Site icon Vistara News

Karnataka Elections : ಅವರಿಬ್ಬರು ಒಂದೇ ಹಾರ ಹಾಕ್ಕೊಂದು ಓಡಾಡಿದ್ರೆ ಏನು ಭೂಕಂಪ ಆಗುತ್ತಾ?; ಕಿಮ್ಮನೆ-ಮಂಜುನಾಥ್‌ ಜೋಡಿಗೆ ಆರಗ ವ್ಯಂಗ್ಯ

Araga Jnanendra

#image_title

ರಿಪ್ಪನ್‌ಪೇಟೆ: ಒಂದೂ ರಸ್ತೆಯನ್ನು ಮಾಡದವರು ಮತ್ತೆ ಚುನಾವಣೆಗೆ (Karnataka Elections) ನಿಂತಿದ್ದಾರೆ. ನಾವಿಬ್ಬರು ಒಟ್ಟಾಗಿದ್ದೇವೆ. ಈ ಬಾರಿ ಗೆಲುವು ನಮ್ಮದೇ ಎಂದು ಹೇಳುತ್ತಿದ್ದಾರೆ. ಅವರಿಬ್ಬರೂ ಒಂದೇ ಹಾರ ಹಾಕಿಕೊಂಡು ಓಡಾಡಿದ್ರೆ ಏನು ಭೂಕಂಪ ಆಗುತ್ತದಾ? ಅಭಿವೃದ್ಧಿಗೆ ಜನ ಮತ ಕೊಡುವುದಾದರೆ ಅವರಿಗೆ ಈ ಬಾರಿ ಠೇವಣಿ ಸಹ ಸಿಗುವುದಿಲ್ಲ: ಹೀಗೆಂದು ಹೇಳಿದ್ದಾರೆ ರಾಜ್ಯದ ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ (Araga Jnanendra).

ಅವರು ಕೋಡೂರಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ʻʻಇವ್ರು ಕಳೆದ 10 ವರ್ಷ ಏನ್ ಮಾಡಿದ್ದಾರೆ ಅಂದ್ರೆ ಭಾಷಣ, ಧರಣಿ ಸತ್ಯಾಗ್ರಹ, ಪಾದಯಾತ್ರೆ ಮಾಡಿದ್ದು ಬಿಟ್ರೆ ಮತ್ತೇನು ಮಾಡಿದ್ದಾರೆ ? ಎಂದು ಪ್ರಶ್ನಿಸಿದ ಗೃಹ ಸಚಿವರು, ನನ್ನ ಕಾಲದಲ್ಲಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಹಣ ತಂದಿದ್ದೇನೆ. ಇವರು ಏನು ಮಾಡಿದ್ದಾರೆ. ಶಿಕ್ಷಣ ಸಚಿವರಾಗಿ ಏನು ಮಾಡಿದ್ದಾರೆʼʼ ಎಂದು ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಹರಿಹಾಯ್ದರು.

ʻʻನಾನು ಸುಮಾರು 45 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಜೈಲಿಗೆ ಹೋಗಿದ್ದೆ. ಅಲ್ಲಿಂದ ಬಂದವನೇ ನನ್ನ ಕುಟುಂಬ ವಯಕ್ತಿಕ ಜೀವನದ ಬಗ್ಗೆ ತಿರುಗಿ ನೋಡದೆ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆʼʼ ಎಂದಿದ್ದಾರೆ ಆರಗ.

ಇದು ನನ್ನ ಕೊನೆಯ ಚುನಾವಣೆ

ʻʻ10 ಬಾರಿ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 4 ಬಾರಿ ಶಾಸಕನಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ತತ್ವಕ್ಕಾಗಿ, ಸಿದ್ದಾಂತಕ್ಕಾಗಿ ರಾಜಕಾರಣ ಮಾಡುವವನು. ಈ ರಾಷ್ಟ್ರ ಕಟ್ಟುವುದು ನಮ್ಮ ಕೆಲಸ. ಇಲ್ಲಿ ನನ್ನ ಸ್ವಂತಿಕೆ ಇಲ್ಲ. ಶಾಸಕನಾಗಬೇಕು ಮಂತ್ರಿ ಆಗಬೇಕು ಎಂದಿಲ್ಲ. ಎಲ್ಲರ ನೆರವಿನಿಂದ ನಾನು ಬೆಳೆದಿದ್ದೇನೆ. ನನ್ನ ಕಾರ್ಯಕರ್ತರು ನನಗೆ ದೇವರು ಸಮಾನ ಹಾಗಾಗಿ ಅವರು ಚುನಾವಣೆ ಸಂದರ್ಭದಲ್ಲಿ ತೊಡೆ ತಟ್ಟಿ ಕೆಲಸ ಮಾಡುತ್ತಾರೆʼʼ ಎಂದು ಹೇಳಿದರು.

