ಹಾವೇರಿ: ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಅದರಲ್ಲೂ ಹಿರೇಕೆರೂರಿನ ಕಾಂಗ್ರೆಸ್ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಮಾಜಿ ಶಾಸಕ, ಕೈ ಮುಖಂಡ ಬಿ.ಎಚ್ ಬನ್ನಿಕೋಡ ಅವರು ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಜತೆ ಹೋಗುವುದು ಖಚಿತವಾಗಿದೆ.
ಸಚಿವ ಬಿ.ಸಿ ಪಾಟೀಲ್ ಅವರು ಬನ್ನಿಕೋಡ್ ಅವರನ್ನು ಭೇಟಿಯಾಗಿ ಆಶೀರ್ವಾದ ಕೋರಿದ್ದಾರೆ. ಈಗಾಗಲೇ ಆಶೀರ್ವಾದ ನೀಡಿರುವ ಬನ್ನಿಕೋಡ್ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು ಆಶೀರ್ವಾದ ಮಾಡುವ ವಿಚಾರ ಏಪ್ರಿಲ್ 5ರಂದು ತೀರ್ಮಾನವಾಗಲಿದೆ!
ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ಆರು ಕ್ಷೇತ್ರದಲ್ಲೂ ಭಿನ್ನಮತ ಕಾಣಿಸಿಕೊಂಡಿದೆ. ಹಾನಗಲ್‌ನಲ್ಲಿ ಮಾಜಿ ಸಚಿವ ಮನೋಹರ್ ತಹಶಿಲ್ದಾರ ಜೆಡಿಎಸ್ ಸೇರಿದ್ದರೆ, ಇತ್ತ ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಎಂಎಂ ಹಿರೇಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಾರ್ಚ್ 3ರಿಂದ ಈರಪ್ಪ ಲಮಾಣಿ ಜೊತೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುತ್ತಿದ್ದಾರೆ. ರಾಣೇಬೆನ್ನೂರ, ಬ್ಯಾಡಗಿಯಲ್ಲಿಯು ಕೈ ಭಿನ್ನಮತ ಜೋರಾಗಿದೆ. ಈಗ ಹಿರೇಕೆರೂರಿನಲ್ಲಿಯು ಅಸಮಾಧಾನ ಭುಗಿಲೆದ್ದಿರುವುದು ಕೈ ಪಡೆಯನ್ನು ತಲ್ಲಣಗೊಳಿಸಿದೆ.
ಬನ್ನಿಕೋಡ 2019ರ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಪ್ರತಿಸ್ಪರ್ಧಿ
2019ರ ಹಿರೇಕೆರೂರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಸೆಣಸಾಡಿದ್ದ ಮಾಜಿ ಶಾಸಕ ಬಿ.ಎಚ್ ಬನ್ನಿಕೋಡ ಈ ಸಲವೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ನಿರೀಕ್ಷೆಯಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಯು.ಬಿ ಬಣಕಾರ್‌ಗೆ ಕೈ ಟಿಕೆಟ್ ನೀಡಲಾಗಿದೆ. ಬಣಕಾರ್‌ಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿ.ಎಚ್ ಬನ್ನಿಕೋಡ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಎರಡು ಮೂರು ದಿನಗಳ ಹಿಂದೆ ಮನೆಯಲ್ಲಿ ನಡೆದ ಬೆಂಬಲಿಗರ ಸಬೆಯಲ್ಲಿ ಬನ್ನಿಕೋಡ ಮಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಬನ್ನಿಕೋಡ ತಂದೆಗಾದ ಅನ್ಯಾಯವನ್ನು ನೆನೆದು ಮಾತನಾಡುವಾಗ ಕಣ್ಣೀರು ಹಾಕಿದ್ದರು. ಇದರ ಬೆನ್ನಲ್ಲೇ ಎಪ್ರಿಲ್ 5ರಂದು ಬೆಂಬಲಿಗರ ಸಬೆ ಕರೆದಿರುವ ಬನ್ನಿಕೋಡ ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಬನ್ನಿಕೋಡ ಅವರ ಆಶೀರ್ವಾದ ಕೇಳಿದ ಸಚಿವ ಬಿ.ಸಿ ಪಾಟೀಲ
