ಗಂಗಾವತಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದಡಿ ಎರಡು ರಾಜಕೀಯ ಪಕ್ಷಗಳ (political Parties) ಅಧ್ಯಕ್ಷರ ವಿರುದ್ಧ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಬಿಜೆಪಿ ನಗರ ಘಟಕದ ಅಧ್ಯಕ್ಷ ವಿರುದ್ಧ ಎಫ್‌ಐಆರ್
ಗಂಗಾವತಿ ನಗರದಲ್ಲಿ ಬುಧವಾರ ನಡೆದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಬೃಹತ್ ರೋಡ್ ಶೋ ಸಂದರ್ಭದಲ್ಲಿ 8 ರಿಂದ 10 ವರ್ಷ ವಯಸ್ಸಿನ ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ನೀಡಿ, ಬಾವುಟ ನೀಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ಸುದೇಶ ಕುಮಾರ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ 1986ರ ಅಡಿಯಲ್ಲಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿರುದ್ಧ ಎಫ್‌ಐಆರ್
ಗಂಗಾವತಿ ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ರೋಡ್ ಶೋ ಸಂದರ್ಭದಲ್ಲಿ 6 ರಿಂದ 13 ವರ್ಷ ವಯೋಮಾನದ 15ರಿಂದ 20 ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ನೀಡಿ, ಬಾವುಟ ನೀಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ಗುರುಪ್ರಸಾದ್, ಬಾಲಕಾರ್ಮಿಕ ಪದ್ಧತಿ ನಿರ್ಮಾಲನಾ ಕಾಯ್ದೆ 1986ರ ಅಡಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.