Site icon Vistara News

Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್‌ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ

Ayanur manjunath

ಶಿವಮೊಗ್ಗ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಹಿರಿಯ ನಾಯಕ ಆಯನೂರು ಮಂಜುನಾಥ್‌ ಅವರು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜತೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ.

ಸೋಮವಾರ ಮುಂಜಾನೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಂಡಾಯ ನಾಯಕ ಆಯನೂರು ಅವರು ಹಾಲಿ ಶಾಸಕ, ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದರು. ನೀವು ಎಲೆಕ್ಷನ್‌ಗೆ ನಿಲ್ಲಬಾರದು, ತಾಕತ್ತಿದ್ದರೆ ಮಗನನ್ನು ನಿಲ್ಲಿಸಿ ಗೆಲ್ಲಿಸಿ ಎಂದು ಸವಾಲು ಹಾಕಿದರು. ಯಾರೇ ನಿಂತರೂ ಅವರ ವಿರುದ್ಧ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದರು.

ಆದರೆ, ಅವರು ಯಾವುದಾದರೂ ಪಕ್ಷ ಸೇರಿ ಸ್ಪರ್ಧೆಗೆ ಇಳಿಯುತ್ತಾರೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ.

ಆಯನೂರು ಮಂಜುನಾಥ್‌ ಅವರು ಕಟ್ಟಾ ಬಿಜೆಪಿ ನಾಯಕರಾಗಿದ್ದರೂ ಹಿಂದಿನಿಂದಲೂ ಬಂಡಾಯದ ದಾರಿಯನ್ನೇ ತುಳಿದವರು. ಕಾರ್ಮಿಕರ ನಾಯಕರಾಗಿ ಸಾಕಷ್ಟು ಜನಮನ್ನಣೆ ಪಡೆದಿದ್ದ ಅವರು ವಿಧಾನಸಭೆ ಶಾಸಕರಾಗಿ, ಲೋಕಸಭೆ ಸದಸ್ಯರಾಗಿ, ರಾಜ್ಯಸಭೆ ಸದಸ್ಯರಾಗಿ, ಮೇಲ್ಮನೆ ಸದಸ್ಯರಾಗಿ ಎಲ್ಲ ರೀತಿಯಲ್ಲೂ ಜನಪ್ರತಿನಿಧಿಯಾಗಿದ್ದರು.

67 ವರ್ಷದ ಆಯನೂರು ಮಂಜುನಾಥ್‌ ಅವರು 1994ರಿಂದ 98ರವರೆಗೆ ಹೊಸನಗರ ಕ್ಷೇತ್ರದ ಶಾಸಕರಾಗಿದ್ದರು. ಕಾಂಗ್ರೆಸ್‌ನ ಕಟ್ಟಾಳು ನಾಯಕ ಸಾರೆಕೊಪ್ಪ ಬಂಗಾರಪ್ಪ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲಿಸಿ 12ನೇ ಲೋಕಸಭೆ ಪ್ರವೇಶಿಸಿದ್ದರು. 2010ರಿಂದ 2016ರವರೆಗೆ ಪೂರ್ಣ ಪ್ರಮಾಣದಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ಅದಾದ ಬಳಿಕ ಪಕ್ಷ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿತು. ಹಾಲಿ ವಿಧಾನ ಪರಿಷತ್‌ ಸದಸ್ಯರಾಗಿರುವ ಅವರು ಅದಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರೊಂದಿಗೆ ಚೆನ್ನಾಗಿ ಒಡನಾಟ ಇಟ್ಟುಕೊಂಡಿದ್ದ ಮಂಜುನಾಥ್‌ ಅವರು ಇತ್ತೀಚೆಗೆ ತಿರುಗಿಬಿದ್ದಿದ್ದಾರೆ. ಈಶ್ವರಪ್ಪ ಅವರ ಬಳಿಕ ಶಿವಮೊಗ್ಗ ನಗರ ಕ್ಷೇತ್ರದಿಂದ ತಮಗೆ ಸೀಟು ಸಿಗಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಈಶ್ವರಪ್ಪ ಅವರ ಮಗ ಸಣ್ಣವ, ನನಗೇ ಟಿಕೆಟ್‌ ಎಂದು ಹೇಳಿಕೊಂಡಿದ್ದರು. ಆದರೆ ಈ ಬಾರಿ ಒಂದೋ ಈಶ್ವರಪ್ಪ ಅವರಿಗೆ, ತಪ್ಪಿದರೆ ಪುತ್ರ ಕಾಂತೇಶ್‌ ಅವರಿಗೇ ಟಿಕೆಟ್‌ ಎಂಬುದು ಗೊತ್ತಾಗುತ್ತಿದ್ದಂತೆಯೇ ಮಂಜುನಾಥ್‌ ತಿರುಗಿಬಿದ್ದಿದ್ದಾರೆ.

ಆಯನೂರು ಮಂಜುನಾಥ್‌ ಅವರು ಪಕ್ಷದಲ್ಲಿ ಮತ್ತು ಅಧಿಕಾರದಲ್ಲಿ ಒಳ್ಳೆಯ ಸ್ಥಾನವನ್ನೇ ಪಡೆದಿದ್ದರೂ ಮಂತ್ರಿಯಾಗಲಿಲ್ಲ ಎಂಬ ಕೊರಗು ಅವರಿಗೆ ಇದೆ ಎನ್ನಲಾಗುತ್ತಿದೆ.

ಇದೀಗ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮುಂದಿನ ನಡೆಯ ಬಗ್ಗೆ ಸ್ಪಷ್ಟತೆ ಇಲ್ಲ. ಅವರನ್ನು ಪಕ್ಷದಿಂದಲೇ ಹೊರಹಾಕುವ ಸಾಧ್ಯತೆ ಕಂಡುಬಂದಿದೆ. ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುತ್ತದೆ ಎಂದು ಹೇಳಲಾಗುತ್ತಿದ್ದರೂ ಪಕ್ಷದಲ್ಲಿ ಎದುರಾದ ವಿರೋಧದಿಂದ ಅದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಎನ್ನಲಾಗುತ್ತಿದೆ. ಅವರು ಒಂದೋ ಜೆಡಿಎಸ್‌ನಿಂದ ಸ್ಪರ್ಧಿಸಬಹುದು, ಇಲ್ಲವೇ ಪಕ್ಷೇತರರಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Karnataka Election 2023: ಆಯನೂರು ಹೇಳಿಕೆಗೆ ಪ್ರತಿಕ್ರಿಯಿಸಲ್ಲ; ಮಂಜುನಾಥ್‌ ಕಿಡಿಕಾರಿದರೂ ಬಾಯಿಬಿಡದ ಈಶ್ವರಪ್ಪ

Exit mobile version