Site icon Vistara News

Karnataka Election 2023: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರು

Bhatkal karwar Karnataka Elections

#image_title

ಕಾರವಾರ: ಭಟ್ಕಳ ತಾಲೂಕಿನಲ್ಲಿ ನಾಮಧಾರಿ ಸಮಾಜದವರನ್ನು ಹೊರತುಪಡಿಸಿದರೆ ಎರಡನೇ ಸ್ಥಾನದಲ್ಲಿ, ಅಂದರೆ ಸುಮಾರು 55 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರಿದ್ದಾರೆ. ಈ ಬಾರಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ (Karnataka Election 2023) ಪ್ರಮುಖ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

ಈ ಹಿಂದೆ ಪಟ್ಟಣದಲ್ಲಿ ಶಾಸಕರಾಗಿ ಆಯ್ಕೆಯಾದ ದಿ. ಜುಕಾಕೋ ಶಂಶುದ್ದೀನ್, ಎಸ್.ಎಂ. ಯಾಹ್ಯ ರಾಜ್ಯ ರಾಜಕೀಯದಲ್ಲಿ ಮಿಂಚಿದ್ದರು. ಇವರಿಬ್ಬರೂ ಮುತ್ಸದ್ಧಿ ಆಡಳಿತಗಾರರಾಗಿ ಬಹಳ ಜನಪ್ರಿಯತೆ ಗಳಿಸಿದ್ದರು. ಆ ನಂತರ ಕಳೆದ ನಾಲ್ಕು ದಶಕಗಳಿಂದ ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿ ಇಲ್ಲಿಂದ ವಿಧಾನಸಭೆ ಪ್ರವೇಶಿಸಿಲ್ಲ.

ತಮ್ಮ ಸಮುದಾಯದ ಇಷ್ಟೊಂದು ದೊಡ್ಡ ಸಂಖ್ಯೆಯ ಮತಗಳ ಹೊರತಾಗಿಯೂ ಶಾಸನಸಭೆಗೆ ಇಲ್ಲಿಂದ ಪ್ರತಿನಿಧಿ ಕಳಿಸಲಾಗುತ್ತಿಲ್ಲ. ಈ ಬಾರಿ ಎಲ್ಲ ಸಮುದಾಯದವರು ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಿ ಯಾಕೆ ಗೆಲ್ಲಿಸಬಾರದು ಎಂಬುದು ಇಲ್ಲಿನ ಮುಸ್ಲಿಮರ ನಡುವೆ ಸದ್ಯ ನಡೆಯುತ್ತಿರುವ ಚರ್ಚೆಯಾಗಿದೆ.

ಈ ಕುರಿತು ವಾಟ್ಸಪ್ ಗ್ರೂಪ್‌ಗಳು, ಫೇಸ್‌ಬುಕ್ ಪೇಜ್‌ಗಳಲ್ಲಿ ಚರ್ಚೆ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ರಾಜಕೀಯ, ಧಾರ್ಮಿಕ ಹಾಗೂ ಮುಸ್ಲಿಮರ ಪ್ರಮುಖ ಸಂಘಟನೆ ತಂಜೀಮ್‌ನ ಮುಖಂಡರು ಹಾಗೂ ಗಲ್ಫ್‌ನಲ್ಲಿರುವ ಅನಿವಾಸಿ ಭಟ್ಕಳಿಗರು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಾರಿಯಾದರೂ ಮುಸ್ಲಿಂ ಸಮುದಾಯದ ಪ್ರತಿನಿಧಿ ಇಲ್ಲಿಂದ ವಿಧಾನಸಭೆಗೆ ಹೋಗಬೇಕು ಎಂಬುದು ಈ ಚರ್ಚೆಗಳ ಕೇಂದ್ರ ವಿಷಯ ಹಾಗೂ ಆಗ್ರಹ ಕೂಡ ಆಗಿದೆ.

ಇದನ್ನೂ ಓದಿ: Bangalore-Mysore Highway: ಹೆದ್ದಾರಿ ತಡೆದು ಜೆಡಿಎಸ್‌ ಆಕ್ರೋಶ; ಲೋಕಾರ್ಪಣೆಯಾ, ಟೋಲಾರ್ಪಣೆಯಾ?: ನಿಖಿಲ್‌ ಕುಮಾರಸ್ವಾಮಿ

ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 2 ಲಕ್ಷಕ್ಕಿಂತ ಹೆಚ್ಚಿದ್ದು, ಅದರಲ್ಲಿ ನಾಮಧಾರಿ (ನಾಯ್ಕ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ, ಸುಮಾರು 65 ಸಾವಿರ ನಾಮಧಾರಿ ಮತದಾರರು ಮತ್ತು 55 ಸಾವಿರ ಮುಸ್ಲಿಂ ಮತದಾರರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ನಂತರ ಎಸ್‌ಸಿ/ಎಸ್‌ಟಿ, ಮೊಗೇರ, ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ, ದೇವಾಡಿಗ, ಕ್ರಿಶ್ಚಿಯನ್ ಮತ್ತು ಇತರ ಜಾತಿಗಳ ಮತದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆಗಳು ನಡೆದಿವೆ.

Exit mobile version