ಗಂಗಾವತಿ: ಕಳ್ಳರ ಸಾಲಿನಲ್ಲಿರುವ ಹಾಗೂ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳಿಂದ ಗಂಗಾವತಿ (Gangavathi) ಜನರು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಗುಡುಗಿದರು.
ತಾಲೂಕಿನ ಗಾಂಧಿ ವೃತ್ತದಲ್ಲಿ ಬುಧವಾರ ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ನಿವಾಸದಿಂದ ಗಾಂಧಿ ವೃತ್ತದವರೆಗೆ ಆಯೋಜಿಸಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಜನಾರ್ದನರೆಡ್ಡಿ ಮತ್ತು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.
ಜನರನ್ನು ಮರಳು ಮಾಡಲು ಯತ್ನ
ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಕಡಿದು ಕಟ್ಟೆ ಹಾಕಿದ್ದೇನೂ ಇಲ್ಲ. ಅಲ್ಲಿ ಗಡಿಪಾರಾಗಿದ್ದಾರೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದಾರೆ. ಯಾವ ಕಾರಣಕ್ಕೂ ವಂಚಕರ ಮಾತಿಗೆ ಬೆಲೆ ಕೊಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಚುನಾವಣೆ ಮುಗಿದ ಬಳಿಕ ಅಂದರೆ ಮತದಾನ ಮುಗಿದ ದಿನವೇ ಸಂಜೆ ಏಳು ಗಂಟೆಗೆ ಇಲ್ಲಿಂದ ಜಾಗ ಖಾಲಿ ಮಾಡುವ ಜನ ಬೇಕೋ ಇಲ್ಲಿಯೇ ನಿಮ್ಮೊಂದಿಗೆ ಇದ್ದು ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುವ ನಾನು ಬೇಕೋ ಎಂಬುದನ್ನು ಒಮ್ಮೆಯಲ್ಲ ಎರೆಡೆರಡು ಬಾರಿ ಆಲೋಚನೆ ಮಾಡಿ. ಬಳ್ಳಾರಿಯಲ್ಲಿ ಸರ್ಕಾರಿ ಆಸ್ತಿ ಲೂಟಿ ಮಾಡಿ ಇದೀಗ ಗಂಗಾವತಿಗೆ ಬಂದಿದ್ದಾರೆ. ಅವರಿಂದ ಇಲ್ಲಿ ಮಾಡುವ ಕೆಲಸ ಏನೂ ಇಲ್ಲ. ಬರೀ ಹಣ ಕೊಟ್ಟು ವ್ಯವಸ್ಥೆಯನ್ನು ಹಾಳು ಮಾಡುವುದು ಬಿಟ್ಟರೆ ಬೇರೆ ಯಾವ ಕೆಲಸ ಆಗದು ಎಂದು ಪರೋಕ್ಷವಾಗಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಗೆ ತಿವಿದರು.
ಬಿಜೆಪಿಯಲ್ಲಿ ಅಭಿವೃದ್ಧಿ ಬರೀ ಪರ್ಸೆಂಟೇಜ್
ಇನ್ನು ಬಿಜೆಪಿಯಲ್ಲಿ ಅಭಿವೃದ್ಧಿ ಎಂದರೆ ಕೇವಲ ಅದು ಪರ್ಸೆಂಟೇಜ್ ಮಾತ್ರ. ಇಲ್ಲಿನ ಬಿಜೆಪಿ ಶಾಸಕ ಪ್ರತಿಯೊಂದು ಕೆಲಸದಲ್ಲಿ 30, 40ಕ್ಕೂ ಮೀರಿ ನೂರಕ್ಕೆ ನೂರರಷ್ಟು ಹಣ ಹೊಡೆದಿದ್ದಾರೆ. ಮಕ್ಕಳಿಗೆ ನೀಡಬೇಕಿದ್ದ ಪೌಷ್ಟಿಕ ಆಹಾರದಲ್ಲೂ ಶಾಸಕ ಹಣ ಬಾಚಿದ್ದಾರೆ. ಮಕ್ಕಳಿಗೆ ನೀಡಬೇಕಿದ್ದ ಮೊಟ್ಟೆಯಲ್ಲೂ ಮಾಸಿಕ 50 ಲಕ್ಷ ರೂಪಾಯಿ ಬಾಚಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಆರೋಪಿಸಿದರು.
ಗಂಗಾವತಿಯಲ್ಲಿ ಇಂದು ಏನಾದರೂ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದರೆ ಅದು 2013ರಲ್ಲಿ ನಾನು ಶಾಸಕನಾಗಿದ್ದಾಗ ಮಾತ್ರ. ಗಂಗಾವತಿಗೆ ರೈಲು ಸೌಲಭ್ಯ ತಂದಿದ್ದೇನೆ, ಮನೋಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ, ಚಿದಂಬರಂ ಹಣಕಾಸು ಸಚಿವರಿದ್ದಾಗ, ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅಲ್ಲದೆ, ಗಂಗಾವತಿ ಕ್ಷೇತ್ರದ 19 ಕೆರೆಗಳಿಗೆ ನನ್ನ ಅವಧಿಯಲ್ಲಿ ನೀರು ತುಂಬಿಸುವ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾರಣಾಂತರಗಳಿಂದ ಅದು ಸ್ಥಗಿತವಾಗಿತ್ತು. ಮುಂದಿನ ಸರ್ಕಾರ ಬಂದಾಗ ಅದು ಸಹಜವಾಗಿ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದರು.
ಸಿದ್ದರಾಮಯ್ಯ ರಾಜಕೀಯ ಗುರು
ನನಗೆ ದೇವರ ಆಶೀರ್ವಾದವಿದೆ. ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದಾರೆ. ನನಗೆ ಟಿಕೆಟ್ ಸಿಗಲು ಅವರೇ ಕಾರಣ. ಹೀಗಾಗಿ ಅವರ ಋಣ ತೀರಿಸಬೇಕಾದರೆ ಗಂಗಾವತಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುವ ಮೂಲಕ ಅವರ ಋಣ ತೀರಿಸಬೇಕಿದೆ. ನನ್ನ ರಾಜಕೀಯ ಗುರು ಮಾತ್ರವಲ್ಲ, ಪ್ರತಿ ಹಂತದಲ್ಲೂ ನನಗೆ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುವ ರಾಜಕೀಯ ಗುರು ಏನಾದರೂ ಇದ್ದರೆ ಅದು ಕೇವಲ ಸಿದ್ದರಾಮಯ್ಯ ಮಾತ್ರ. ಶೀಘ್ರದಲ್ಲಿಯೇ ಇಲ್ಲಿಗೂ ಸಿದ್ದರಾಮಯ್ಯ ಬರಲಿದ್ದಾರೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.