ಬಿ.ಎಚ್ ಬನ್ನಿಕೋಡ ಅಸಮಾಧಾನಗೊಳ್ಳುತ್ತಿದ್ದಂತೆಯೇ ಭಾನುವಾರ ಬಿ.ಸಿ ಪಾಟೀಲ್ ಬನ್ನಿಕೋಡ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಮಾಡುವಂತೆ ಕೇಳಿರುವುದು ಹಿರೇಕೆರೂರ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
2018ರಲ್ಲಿ ಕಾಂಗ್ರೆಸ್ ನಲ್ಲಿ ಬಿ.ಸಿ ಪಾಟೀಲ್ ಜೊತೆಗಿದ್ದ ಬನ್ನಿಕೋಡ 2023ರ ಚುನಾವಣೆಯಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಕೌರವನಿಗೆ ಬನ್ನಿಕೋಡ ಬೆಂಬಲ ಸಿಕ್ಕಲ್ಲಿ, ಚುನಾವಣೆಯಲ್ಲಿ ಬಿ.ಸಿ ಪಾಟೀಲ್‌ಗೆ ಹೆಚ್ಚಿನ ಬಲ ಬರೋದು ನಿಶ್ಚಿತ. ಬನ್ನಿಕೋಡ ಅವರನ್ನ ಭೇಟಿಯಾಗಿ ತಾಲೂಕಿನ ಅಭಿವೃದ್ಧಿಗಾಗಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬನ್ನಿಕೋಡ ಆಶೀರ್ವಾದದ ನಿರೀಕ್ಷೆಯಲ್ಲಿ ಕೌರವ
ಮಾಜಿ ಶಾಸಕ ಕೈ ಮುಖಂಡ ಬಿ.ಎಚ್ ಬನ್ನಿಕೋಡ ಅವರನ್ನು ರಾಣೇಬೆನ್ನೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಹಿರೇಕೆರೂರಿನಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ಬನ್ನಿಕೋಡ ಅವರ ಆಶೀರ್ವಾದ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ʻʻ2019ರ ಉಪಚುನಾವಣೆಯಲ್ಲಿ ಬಿ.ಎಚ್ ಬನ್ನಿಕೋಡ ಕಾಂಗ್ರೆಸ್ ಹುರಿಯಾಳಾಗಿದ್ದರು, ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಬನ್ನಿಕೋಡ ಅವರು ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದಾರೆ. 2018ರಲ್ಲಿ ನಾವು ಅವರು ಒಟ್ಟಿಗೆ ಕಾಂಗ್ರೆಸ್‌ನಿಂದ ಚುನಾವಣೆ ಮಾಡಿದ್ವಿ. ನಾನು ಕಾಂಗ್ರೆಸ್ ಬಿಟ್ಟು ಬರುವಾಗ ಕರೆದಿದ್ದೆ, ಅವರು ಬರಲಿಲ್ಲ. ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಿ, ಒಟ್ಟಿಗೆ ಚುನಾವಣೆ ಮಾಡೋಣ , ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕೇಳಿಕೊಂಡಿದ್ದೇನೆ. ಬನ್ನಿಕೋಡ ಅವರು ಅಭಿವೃದ್ಧಿ ಪರವಾಗಿದ್ದವರು. ಆಶೀರ್ವಾದ ಕೋರಿದ್ದೇನೆ, ಬರುತ್ತಾರೆ ಎಂದು ಆಶಾದಾಯಕವಾಗಿದ್ದೇನೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : Karnataka Election 2023: ಹಾವೇರಿ ಕಾಂಗ್ರೆಸ್‌ನಲ್ಲಿ ಭಿನ್ನಮತ: ಪಕ್ಷ ತೊರೆದ ಹಿರೇಮಠ; ಜೆಡಿಎಸ್‌ನತ್ತ ಮನೋಹರ ತಹಶೀಲ್ದಾರ್?