ʻʻಟಿಕೆಟ್‌ಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗುವವನು ನಾನಲ್ಲ. ಇಂತಹ ಸಂದರ್ಭ ಬರುವುದಿಲ್ಲ. ಸಂದರ್ಭ ಬಂದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಯಾವುದೇ ಕಾರಣ ಕೊಡದೆ ಇನ್ನೊಬ್ಬರಿಗಾಗಿ ಕೆಲಸ ಮಾಡುತ್ತೇನೆʼʼ ಎಂದು ಆರಗ ಜ್ಞಾನೇಂದ್ರ ಹೇಳಿದರು.

ʻʻಜಗತ್ತಿನಲ್ಲಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ಅದು ಬಿಜೆಪಿ ಪಕ್ಷ ಎಂದು ಹೇಳಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಯೋಜನೆಗಳ ಬಗ್ಗೆ ವಿವರಿಸಿ, ನಮಗೆ ಬರುವ ಶೇ.80 ರಷ್ಟು ಕಾಯಿಲೆ ಕುಡಿಯುವ ನೀರಿನಿಂದ ಬರುತ್ತದೆ. ಅದಕ್ಕಾಗಿ ಶುದ್ಧ ಕುಡಿಯುವ‌ ನೀರಿಗಾಗಿ ಜೆಜೆಎಂ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 90 ಸಾವಿರ ಕೋಟಿ ರೂ. ಕೊಟ್ಟಿದೆ. ಕೋಡೂರು ಗ್ರಾಪಂನ ಮೂರು ಬೂತ್‌ಗೆ 8 ಕೋಟಿ 95 ಲಕ್ಷ ರೂ. ಕೊಡಲಾಗಿದೆʼʼ ಎಂದರು.

ಅಡಿಕೆ ಬೆಳೆಗೆ ನಾನೇ ರಕ್ಷಾ ಕವಚವಾದೆ

ʻʻಅಡಿಕೆ ಬೆಳೆಗೆ ರಕ್ಷಾ ಕವಚವಾಗಿ ನಾನಿದ್ದೇನೆ. ಮಲೆನಾಡಿನ ಜನ ಆರ್ಥಿಕವಾಗಿ ಸಬಲರಾಗಲು ಅಡಿಕೆ ಬೆಳೆಯೇ ಮುಖ್ಯ ಕಾರಣ ಎಂದ ಅವರು, ಕಳೆದೆರಡು ವರ್ಷದಲ್ಲಿ 3,254 ಕೋಟಿ ರೂ. ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಹಣ ತಂದಿದ್ದೇನೆ. ಕೋಡೂರು ಗ್ರಾಪಂ ಒಂದಕ್ಕೆ 46,07,93,000 ರೂ. ನೀಡಲಾಗಿದೆʼʼ ಎಂದರು. ಇದೇ ಸಂದರ್ಭದಲ್ಲಿ ಅನೇಕ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್, ಆರ್.ಟಿ ಗೋಪಾಲ್, ತಾಲೂಕು ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಕೋಡೂರು ಗ್ರಾಪಂ ಸದಸ್ಯರು, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪುಟ್ಟಪ್ಪ, ಅರುಣ್ ಕುಮಾರ್, ಬಿಜೆಪಿ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ : Karnataka Election : ಆರಗ ಜ್ಞಾನೇಂದ್ರ ಹೇಳಿಕೊಳ್ಳುತ್ತಿರುವುದೆಲ್ಲ ನಾನು ಮಾಡಿದ ಸಾಧನೆಗಳು ಎಂದ ಕಿಮ್ಮನೆ ರತ್ನಾಕರ್‌

Exit mobile version