ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಎಲ್ಲೆಡೆ ಹದ್ದುಗಣ್ಣಿಟ್ಟಿದ್ದು, ಅಕ್ರಮ ಹಣ ಮತ್ತು ವಸ್ತುಗಳ ಸಾಗಾಟವನ್ನು ಅಲ್ಲಲ್ಲಿ ಪತ್ತೆ ಹಚ್ಚುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 100 ಕೋಟಿ ರೂಪಾಯಿಗೂ ಮೀರಿದ ಅಕ್ರಮ ಸಾಗಾಟ ಪತ್ತೆಯಾಗಿದೆ. ಇದರ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಒಂದು ಕೋಟಿ ರೂ. ಸಾಗಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಣ ವಿಜಯನಗರದಿಂದ ಜಯ ನಗರಕ್ಕೆ ಸಾಗಿಸಲಾಗುತ್ತಿದ್ದು, ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.
ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಬಿಎಂಪಿ ಕಚೇರಿ ಬಳಿ ಆಟೊ ರಿಕ್ಷಾವೊಂದು ಕೆಟ್ಟು ನಿಂತಿತ್ತು. ಅದರಲ್ಲಿದ್ದ ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಅದರಲ್ಲಿ ಒಂದು ಕೋಟಿ ರೂ. ಹಣ ಇರುವುದು ಪತ್ತೆಯಾಗಿತ್ತು. ಸುರೇಶ್ ಮತ್ತು ಪ್ರವೀಣ್ ಎಂಬಿಬ್ಬರು ವ್ಯಕ್ತಿಗಳು ಈ ಹಣವನ್ನು ಸಾಗಿಸುತ್ತಿದ್ದರು. ಇದೀಗ ಆಟೊ ರಿಕ್ಷಾ, ಹಣ ಮತ್ತು ಇಬ್ಬರು ವ್ಯಕ್ತಿಗಳು ಪೊಲೀಸರು ವಶಕ್ಕೆ ಪಡೆದಿದ್ದು, ಹಣದ ಮೂಲದ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳು ಆಟೊ ಬುಕ್ ಮಾಡಿಕೊಂಡು ಹಣವನ್ನು ಸಾಗಾಟ ಮಾಡುತ್ತಿದ್ದರು. ರಿಕ್ಷಾದಲ್ಲಿ ಎರಡು ಬ್ಯಾಗ್‌ಗಳಲ್ಲಿ ಒಟ್ಟು ಒಂದು ಕೋಟಿ ರೂ. ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ವಶದಲ್ಲಿರುವ ವ್ಯಕ್ತಿಗಳ ಬಳಿ ಹಣದ ಬಗ್ಗೆ ದಾಖಲೆಯನ್ನು ಕೇಳುತ್ತಿದ್ದಾರೆ. ಜತೆಗೆ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಇದು ಜಯನಗರದ ಬಿಜೆಪಿ ನಾಯಕರೊಬ್ಬರಿಗೆ ತಲುಪಬೇಕಾಗಿದ್ದ ಹಣ ಎಂದು ಹೇಳಲಾಗುತ್ತಿದೆ. ರಾಜೇಶ್ ಎಂಟರ್‌ಪ್ರೈಸಸ್ ಎಂಬ ಕಚೇರಿಯಿಂದ ಹಣವನ್ನು ತರಲಾಗಿದೆ.
ಗರಂ ಆಗಿದ್ದ ಪೊಲೀಸ್ ಕಮಿಷನರ್
ರಾಜಧಾನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಇತರ ವಸ್ತುಗಳ ಸಾಗಣೆ, ಹಂಚಿಕೆ ನಡೆಯುತ್ತಿದೆ. ಸರಿಯಾದ ರೀತಿಯಲ್ಲಿ ವಾಹನ ತಪಾಸಣೆ ನಡೆಯದೆ ಇರುವುದೇ ಇದಕ್ಕೆ ಕಾರಣ ಎಂದು ಪೊಲೀಸ್ ಕಮಿಷನರ್ ಇತ್ತೀಚೆಗೆ ಗರಂ ಆಗಿದ್ದರು. ಜತೆಗೆ ಪ್ರತಿ ನಿತ್ಯವೂ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಲು ಆರಂಭಿಸಿದ್ದರು.
ಒಂದೊಂದು ದಿನ ಒಂದೊಂದು ಡಿವಿಷನ್ ನ ಪೊಲೀಸರ ಜೊತೆ ಸಭೆ ನಡೆಯುತ್ತಿದೆ. ಆಯಾ ವಿಭಾಗದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳ ಜೊತೆ ಸಭೆ ನಡೆಸುತ್ತಿರುವ ಕಮೀಷನರ್ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಹಗಲಿನಲ್ಲಿ ಸರಿಯಾಗಿ ವಾಹನ ತಪಾಸಣೆ ನಡೆಸುತ್ತಿಲ್ಲ. ವಾಹನಗಳು ಚೆಕ್ ಪೋಸ್ಟ್ ದಾಟಿ ಹೋದರೂ ಸುಮ್ಮನಿರುತ್ತೀರಾ, ಇನ್ನು ಮುಂದೆ ಆ ರೀತಿ ನಡೆಯಬಾರದು ಎಂದು ಎಚ್ಚರಿಸಿದ್ದಾರೆ.
ಅನುಮಾನ ಬಂದ ಯಾವುದೇ ವಾಹನ ಆಗಲಿ ತಪಾಸಣೆ ಮಾಡಬೇಕು, ಹಣ, ಸೀರೆ, ಕುಕ್ಕರ್ ತವಾ ಹೀಗೆ ಯಾವುದೇ ವಸ್ತುಗಳು ಇದ್ರು ಸೀಜ್ ಮಾಡಬೇಕು, ಜೊತೆಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿಯೂ ಮೂರು ಕಡೆ ಕಾಣೋ ಹಾಗೆ ಸಿಸಿ ಕ್ಯಾಮರಾ ಇರಬೇಕು, ವಾಹನ ತಡೆಯೋದ್ರಿಂದ ಹಿಡಿದು, ತಪಾಸಣೆ ಮಾಡಿ ವಾಹನ ಹೋಗೋವರೆಗೂ ರೆಕಾರ್ಡ್ ಆಗಬೇಕು ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : BBC: ಫೆಮಾ ಉಲ್ಲಂಘನೆ; ಹಣಕಾಸು ವಿವರ ಸಲ್ಲಿಸುವಂತೆ ಬಿಬಿಸಿಗೆ ಇ.ಡಿ ಸೂಚನೆ