ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election) ಇನ್ನೈದೇ ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಸಹ ಗರಿಗೆದರಿದೆ. ರಾಜಕೀಯ ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷದತ್ತ ಮುಖ ಮಾಡುವ ಪರಿಪಾಠವೂ ಮುಂದುವರಿದಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ರಾಜಕಾರಣವು ಮತ್ತೆ ಮುನ್ನೆಲೆಗೆ ಬಂದಿದೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಯಲ್ಲಾಪುರದ ಪ್ರತಿಷ್ಠಿತ ಉದ್ಯಮಿ ಶ್ರೀನಿವಾಸ್ ಭಟ್ ಧಾತ್ರಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಗುರುವಾರ (ಡಿ.೧೫) ಮಾಜಿ ಶಾಸಕ ವಿ.ಎಸ್. ಪಾಟೀಲ್ ಹಾಗೂ ಉದ್ಯಮಿ ಶ್ರೀನಿವಾಸ್ ಭಟ್ ಪಕ್ಷ ಸೇರ್ಪಡೆಯಾದರು. ಇದು ಉತ್ತರ ಕನ್ನಡ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಯಾಗಿದೆ.
ಯಾರು ಈ ಶ್ರೀನಿವಾಸ ಭಟ್ ಧಾತ್ರಿ?
ಶ್ರೀನಿವಾಸ ಭಟ್ ಧಾತ್ರಿ ಮೂಲತಃ ಯಲ್ಲಾಪುರದವರು. ಮೈಸೂರಿನಲ್ಲಿ ಧಾತ್ರಿ ಪ್ರಾಪರ್ಟಿಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅಲ್ಲದೆ, ತಮ್ಮದೇ ಆದ ಧಾತ್ರಿ ಫೌಂಡೇಶನ್ ಮೂಲಕ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಉ.ಕ. ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಈ ಮೂಲಕ ಜಿಲ್ಲೆಯ ಅದರಲ್ಲಿಯೂ ಯಲ್ಲಾಪುರದ ಜನತೆಗೆ ಚಿರಪರಿಚಿತರಾಗಿದ್ದಾರೆ.
ಇದನ್ನೂ ಓದಿ | Karnataka Election | ಬಿಎಸ್‌ವೈ ಮತ್ತು ನನ್ನ ಸಂಬಂಧ ತಂದೆ-ಮಗನ ಸಂಬಂಧ, ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ ಎಂದ ಬೊಮ್ಮಾಯಿ
ಇನ್ನು ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರದಡಿಯಲ್ಲಿ ಬೆಳೆದು ಬಂದವರು. ರಾಷ್ಟ್ರ, ದೇಶಭಕ್ತಿಯ ನೆಲೆಗಟ್ಟಿನಲ್ಲಿ ಬಂದ ಇವರಿಗೆ ಸಹಜವಾಗಿ ಬಿಜೆಪಿ ಬಗ್ಗೆ ಅಪಾರ ಒಲವು ಇತ್ತು. ಈ ಹಿನ್ನೆಲೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದಾರೆ. ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದರು. ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದ್ದು, ಈಗ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಬಿಜೆಪಿ ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದೆ.
ಯಲ್ಲಾಪುರದಲ್ಲಿ ಬಲಗೊಂಡ ಕಾಂಗ್ರೆಸ್
ಕ್ಷೇತ್ರ ವಿಂಗಡಣೆ ಬಳಿಕ ಹೊಸ ಕ್ಷೇತ್ರವಾಗಿ ರೂಪುಗೊಂಡಿದ್ದ ಯಲ್ಲಾಪುರ-ಮುಂಡಗೋಡ ವಿಧಾನಸಭೆ ಕ್ಷೇತ್ರಕ್ಕೆ ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ವಿ.ಎಸ್. ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ಪರಾಭವಗೊಂಡಿದ್ದರು. ಈ ವೇಳೆ ವಿ.ಎಸ್. ಪಾಟೀಲ್ ಜನಸ್ನೇಹಿ ಶಾಸಕ ಎಂದೇ ಚಿರಪರಿಚಿತರಾಗಿದ್ದರು. ಮೃದು ಸ್ವಭಾವದ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದರು. ಆದರೆ, ೨೦೧೩ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹೆಬ್ಬಾರ್ ಜಯಗಳಿಸಿದ್ದರು. ೨೦೧೮ರಲ್ಲಿಯೂ ಅವರೇ ಗೆದ್ದುಕೊಂಡು ಬಂದರು.
