Site icon Vistara News

Karnataka Election | ವೈಎಸ್‌ವಿ ದತ್ತ, ಎಚ್‌. ನಾಗೇಶ್‌ ಕೈ ಸೇರ್ಪಡೆ, ಇನ್ನು ನಿತ್ಯವೂ ಕಾಂಗ್ರೆಸ್‌ ಪರ್ವ ಎಂದ ಡಿಕೆಶಿ

YSV datta, H Nagesh

ಬೆಂಗಳೂರು: ಕಡೂರಿನ ಮಾಜಿ ಶಾಸಕ, ಜೆಡಿಎಸ್‌ ನಾಯಕ ವೈಎಸ್‌ವಿ ದತ್ತ, ಮುಳಬಾಗಿಲಿನ ಹಾಲಿ ಶಾಸಕ, ಬಿಜೆಪಿ ಮುಖಂಡ ಎಚ್‌. ನಾಗೇಶ್‌ ಅವರು ಶನಿವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸೇರಿದರು. ಇವರಲ್ಲದೆ ಮೈಸೂರಿನ ಮೋಹನ್‌ ಕುಮಾರ್‌, ಕೋಲಾರದ ದಯಾನಂದ್‌ ಅವರು ಕೂಡಾ ಕೈಹಿಡಿದರು. ಈ ಸಂಭ್ರಮದ ಹೊತ್ತಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಇದು ಆರಂಭ ಮಾತ್ರ. ಇನ್ನು ಮುಂದೆ ಪ್ರತಿ ವಾರವೂ ಕಾಂಗ್ರೆಸ್‌ ಪಕ್ಷಕ್ಕೆ ಬೇರೆ ಬೇರೆ ನಾಯಕರ ಸೇರ್ಪಡೆ ನಡೆಯುತ್ತಲೇ ಇರುತ್ತದೆ ಎಂದರು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಈ ಹಿಂದಿನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು. ಜತೆಗೆ ಕಾಂಗ್ರೆಸ್‌ ಸೇರ್ಪಡೆಯಾದವರ ಅಭಿಮಾನಿಗಳು ಕೂಡಾ ದೊಡ್ಡ ಸಂಖ್ಯೆಯಲ್ಲಿದ್ದರು

ಇದು ಆರಂಭ ಮಾತ್ರ, ಇನ್ನು ಕಾಂಗ್ರೆಸ್‌ ಪರ್ವ
ʻʻರಾಜ್ಯದಲ್ಲಿ ಸೃಷ್ಟಿಯಾದ ಅತಂತ್ರ ಸ್ಥಿತಿಯಲ್ಲಿ ಹಲವರು ನಮ್ಮಲ್ಲಿ ಗೆದ್ದು ಬಿಜೆಪಿಗೆ ಹೋಗಿದ್ದಾರೆ. ಆದರೂ ಬಿಜೆಪಿಗೆ ಸರಿಯಾಗಿ ಆಡಳಿತ ನೀಡಲು ಆಗುತ್ತಿಲ್ಲ. ಹಾಗಾಗಿ ಹಲವಾರು ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ವೈಎಸ್‌ವಿ ದತ್ತಾ, ಎಚ್‌. ನಾಗೇಶ್‌ ನಮ್ಮಲ್ಲಿ ಬಂದಿದ್ದಾರೆ. ಎಚ್. ನಾಗೇಶ್‌ ಹಾಲಿ ಶಾಸಕರು. ಆದರೂ ಬಿಜೆಪಿಯ ಅಧಿಕಾರ ತ್ಯಾಗ ಮಾಡಿ ಬಂದಿದ್ದಾರೆ. ಕಾಂಗ್ರೆಸ್ ಸಹ ಸದಸ್ಯರಾಗಿ ಸೇರುತ್ತಿದ್ದಾರೆʼʼ ಎಂದರು.

