ಕಂಪ್ಲಿ(ಬಳ್ಳಾರಿ): ಪಟ್ಟಣದ ಪುರಸಭೆಯಲ್ಲಿನ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ದೇಶ ಪ್ರೇಮ ಪಾರ್ಟಿಯ ಅಭ್ಯರ್ಥಿಯಾಗಿ ಮಂಗಳಮುಖಿ ಟಿ. ರಾಮಕ್ಕ (Karnataka elections) ಚುನಾವಣಾ ಅಧಿಕಾರಿ ಡಾ. ನಯನಾ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ದುಸ್ಥಿತಿಯಲ್ಲಿ ಮಂಗಳಮುಖಿಯರ ಬದುಕು
ಬಳಿಕ ದೇಶಪ್ರೇಮ ಪಾರ್ಟಿಯ ಅಭ್ಯರ್ಥಿ ಟಿ. ರಾಮಕ್ಕ ಮಾತನಾಡಿ, ಸಮಾಜದಲ್ಲಿ ಮಂಗಳಮುಖಿಯರಿಗೆ ಸೂಕ್ತ ಸಮಾನತೆ ಸಿಗುತ್ತಿಲ್ಲ. ಸಮಾಜದಲ್ಲಿ ಗೌರವ ನೀಡುತ್ತಿಲ್ಲ, ಇದರಿಂದಾಗಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುವಂತಹ ದುಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ಮನನೊಂದು ಶಾಸಕಿಯಾಗುವ ಕನಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ. ನಾನು ಶಾಸಕಿಯಾದಲ್ಲಿ ಕ್ಷೇತ್ರದಲ್ಲಿನ ಸರ್ವರಿಗೂ ಸಮಾನತೆಯನ್ನು ನೀಡಿ ಬಡವರು, ನಿರ್ಗತಿಕರು, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕಣ್ಣೀರುಡುತ್ತಾ ಹೇಳುವ ಮೂಲಕ ನನಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಸಾಮಾಜಿಕ ನ್ಯಾಯಕ್ಕೆ ಬದ್ಧತೆ
ದೇಶಪ್ರೇಮ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ ಎಸ್.ಷಣ್ಮುಖಪ್ಪ ಮಾತನಾಡಿ, ಲಾಲ್ ಬಹದ್ದೂರು ಶಾಸ್ತ್ರೀರವರ ದೇಶ ಕಟ್ಟುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಪಕ್ಷ ಕಾರ್ಯ ನಿರ್ವಹಿಸಲಿದೆ. ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವಂತಹ ಉದ್ದೇಶದಿಂದಾಗಿ ಟಿ.ರಾಮಕ್ಕ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ದೇಶದ ಬೆನ್ನೆಲುಬಾದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಬೆಳೆ ತೆಗೆಯಲು ನವೀನ ತಂತ್ರಜ್ಞಾನದ ಬಳಕೆ, ರೈತರ ಸಾಲಕ್ಕೆ ಬಡ್ಡಿ ವಿನಾಯ್ತಿ, ಬಡತನ ನಿರ್ಮೂಲನೆಗೆ ಕಾರ್ಯತಂತ್ರ, ಸಕಲರಿಗೆ ಶಿಕ್ಷಣ ಸೌಲಭ್ಯ ಮತ್ತು ಪ್ರೋತ್ಸಾಹ, ಸರ್ವರಿಗೂ ಉಚಿತ ಆರೋಗ್ಯ ಸೇವೆ, ಬಹು ಉದ್ಯೋಗ ಸೃಷ್ಟಿ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ನಮ್ಮ ಪಕ್ಷದ ಮೂಲ ಧ್ಯೇಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಧಾಕರ್, ಮಂಗಳಮುಖಿಯರಾದ ಶೆಶಿ, ಮೌನಿಕಾ, ಗೌರಿ, ಕಲ್ಪನಾ, ಮಂಜು, ಮಲ್ಲಿಕಾ, ಬಿಂದು ಇದ್ದರು.