Site icon Vistara News

Karnataka Elections 2023 : ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ಫಿಕ್ಸ್‌; ಚುನಾವಣೆ ಘೋಷಣೆಗೆ ಬಿಜೆಪಿ ಫುಲ್‌ ಖುಷ್‌

BJP Shobha Karandlaje

#image_title

ಬೆಂಗಳೂರು: ʻʻರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆʼʼ ಎಂದು ಹೇಳುವ ಮೂಲಕ ಭಾರತೀಯ ಜನತಾ ಪಕ್ಷ ಚುನಾವಣಾ ದಿನಾಂಕ ಘೋಷಣೆಗೆ (Karnataka Elections 2023) ಹರ್ಷ ವ್ಯಕ್ತಪಡಿಸಿದೆ.

ಬಿಜೆಪಿ ಅಧಿಕೃತವಾಗಿ ಟ್ವೀಟ್‌ ಮಾಡಿ ಈ ಹರ್ಷವನ್ನು ಹಂಚಿಕೊಂಡಿದೆ. ಅದರ ಜತೆಗೆ ಕೇಂದ್ರ ಸಚಿವೆ ಶೊಭಾ ಕರಂದ್ಲಾಜೆ, ಎಂಎಲ್‌ಸಿ ರವಿಕುಮಾರ್, ಮಾಜಿ ಉಪಮೇಯರ್ ಹರೀಶ್, ಓಬಿಸಿ ಮೋರ್ಚಾ ಸೋಮಶೇಖರ್ ಜಂಟಿ ಸುದ್ದಿಗೋಷ್ಠಿಯಲ್ಲೂ ಇದೇ ವಿಚಾರವನ್ನು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ʻʻಬಹು ನಿರೀಕ್ಷೆಯ ಕರ್ನಾಟಕ ಚುನಾವಣೆ ಘೋಷಣೆ ಆಗಿದೆ. ಮೇ 13ಕ್ಕೆ ಕರ್ನಾಟಕದ ಭವಿಷ್ಯ ನಿರ್ಧಾರ ಆಗಲಿದೆ. ಅಂದು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅರಳಲಿದೆʼʼ ಎಂದು ಹೇಳಿದರು.

ʻʻಬಿಜೆಪಿ ತಳಮಟ್ಟದ ಕಾರ್ಯಕರ್ತರನ್ನು ಬೆಳೆಸೋ ಪಕ್ಷ. ಚುನಾವಣೆ ಬಂದಾಗ ಕೆಲಸ ಮಾಡುವ ಪಕ್ಷ ಅಲ್ಲ. 365 ದಿನ ಕಾರ್ಯಕರ್ತರಿಗೆ ಒಂದಲ್ಲಾ ಒಂದು ಕೆಲಸ ಕೊಟ್ಟು ಆಕ್ಟಿವ್‌ ಆಗಿ ಇಟ್ಟಿರುತ್ತದೆ. ಜನರ ಜೊತೆ ನಿರಂತರ ತೊಡಗಿಸಿಕೊಂಡಿರುವ ಪಕ್ಷ ಬಿಜೆಪಿ. ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು, ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸಿದ ಯೋಜನೆಗಳನ್ನು ಚುನಾವಣೆಯ ಹಂಗೇ ಇಲ್ಲದಿದ್ದ ಕಾಲದಲ್ಲೂ ಮಾಡಿದ್ದೇವೆʼʼ ಎಂದು ಹೇಳಿದ ಅವರು, ʻʻಕಾಂಗ್ರೆಸ್ ಚುನಾವಣೆ ಬಂದಾಗ ಎಚ್ಚರವಾಗುತ್ತದೆ. ಚುನಾವಣೆ ಬಂದಾಗ ಗ್ಯಾರಂಟಿ ಕಾರ್ಡ್ ಕೊಡಲು ಶುರು ಮಾಡುತ್ತದೆ. ಜಾತಿ, ಧರ್ಮ ಒಡೆಯುವ ಕೆಲಸ ಮಾಡಿ ಮತ ಕೇಳುತ್ತದೆʼʼ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ʻʻʻನಗರ ಪ್ರದೇಶ ಹಾಗೂ ಗ್ರಾಮಗಳಲ್ಲಿ ಶಾಂತಿಯುತ ಮತದಾನ ಆಗಬೇಕು. ಮರು ಮತದಾನ ಆಗುವಂತಹ ಕೆಲಸ ಆಗಬಾರದು. ಗಲಭೆ, ಇವಿಎಂ ಸಮಸ್ಯೆಯಿಂದ ಮರು ಮತದಾನ ಆಗಬಾರದು ಎನ್ನುವುದು ನಮ್ಮ ಆಶಯ. 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರು ಮನೆಯಲ್ಲೇ ಕುಳಿತು ಮತದಾನ ಮಾಡಲು ಆಯೋಗ ಅವಕಾಶ ನೀಡಿದೆ. ಹಿಂದೆ ಅಶಕ್ತರನ್ನು ಹೊತ್ತು ಕರೆತರುತ್ತಿದ್ದರು. ನಮ್ಮ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಮತ ಹಾಕಬಹುದಾಗಿದೆʼʼ ಎಂದರು.

ಬೆಂಗಳೂರಿನಲ್ಲಿ ಮತ ಪ್ರಮಾಣ ಹೆಚ್ಚಿಸಲು ಪ್ರಯತ್ನ

ʻʻಬೆಂಗಳೂರಿನಂಥ ನಗರದಲ್ಲಿ ಮತದಾನ ಕಡಿಮೆ ಆಗುತ್ತದೆ ಎಂಬ ಕಳವಳ ಇದೆ. ಇದಕ್ಕಾಗಿ ನಗರದ ಮತದಾರರನ್ನು ಕರೆತರುವ, ಮನವೊಲಿಸುವ ಕೆಲಸ ಮಾಡಬೇಕಿದೆ. ಮೊದಲ ಬಾರಿ ಮತ ಹಾಕುವ ಯುವಕ, ಯುವತಿಯರು ಇದ್ದಾರೆʼʼ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ʻʻ2018ರಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಹುಮತ ಇರಲಿಲ್ಲ. ಅಪವಿತ್ರ ಮೈತ್ರಿಯಿಂದ ಪಕ್ಷ ಬಿಟ್ಟು ಅನೇಕರು ಹೊರಗೆ ಬಂದರು. ಹೀಗಾಗಿ ಸರ್ಕಾರ ರಚನೆ ಮಾಡುವ ಅವಕಾಶ ನಮಗೆ ಸಿಕ್ಕಿತು. ಹೆಚ್ಚು ಅಭಿವೃದ್ಧಿಗೆ ಅವಕಾಶ ಸಿಕ್ಕಿತುʼʼ ಎಂದು ಶೋಭಾ ಕರಂದ್ಲಾಜೆ ನುಡಿದರು.

Exit mobile version