ʻʻವೈಎಸ್ ವಿ ದತ್ತ ಅವರನ್ನು ನಾನು ಕಳೆದ ೪೦ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನಾನು ವಿದ್ಯಾರ್ಥಿಯಾಗಿದ್ದಾಗ ಅವರು ಶಿಕ್ಷಕರಾಗಿದ್ದರು. ಜೆಡಿಎಸ್‌ನಲ್ಲಿ ಅವರದೇ ಛಾಪು ಮೂಡಿಸಿದ್ದಾರೆ. ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ಇಲ್ಲಿಗೆ ಬಂದಿದ್ದಾರೆ. ರಾಹುಲ್‌ ಗಾಂಧಿ, ಖರ್ಗೆ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬಂದಿದ್ದಾರೆ. ಇವತ್ತು ಇನ್ನೂ ಆರಂಭವಷ್ಟೇ. ವಾರಕ್ಕೊಬ್ಬರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆʼʼ ಎಂದರು.

ʻʻಇವರೆಲ್ಲ ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಕಂಡಿಷನ್‌ ಇಲ್ಲದೆ ಬಂದರೆ ಸ್ವಾಗತ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ನಮ್ಮದೇ ಆದ ರಾಜಕೀಯ ಲೆಕ್ಕಚಾರವಿದೆ. ಅದನ್ನು ಗಮನಿಸಿ ಕಣಕ್ಕೆ ಇಳಿಸುತ್ತೇವೆʼʼ ಎಂದು ವಿವರಿಸಿದರು ಡಿಕೆಶಿ. ಇನ್ಮುಂದೆ ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಹೀಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಗುತ್ತವೆʼʼ ಎಂದರು.

ವೈಎಸ್‌ವಿ ದತ್ತ ಹೇಳಿದ್ದೇನು?
ʻʻಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಗಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದರೆ ಈಗ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಎಂದು ಯಾವುದೇ ಷರತ್ತುಗಳಿಲ್ಲದೆ ಪಕ್ಷ ಸೇರುತ್ತಿದ್ದೇನೆ. ನಾನು ಮೊದಲಿನಿಂದಲೂ ಎಡಪಂಥೀಯ. ಹೀಗಾಗಿ ನಂಗೆ ಅತ್ಯಂತ ಹತ್ತಿರ ಎನಿಸಿದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆʼʼ ಎಂದು ೭೦ ವರ್ಷದ ವೈಎಸ್‌ವಿ ದತ್ತ ಹೇಳಿದರು.

ʻʻಅನಿವಾರ್ಯ ಕಾರಣಗಳಿಂದ ಬಿಜೆಪಿ ಸೇರಿದ್ದೆ. ಈಗ ಪರಿಶಿಷ್ಟ ಜಾತಿ, ಜನಾಂಗಗಳ ರಕ್ಷಣೆ ಕಾಂಗ್ರೆಸಿನಿಂದಷ್ಟೇ ಸಾಧ್ಯ ಎಂದು ತಿಳಿದು ಮತ್ತೆ ಕಾಂಗ್ರೆಸ್‌ಗೆ ಬರುತ್ತಿದ್ದೇನೆʼʼ ಎಂದು ಎಚ್‌. ನಾಗೇಶ್‌ ಹೇಳಿದರು. ನಾನು ಮುಳಬಾಗಿಲು ಹಾಲಿ ಶಾಸಕ. ಮಹದೇವಪುರದಲ್ಲಿ ನನ್ನನ್ನು ಕರೆಯುತ್ತಿದ್ದಾರೆ. ನನಗೆ ಹೈಕಮಾಂಡ್ ಎಲ್ಲಿ ಟಿಕೆಟ್ ಕೊಟ್ಟರೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ | Yogeshwar Audio | ಬಿಜೆಪಿ Vs ಬಿಜೆಪಿ ಎಂದು ಗೇಲಿ ಮಾಡಿದ ಕಾಂಗ್ರೆಸ್‌, ಕಮಲ ಪಕ್ಷದ ನಿಜ ಬಣ್ಣ ಬಯಲಾಯ್ತು ಎಂದ ಕೈ

Exit mobile version