ಗಾವತಿ: ಗಂಗಾವತಿಯ ಸ್ವಾಭಿಮಾನಿ ಹಾಗೂ ಪ್ರಬುದ್ಧ ಮತದಾರರು ಯಾವುದೇ ಕಾರಣಕ್ಕೂ ಬಳ್ಳಾರಿಯಿಂದ (Janardhana reddy) ಗಡಿಪಾರು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ ಹಾಕಬಾರದು ಎಂದು ಟಪಾಲ್ ಗಣೇಶ ಮನವಿ ಮಾಡಿದ್ದಾರೆ.
ಗಂಗಾವತಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಪಾಲ್ ಗಣೇಶ್ ಅವರು, ರೆಡ್ಡಿ ತಮ್ಮ ಅಧಿಕಾರದ ಅವಧಿಯಲ್ಲಿ ಬಳ್ಳಾರಿಯ ಗಣಿಯನ್ನು ಅನಧಿಕೃತವಾಗಿ ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡಿದ್ದಾರೆ. ಗಂಗಾವತಿಯಲ್ಲಿ ಅವಕಾಶ ಸಿಕ್ಕರೆ ಇಲ್ಲೂ ಲೂಟಿ ಮಾಡುತ್ತಾರೆ ಎಂದು ಆರೋಪಿಸಿದರು.
ಕೊಟ್ಟಮಾತಿನಂತೆ ನಡೆಯುವ ವ್ಯಕ್ತಿಯಲ್ಲ
ಗಂಗಾವತಿಯ ಜನ ಯಾವುದೇ ಕಾರಣಕ್ಕೂ ರೆಡ್ಡಿಗೆ ಮತ ಹಾಕಿ ಇಲ್ಲಿನ ಸಂಪತ್ತು ಲೂಟಿಗೆ ಅವಕಾಶ ಕೊಡಬಾರದು. ಜನಾರ್ದನರೆಡ್ಡಿ ಕೊಟ್ಟಮಾತಿನಂತೆ ನಡೆಯುವ ವ್ಯಕ್ತಿಯಲ್ಲ ಎಂದು ದೂರಿದ ಅವರು, ನಾಳೆ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿನ ಜನರಿಗೆ ಆ ಬಗ್ಗೆ ಮನವರಿಕೆಯಾಗುತ್ತದೆ ಎಂದರು.
ಇದನ್ನೂ ಓದಿ:Veerashaiva Lingayat: ಡಿ.ಕೆ. ಶಿವಕುಮಾರ್ ʼಅಣೆಕಟ್ಟೆʼ ಹೇಳಿಕೆ: ಸಿಎಂ ಬೊಮ್ಮಾಯಿ, ಸಿ.ಸಿ. ಪಾಟೀಲ್ ಆಕ್ರೋಶ
ಜನಾರ್ದನರೆಡ್ಡಿ ಟೋಕನ್ ರೆಡ್ಡಿ
ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಯಲ್ಲಿ ಟೋಕನ್ ರೆಡ್ಡಿ ಎಂದು ಕರೆಯಲಾಗುತ್ತದೆ. ಇದರ ಅರ್ಥ ಇಷ್ಟೇ, ಯಾವುದೇ ಕೆಲಸಕ್ಕೆ ಟೋಕನ್ ನೀಡುವ ರೆಡ್ಡಿ ಆ ಬಳಿಕ ಕಮಿಟ್ಮೆಂಟ್ ಆದ ವಿಷಯವನ್ನು ಪೂರ್ಣಗೊಳಿಸುವುದಿಲ್ಲ. ಗಂಗಾವತಿಯ ಕೆಲ ನಗರಸಭೆಯ ಸದಸ್ಯರು ದೊಡ್ಡ ಪ್ರಮಾಣದ ಹಣದ ಆಸೆಗೆ ರೆಡ್ಡಿಯ ಹಿಂದೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಈ ಎಲ್ಲಾ ಸದಸ್ಯರಿಗೆ ನನ್ನದೊಂದು ಕಿವಿಮಾತು ಹೇಳಬಯಸುತ್ತೇನೆ. ರೆಡ್ಡಿ ನೀಡಿದ ಟೋಕನ್ ಹಣವಷ್ಟೆ ನಿಮ್ಮ ಪಾಲಿಗೆ ಪಂಚಾಮೃತ. ಕೆಲಸವಾದ ಬಳಿಕ ರೆಡ್ಡಿ ನಯಾಪೈಸೆ ಬಿಚ್ಚುವುದಿಲ್ಲ ಎಂದು ಟಪಾಲ್ ವ್ಯಂಗ್ಯವಾಡಿದರು.