ಆದರೆ, ನೂತನ ಬಿಜೆಪಿ ಸರ್ಕಾರ ರಚನೆಯ ಸಂಬಂಧ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ೨೦೧೯ರಲ್ಲಿ ಉಪ ಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಹೆಬ್ಬಾರ್ ಜಯ ಗಳಿಸಿದ್ದರು. ಈ ವೇಳೆ ತಮ್ಮ ಕಡೆಗಣನೆಯಾಗಿರುವುದು ವಿ.ಎಸ್. ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಅಸಮಾಧಾನದ ಮುಂದುವರಿದ ಭಾಗವೇ ಈಗ ಕಾಂಗ್ರೆಸ್ ಸೇರ್ಪಡೆ ಎಂದು ಹೇಳಲಾಗಿದೆ. ಈಗ ಕಾಂಗ್ರೆಸ್‌ಗೆ ಇಬ್ಬರು ನಾಯಕರು ಸೇರ್ಪಡೆಯಾಗಿರುವುದರಿಂದ, ಯಲ್ಲಾಪುರದಲ್ಲಿ ಸೊರಗಿದಂತೆ ಇದ್ದ ಕಾಂಗ್ರೆಸ್‌ಗೆ ಇದೀಗ ಹೊಸ ಚೈತನ್ಯ ಬಂದಂತಾಗಿದೆ.
ಇದನ್ನೂ ಓದಿ | karnataka Election | ಜನಾರ್ದನ ರೆಡ್ಡಿ ಬಿಜೆಪಿ ಬಿಡಲ್ಲ, ಹೊಸ ಪಕ್ಷ ಕಟ್ಟಲ್ಲ: ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಸ್ಪಷ್ಟೋಕ್ತಿ
ಕಾಂಗ್ರೆಸ್ ಟಿಕೆಟ್ ಯಾರ “ಕೈ”ಗೆ?
ಈಗ ಬಿಜೆಪಿಯ ಇಬ್ಬರು ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಸಚಿವ ಹಾಗೂ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್‌ಗೆ ಮುಂದಿನ ಚುನಾವಣೆ ಸಲುಭದ ಹಾದಿಯಲ್ಲ ಎಂಬ ಸಂದೇಶ ರವಾನೆ ಮಾಡಿದಂತಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ರಾಜ್ಯಾದ್ಯಂತ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಲಕ್ಷ್ಮಣ ಬನ್ಸೊಡೆ ಒಬ್ಬರೇ ಅರ್ಜಿ ಸಲ್ಲಿಕೆ ಮಾಡಿದ್ದರು. ಇವರೊಬ್ಬರನ್ನು ಬಿಟ್ಟರೆ ಯಾರೂ ಉಮೇದುವಾರಿಕೆ ಸಲ್ಲಿಸಲು ಮುಂದೆ ಬಂದಿರಲಿಲ್ಲ. ಈಗ ವಿ.ಎಸ್. ಪಾಟೀಲ್ ಹಾಗೂ ಶ್ರೀನಿವಾಸ ಭಟ್ ಧಾತ್ರಿ ಸೇರ್ಪಡೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಪ್ರಭಾವಿಯಾಗಿದ್ದು, ಪಕ್ಷದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿ.ಎಸ್. ಪಾಟೀಲ್ ಹಾಗೂ ಶ್ರೀನಿವಾಸ ಧಾತ್ರಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಾಟೀಲರು ಈಗಾಗಲೇ ಕ್ಷೇತ್ರದಿಂದ ಆಯ್ಕೆಯಾಗಿ ಜನಮನ್ನಣೆ ಗಳಿಸಿದ್ದಾರಾದರೂ ಉಪ ಚುನಾವಣೆಯೂ ಸೇರಿ ಒಟ್ಟು ಮೂರು ಬಾರಿ ಸೋಲನ್ನಪ್ಪಿದ್ದರು. ಇನ್ನು ಶ್ರೀನಿವಾಸ ಭಟ್ ಧಾತ್ರಿ ಅವರು ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಜನರಿಗೆ ಚಿರಪರಿಚಿತರಾಗುತ್ತಿದ್ದಾರೆ. ಹೀಗಾಗಿ ಇವರೂ ಸಹ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈಗ ದೇಶಪಾಂಡೆ ಅವರ ಒಲವು ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನ ಯಾವ ರೀತಿ ಇರಲಿದೆ? ಯಾರ ಕೈಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ | Karnataka Election | ಡಿಕೆಶಿ ಬೇಡ ಅಂದ್ರೂ ಅಭ್ಯರ್ಥಿ ಘೋಷಣೆ ಮಾಡಲು ಸಿದ್ದರಾಮಯ್ಯಗೆ ಯಾರು ಅಧಿಕಾರ ಕೊಟ್ರು: ಈಶ್ವರಪ್ಪ