ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್‌ಗೆ ಮತ ನೀಡುವುದು ಎಂದರೆ, ಕಾಂಗ್ರೆಸ್‌ಗೆ ವೋಟ್ ಮಾಡಿದಂತೆ. ಚುನಾವಣೆ ವೇಳೆ ಕಚ್ಚಾಡುವ ಕಾಂಗ್ರೆಸ್-ಜೆಡಿಎಸ್ ಫಲಿತಾಂಶದ ಬಳಿಕ ಒಂದಾಗುತ್ತವೆ. ಹಾಗಾಗಿ, ಬೆಂಗಳೂರು ಮತ್ತು ಕರ್ನಾಟಕ ಮತದಾರರು ಅಸ್ಥಿರತೆಗೆ ಅವಕಾಶವನ್ನು ನೀಡಬಾರದು. ಈ ಬಾರಿ ಬಿಜೆಪಿಗೆ ಪೂರ್ಣ ಮತ್ತು ಸ್ಪಷ್ಟ ಬಹುಮತವನ್ನು ನೀಡಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು, ಜಾತಿವಾದ, ಪರಿವಾರವಾದ ಮತ್ತು ಭ್ರಷ್ಟಾಚಾರಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು(Karnataka Election).
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೂತ್ ಅಧ್ಯಕ್ಷರು ಮತ್ತು ಬಿಎಲ್ಎ-2 ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಈ ಬಾರಿ ಬೆಂಗಳೂರಲ್ಲಿ 21 ಸೀಟುಗಳನ್ನು ಗೆದ್ದು ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಬಿಜೆಪಿ ರಚಿಸಲಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಪ್ರತಿ ಮತದಾರರನ್ನು ಸಂಪರ್ಕಿಸಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಗಳು ಕೈಗೊಂಡಿರುವ ಜನರ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಬೇಕು. ಮುಂದಿನ ಆರು ತಿಂಗಳವರೆಗೆ ಕಾರ್ಯಕರ್ತರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು, ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರು ಮತ್ತು ಕರ್ನಾಟಕದ ಜನರು ಈ ಬಾರಿ ನಿರ್ಧರಿಸಬೇಕಿದೆ. ದೇಶಭಕ್ತರ ಜತೆಗಿರಬೇಕೋ ಅಥವಾ ತುಕ್ಡೇ ತುಕ್ಡೇ ಗ್ಯಾಂಗ್ ಸಾಕುವ ಪಕ್ಷಗಳ ಜತೆಗೆ ಹೋಗಬೇಕು ಎಂಬುದನ್ನು ನಿರ್ಧರಿಸಬೇಕು. ಬಿಜೆಪಿಗೆ ವೋಟ್ ಬ್ಯಾಂಕ್ ರಾಜಕಾರಣ ಮುಖ್ಯವಲ್ಲ. ಈ ದೇಶದ ಭದ್ರತೆಯು ಮುಖ್ಯ. ಆ ನಿಟ್ಟಿನಲ್ಲಿ ನಾವು ಸಿಎಎ ಜಾರಿ ಮಾಡಿದ್ದೇವೆ. ತಲಾಕ್ ಪದ್ಧತಿ, 370 ವಿಧಿ ರದ್ದು ಮಾಡುವ ಮೂಲಕ ದೇಶದ ಭದ್ರತೆಗೆ ಹಿಂಜರಿಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದೇವೆ. ಪಿಎಫ್ಐ ಮುಕ್ತ ಕರ್ನಾಟಕ ಬೇಕಿದ್ದರೆ ಜನರು ಬಿಜೆಪಿ ವೋಟ್ ನೀಡುವ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ | Karnataka Election | ಅಮಿತ್ ಶಾ ಮೂಲಕ ಮೈಸೂರು ಭಾಗದಲ್ಲಿ ಬಿಜೆಪಿಯ ದಂಡಯಾತ್ರೆ ಆರಂಭ: ಕಟೀಲ್