ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಗುರುವಾರ (Lingasugur) ಪಟ್ಟಣದಲ್ಲಿ ಅಪಾರ ಕಾರ್ಯಕರ್ತರೊಂದಿಗೆ (Congress) ಬೃಹತ್ ರೋಡ್ ಶೋ ನಡೆಸಿ, ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡ ರೋಡ್ ಶೋ, ಬಸ್ ನಿಲ್ದಾಣ ವೃತ್ತ, ಸರ್ಕಾರಿ ಪಿಯು ಕಾಲೇಜು, ಐಬಿ ವೃತ್ತದ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ರಾಜ್ಯವ್ಯಾಪಿ ಕಾಂಗ್ರೆಸ್ ಅಲೆ
ಈ ವೇಳೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ರಾಜ್ಯವ್ಯಾಪಿ ಕಾಂಗ್ರೆಸ್ ಅಲೆ ಇದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಸರ್ಕಾರ ರಚನೆಯಾದ ಕೂಡಲೇ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರೆಂಟಿಗಳನ್ನು ಜಾರಿಗೆ ತರಲಾಗುವುದು. ಡಿ.ಎಸ್. ಹೂಲಗೇರಿ ಶಾಸಕರಾಗಿ ಐದು ವರ್ಷಗಳ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಮತ್ತೊಮ್ಮೆ ಆಶೀರ್ವದಿಸಿ
ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಮಾತನಾಡಿ, ಕ್ಷೇತ್ರದಲ್ಲಿ ಐದು ವರ್ಷ ಶಾಸಕನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಅಧಿಕಾರದಲ್ಲಿದ್ದರೂ ಸಚಿವರ, ಮುಖ್ಯಮಂತ್ರಿಗಳ ಮನವಿ ಮಾಡಿಕೊಂಡು ಕ್ಷೇತ್ರಕ್ಕೆ ತಂದಿದ್ದೇನೆ. ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: Mind- Body Nexus: ದೇಹ-ಮನಸ್ಸುಗಳು ಬೇರೆಯಲ್ಲ, ಅಖಂಡ; ಹೊಸ ಅಧ್ಯಯನ
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಟಿ.ಆರ್.ನಾಯ್ಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ವೇಳೆ ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಅಭ್ಯರ್ಥಿ ಡಿ.ಎಸ್.ಹೂಲಗೇರಿ, ಲಕ್ಷ್ಮಿ ಹೂಲಗೇರಿ, ಮುಖಂಡರಾದ ಅಮರಗುಂಡಪ್ಪ ಮೇಟಿ, ಭೂಪನಗೌಡ ಕರಡಕಲ್, ಸಿದ್ಧನಗೌಡ ಪಾಟೀಲ್, ಸೇರಿದಂತೆ ಇನ್ನಿತರು ಪಾಲ್ಗೊಂಡಿದ್ದರು.