ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ್ದು 196 ಕೋಡ್ ನಂಬರ್ ಆಗಿದೆ. ಮುಂಬರುವ ಚುನಾವಣೆಯಲ್ಲಿ (Karnataka Election) ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ನಮ್ಮ ಪಕ್ಷದಿಂದ ಇನ್ನೂ ಅಭ್ಯರ್ಥಿಯ ಹೆಸರು ಪ್ರಕಟ ಮಾಡಲಾಗಿಲ್ಲ. ಈಗ ನಾನು ಹಾಲಿ ಶಾಸಕನಿದ್ದೇನೆ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಆ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹಾಲಿ ಶಾಸಕ ಪ್ರೀತಂ ಗೌಡ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸ್ವಕ್ಷೇತ್ರದಲ್ಲಿ ತಮಗೆ ಟಿಕೆಟ್ ಸಿಗುವುದು ಅನುಮಾನ ಎಂದು ಪರೋಕ್ಷವಾಗಿ ಹೇಳಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.
ಆಮ್ ಆದ್ಮಿ, ಕಾಂಗ್ರೆಸ್, ಜನತಾದಳದವರಲ್ಲದೆ, ಎಸ್‌ಡಿಪಿಐ, ಬಿಎಸ್‌ಪಿಯವರೂ ಇದ್ದಾರೆ. ಎಲ್ಲರೂ ಓಡಾಟ ಮಾಡುತ್ತಿದ್ದಾರೆ, ಯಾರ‌್ಯಾರು ಯಾವ್ಯಾವ ಸಂದರ್ಭದಲ್ಲಿ ನಾಮಿನೇಷನ್ ಮಾಡುತ್ತಾರೋ ನೋಡಬೇಕು. ಇನ್ನು ಬಿಜೆಪಿಯಿಂದ ಇನ್ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಎಲ್ಲದನ್ನೂ ನಮ್ಮ ಚುನಾವಣೆ ನಿರ್ವಹಣಾ ಸಮಿತಿ ದೆಹಲಿಯಲ್ಲಿ ತೀರ್ಮಾನ ಮಾಡಲಿದೆ. ಯಾರ‌್ಯಾರು ಯಾವ್ಯಾವ ಕ್ಷೇತ್ರಕ್ಕೆ ಕ್ಯಾಂಡಿಡೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಪ್ರೀತಂ ಗೌಡ ಸುದ್ದಿಗಾರರಿಗೆ ತಿಳಿಸಿದರು.
ತಮ್ಮ ಸವಾಲನ್ನು ಸಂಸದ ಪ್ರಜ್ವಲ್ ರೇವಣ್ಣ ಸ್ವೀಕರಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರೀತಂ ಗೌಡ, ನಾಮಿನೇಷನ್ ಮಾಡಿದ ಮೇಲೆ ಸವಾಲು, ಉತ್ತರ ಎಲ್ಲದರ ಬಗ್ಗೆಯೂ ಮಾತನಾಡೋಣ, ಮುಂಚಿತವಾಗಿ ಹೇಳುವುದು ಬೇಡ. ಜನವರಿ ಒಂದರಿಂದ ಒಂದು ಪಥ್ಯ ತೆಗೆದುಕೊಂಡಿದ್ದೇನೆ. ಯಾರ ಬಗ್ಗೆಯೂ ನಾನೇನೂ ಮಾತನಾಡುವುದಿಲ್ಲ. ನನ್ನ ಬಗ್ಗೆ ನಾನು ಮಾತಾಡುತ್ತೇನೆ. ನಮ್ಮ ಕ್ಷೇತ್ರದ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ಡಿ. 31ರೊಳಗೆ ಏನೇನು ಮಾತನಾಡಬೇಕೋ ಎಲ್ಲವನ್ನೂ ಮಾತನಾಡಿದ್ದೇನೆ. ಅವರಿಗೂ ಅವಕಾಶ ಕೊಡಬೇಕಲ್ಲವೇ? ಯಾವಾಗಲೂ ಸಮಾನ ಅವಕಾಶವಿರಬೇಕು. ನಾಲ್ಕು ವರ್ಷ ನಾನು ಮಾತನಾಡಿದ್ದೇನೆ, ಕೊನೇ ಪಕ್ಷ ಇಂದು ಲೆವೆಲ್ ಪ್ಲೇಯಿಂಗ್ ಗ್ರೌಂಡ್ ಇರಬೇಕೆಂದರೆ ಅವರಿಗೆ ಒಂದು ನಾಲ್ಕು ತಿಂಗಳು ಮಾತನಾಡಲು ಬಿಡಬೇಕು. ನಾನು ನಾಲ್ಕು ವರ್ಷ ಮಾತನಾಡಿದ್ದೇನೆ. ಅವರು ನಾಲ್ಕು ತಿಂಗಳು ಮಾತನಾಡಲಿ. ನಾನು ಸವಾಲು ಹಾಕಿದಾಗ ಮಾತನಾಡಿರಲಿಲ್ಲ. ಈಗ ಅವರು ಪ್ರತಿ ಸವಾಲು ಹಾಕಿದಾಗ ನಾನ್ಯೇಕೆ ಮಾತನಾಡಬೇಕು? ನಾನು ನಾಲ್ಕು ತಿಂಗಳು ಟೈಂ ತಗೆದುಕೊಳ್ಳುತ್ತೇನೆ. ಅವರು ನಾಲ್ಕು ವರ್ಷದಿಂದ ಮಾತನಾಡಿರಲಿಲ್ಲ, ಈಗ ನಾಲ್ಕು ತಿಂಗಳು ಅವಕಾಶ ಕೊಟ್ಟು ರಿಸಲ್ಟ್ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.
ಇದನ್ನೂ ಓದಿ | Road Accident | ಪ್ರತ್ಯೇಕ ಕಡೆಗಳಲ್ಲಿ ನಡೆದ ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲಿ ಮೃತ್ಯು