ಪ್ರಮಾಣಪತ್ರದಲ್ಲಿ ದೋಷ
ಜನಾರ್ದನರೆಡ್ಡಿ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರವೂ ದೋಷದಿಂದ ಕೂಡಿದೆ. ರೆಡ್ಡಿ ಮೇಲೆ ಸಾಕಷ್ಟು ಪ್ರಕರಣ ದಾಖಲಾಗಿವೆ. ಆದರೆ ರೆಡ್ಡಿ ನಾಮಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಮಾಹಿತಿ ಮರೆ ಮಾಚಿದ್ದಾರೆ. ಗಂಗಾವತಿಯ ಜನ ರೆಡ್ಡಿಗೆ ಮತ ಚಲಾಯಿಸಿದರೆ ವ್ಯರ್ಥವಾಗಲಿದೆ. ಏಕೆಂದರೆ ಇಂದಲ್ಲ ನಾಳೆ ರೆಡ್ಡಿ ಮತ್ತೆ ಜೈಲಿಗೆ ಹೋಗಲಿದ್ದಾರೆ. ಇಂತಹ ವ್ಯಕ್ತಿಗೆ ಮತ ಹಾಕಿ ಏನು ಪ್ರಯೋಜನ ಎಂದು ಟಪಾಲ್ ಪ್ರಶ್ನಿಸಿದರು.
ಇದನ್ನೂ ಓದಿ:2nd PUC Result 2023: ಪರೀಕ್ಷೆ ತಯಾರಿಯ ಸೀಕ್ರೆಟ್ ರಿವೀಲ್ ಮಾಡಿದ ದ್ವಿತೀಯ ಪಿಯುಸಿ ಟಾಪರ್ಸ್
ರೆಡ್ಡಿ ವಿರುದ್ಧ ಪ್ರಚಾರ
ಇನ್ನು ಏಪ್ರಿಲ್ 24ರಿಂದ ಗಂಗಾವತಿಯಲ್ಲಿ ರೆಡ್ಡಿ ವಿರುದ್ಧ ಪ್ರಚಾರ ಮಾಡಲಿದ್ದೇನೆ. ಹಾಗಂತ ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಬಳ್ಳಾರಿಯನ್ನು ಹಾಳು ಮಾಡಿ ಬಂದಿರುವ ರೆಡ್ಡಿಗೆ ಇಲ್ಲಿ ಅವಕಾಶ ನೀಡಬಾರದು ಎಂಬುವುದಷ್ಟೆ ನನ್ನ ಉದ್ದೇಶ. ಉಳಿದಂತೆ ಕ್ಷೇತ್ರದ ಜನರು ಯಾರಿಗಾದರೂ ಮತ ಹಾಕಲಿ. ಏಪ್ರಿಲ್ 24ರ ಬಳಿಕ ಗಂಗಾವತಿಯಲ್ಲಿ ಮನೆಮನೆಗೆ ತೆರಳಿ ರೆಡ್ಡಿ ವಿರುದ್ಧ ಪ್ರಚಾರ ಮಾಡುತ್ತೇನೆ. ಯಾವುದೇ ಪಕ್ಷಕ್ಕೂ ಸೇರದ ಸಮಾನ ಮನಸ್ಕರು ಗಂಗಾವತಿಯಲ್ಲಿ ನನ್ನೊಂದಿಗೆ ಕೈ ಜೋಡಿಸಿದರೆ ರೆಡ್ಡಿ ವಿರುದ್ಧ ಪ್ರಚಾರಕ್ಕೆ ಇಳಿಯಲಿದ್ದೇನೆ ಎಂದು ಟಪಾಲ್ ಹೇಳಿದರು.