ರಾಯಚೂರು: “ನಾನು ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಸಾರ್ವಜನಿಕ ಜೀವನಕ್ಕೆ ಮರಳಲು ಮುಂದಾಗಿದ್ದೇನೆ. ಡಿ. 25ಕ್ಕೆ ಎಲ್ಲವನ್ನೂ ಹೇಳುತ್ತೇನೆ. ನನ್ನ ಜತೆ ಯಾರು ಇರುತ್ತಾರೆ ಯಾರು ಬರುತ್ತಾರೆ ಎಂಬುದನ್ನು ಅಂದೇ ಹೇಳುತ್ತೇನೆ” ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ರಾಜ್ಯದಲ್ಲಿ ಇನ್ನೈದು ತಿಂಗಳಿನಲ್ಲಿ ಚುನಾವಣೆ (Karnataka Election) ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಸಕ್ರಿಯಗೊಂಡಿರುವ ರೆಡ್ಡಿ ಅವರ ಈ ಹೇಳಿಕೆಯು, ಅವರು ಹೊಸ ಪಕ್ಷ ಕಟ್ಟುವುದು ಬಹುತೇಕ ಪಕ್ಕಾ ಆಗಿದೆಯಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ರಾಯಚೂರಿನ ಮಸ್ಕಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಪ್ರಮುಖರನ್ನು ಭೇಟಿಯಾಗಲು ಮಸ್ಕಿಗೆ ಬಂದಿದ್ದೇನೆ. ಇಲ್ಲಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ. ಡಿ. 25ಕ್ಕೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ನನ್ನ ನಿರ್ಧಾರದ ಬಗ್ಗೆ ಎಲ್ಲರೂ ಇನ್ನು ೭೨ ಗಂಟೆಗಳವರೆಗೆ ದಯವಿಟ್ಟು ಕಾಯಿರಿ. ಆಗ ನನ್ನ ಜತೆ ಬರುವವರು, ಇರುವವರ ಬಗ್ಗೆಯೂ ಹೇಳುತ್ತೇನೆ ಎಂದು ಹೇಳಿದರು. ಕೇಳಿದ ಪ್ರತಿಯೊಂದು ಪ್ರಶ್ನೆಗೂ ಡಿ. 25 ಎಂದೇ ಉತ್ತರಿಸಿದರು.
ರೆಸಾರ್ಟ್‌ನಲ್ಲಿ ಗುಪ್ತ ಸಭೆ
ಈ ಮಧ್ಯೆ ಮಸ್ಕಿಯ ರೆಸಾರ್ಟ್‌ವೊಂದರಲ್ಲಿ ಜನಾರ್ದನ ರೆಡ್ಡಿ ಹಲವರೊಂದಿಗೆ ಗುಪ್ತ ಸಭೆ ನಡೆಸುತ್ತಿದ್ದಾರೆ. ಇದು 2023 ಚುನಾವಣೆಗೆ ಆಕಾಂಕ್ಷಿಗಳ ಜತೆಗೆ ಒನ್ ಟು ಒನ್ ಮೀಟಿಂಗ್ ಎಂದು ಹೇಳಲಾಗಿದೆ. ಹೀಗಾಗಿ ರೆಡ್ಡಿಯವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.
ಇದನ್ನೂ ಓದಿ | Karnataka Election | ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ: ಸಿ.ಟಿ. ರವಿ
ರೆಡ್ಡಿ ಜತೆ ಸಿಎಂ ಸಂಪರ್ಕದಲ್ಲಿದ್ದಾರೆ- ಶ್ರೀರಾಮುಲು
ಜನಾರ್ದನ ರೆಡ್ಡಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಇನ್ನೂ ಎಲ್ಲೂ ಹೇಳಿಕೆ ನೀಡಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಇರಬೇಕೆಂದು ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರು ಕೂಡ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ರೆಡ್ಡಿ ಬಿಜೆಪಿ ಬಿಡಲ್ಲ, ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಿಎಸ್‌ವೈ
ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇರುತ್ತಾರೆ. ಪಕ್ಷವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಗೊಂದಲ ಉಂಟಾಗಿರಬಹುದು. ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಕಳೆದ ವಾರ (ಡಿ.೧೫) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.
ಜನಾರ್ದನ ರೆಡ್ಡಿಯವರ ಮೇಲೆ ಕೆಲವೊಂದು ಕೇಸ್‌ಗಳಿರುವುದರಿಂದ ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿಳಂಬವಾಗಿದೆ. ರೆಡ್ಡಿಯವರ ಜತೆ ಈಗಾಗಲೇ ನಾನು ಮಾತನಾಡಿದ್ದೇನೆ. ಕೇಸ್ ಒಂದೊಂದೇ ಇತ್ಯರ್ಥವಾಗುತ್ತಿದ್ದು, ವರಿಷ್ಠರ ಜತೆ ಮಾತನಾಡಿ, ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲಾಗುವುದು ಎಂದು ಬಿಎಸ್‌ವೈ ಹೇಳಿದ್ದರು.
ಇದನ್ನೂ ಓದಿ | Karnataka Election | ಎಚ್.ಡಿ. ಕೋಟೆಯಲ್ಲಿ ಅಭ್ಯರ್ಥಿ ಪ್ರಕಟಿಸದ ದಳಪತಿಗಳು, ಬಿಜೆಪಿ ಕದ ತಟ್ಟಿದ ಆಕಾಂಕ್ಷಿಗಳು