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ, ಬಜರಂಗದಳದ ಮಾತೃಸಂಸ್ಥೆಯಾದ ವಿಶ್ವ ಹಿಂದು ಪರಿಷತ್‌, 100 ಕೋಟಿ ರೂ. ಪರಿಹಾರ ಕೋರಿ ಕಾಂಗ್ರೆಸ್‌ಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳದ ಕುರಿತು ಮಾನಹಾನಿಯಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, 100 ಕೋಟಿ ರೂ. ಪರಿಹಾರ ನೀಡಬೇಕು ಎಂದು ವಿಎಚ್‌ಪಿಯ ಚಂಡೀಗಢ ಘಟಕ ಹಾಗೂ ಅದರ ಯುವ ಘಟಕ ಬಜರಂಗದಳದ ಪರ ವಕೀಲರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೇ 4ರಂದು ಲೀಗಲ್‌ ನೋಟಿಸ್‌ ಕಳುಹಿಸಿದೆ. ಆದರೆ, ಇದುವರೆಗೆ ನೋಟಿಸ್‌ ಕುರಿತು ಕಾಂಗ್ರೆಸ್‌ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

“ಪ್ರಣಾಳಿಕೆಯ 10ನೇ ಪುಟದಲ್ಲಿ ಬಜರಂಗದಳದ ಕುರಿತು ಮಾನಹಾನಿ ಉಲ್ಲೇಖಗಳನ್ನು ಮಾಡಲಾಗಿದೆ. ಬಜರಂಗದಳವನ್ನು ಉಗ್ರ ಸಂಘಟನೆಗಳಿಗೆ ಹೋಲಿಸಲಾಗಿದೆ. ಹಾಗೆಯೇ, ಬಜರಂಗದಳವನ್ನು ನಿಷೇಧಗೊಳಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಈಗಾಗಲೇ ಪಿಎಫ್‌ಐಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಂತಹ ಸಂಘಟನೆಗಳ ಜತೆ ಬಜರಂಗದಳವನ್ನು ಹೋಲಿಕೆ ಮಾಡಲಾಗಿದೆ” ಎಂದು ನೋಟಿಸ್‌ನಲ್ಲಿ ತಿಳಿಸಿದೆ.

“ಪಿಎಫ್‌ಐ ಹಾಗೂ ಸಿಮಿ ಉಗ್ರ ಸಂಘಟನೆಗಳಾಗಿವೆ. ಇವುಗಳು ಅಲ್‌ಕೈದಾ ಹಾಗೂ ಐಸಿಸ್‌ ಸೇರಿ ಹಲವು ಜಾಗತಿಕ ಉಗ್ರ ಸಂಘಟನೆಗಳ ಜತೆ ಗುರುತಿಸಿಕೊಂಡಿವೆ. ನೂರಕ್ಕೂ ಅಧಿಕ ರಾಷ್ಟ್ರಗಳು ಅಲ್‌ಕೈದಾ ಹಾಗೂ ಐಸಿಸ್‌ ಉಗ್ರ ಸಂಘಟನೆಗಳನ್ನು ನಿಷೇಧಿಸಿವೆ. ಆದರೆ, ಬಜರಂಗದಳವು ಏಕತೆ, ಸಹಿಷ್ಣುತೆ, ಧಾರ್ಮಿಕ ಏಕತೆ, ರಾಷ್ಟ್ರೀಯ ಸಮಗ್ರತೆಯಲ್ಲಿ ನಂಬಿಕೆ ಇರಿಸಿದೆ. ಭಾರತ ಮಾತೆಯ ಸೇವೆಗಾಗಿ ಸಿದ್ಧವಿದೆ. ಭಗವಾನ್‌ ರಾಮ ಹಾಗೂ ಹನುಮನಿಂದ ಸ್ಫೂರ್ತಿಯಾಗಿ ಸಂಘಟನೆಯಾಗಿದೆ” ಎಂದು ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಬಜರಂಗದಳ, ಪಿಎಫ್‌ಐ ಸೇರಿ ದ್ವೇಷ ಹರಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಪ್ರಣಾಳಿಕೆಯಲ್ಲ ಕಾಂಗ್ರೆಸ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುವುದು ತಪ್ಪು ಹೇಳಿಕೆಯಲ್ಲ, ಐತಿಹಾಸಿಕ ಪ್ರಮಾದ…

Exit mobile version