Site icon Vistara News

Karnataka Elections : ಸಾಗರದಲ್ಲಿ ಹಾಲಪ್ಪ ಅಭ್ಯರ್ಥಿತನಕ್ಕೆ ಹಿರಿಯ ಬಿಜೆಪಿ ಮುಖಂಡರಿಂದಲೇ ವಿರೋಧ; ಸೋಲಿಸುವ ಪಣ

Haratalu BJP Leaders

#image_title

ಸಾಗರ (ಶಿವಮೊಗ್ಗ): ʻʻಸಾಗರ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಹೈಕಮಾಂಡ್ ಹಾಲಿ ಶಾಸಕ ಹರತಾಳು ಹಾಲಪ್ಪ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇದನ್ನು ಖಂಡಿಸಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಶಾಸಕ ಹಾಲಪ್ಪ ಹರತಾಳು ಅವರನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆʼʼ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎನ್.ಶ್ರೀಧರ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಲಂಚ ಕೊಡದೆ ಯಾವುದೇ ಕೆಲಸವಾಗುತ್ತಿಲ್ಲ. ಗಣಪತಿ ಕೆರೆ ಅಭಿವೃದ್ದಿ ಹೆಸರಿನಲ್ಲಿ ಕೆರೆಯನ್ನು ಕಿರಿದುಗೊಳಿಸಿದ್ದೇ ಶಾಸಕ ಹಾಲಪ್ಪ ಅವರ ಸಾಧನೆಯಾಗಿದೆ ಎಂದು ಹೇಳಿದರು.

ಹಿಂದುತ್ವವನ್ನು ಮೂಲೆಗುಂಪು ಮಾಡಿದ ಆರೋಪ

ʻʻಕಳೆದ ಐದು ವರ್ಷದಲ್ಲಿ ಹಿಂದುತ್ವವನ್ನು ಸಂಪೂರ್ಣ ಮೂಲೆಗುಂಪು ಮಾಡಿದ ಹೆಗ್ಗಳಿಕೆ ಹಾಲಪ್ಪ ಅವರದ್ದಾಗಿದೆ. ಗಾಂಜಾ, ಓಸಿ ಹಾವಳಿ ಜಾಸ್ತಿಯಾಗಿದ್ದು, ಓಸಿ ದಂಧೆ ನಡೆಸುವವನನ್ನು ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮರಳು ಮಾಫಿಯಾ ದೊಡ್ಡಮಟ್ಟದಲ್ಲಿದೆ. ಮತಾಂತರ, ಲವ್ ಜಿಹಾದ್, ಗೋಹತ್ಯೆ ವಿರುದ್ದ ಕ್ರಮ ಕೈಗೊಂಡಿಲ್ಲ. ಐದು ವರ್ಷದಲ್ಲಿ ಒಂದೂ ಗೋಶಾಲೆಯನ್ನು ತೆರೆದಿಲ್ಲ. ನಗರಸಭೆ ಆಡಳಿತ ಸಂಪೂರ್ಣ ವೈಫಲ್ಯವಾಗಿದ್ದು, ಮಾರ್ಕೇಟ್ ರಸ್ತೆ ಅಗಲೀಕರಣ ಹೆಸರಿನಲ್ಲಿ ಸ್ಥಳೀಯರಿಗೆ ತೊಂದರೆ ನೀಡಲಾಗಿದೆ. ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದವರು ಇನ್ನೊಮ್ಮೆ ಶಾಸಕರಾಗಬೇಕು ಎಂದು ಮತದಾರರು ಯೋಚಿಸಬೇಕುʼʼ ಎಂದು ಕೆ.ಎನ್‌. ಶ್ರೀಧರ್‌ ಹೇಳಿದರು.

ಕುಟುಂಬ ಒಡೆದುದೇ ಹಾಲಪ್ಪ ಸಾಧನೆ ಎಂದ ನಾಯಕರು

ʻʻಶಾಸಕ ಹಾಲಪ್ಪ ಅವರ ಐದು ವರ್ಷದ ಸಾಧನೆ ಎಂದರೆ ಸಂಸ್ಥೆಗಳನ್ನು ಒಡೆದದ್ದು. ಎಂಡಿಎಫ್ ಗಲಾಟೆ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ, ಕಾಗೋಡು ತಿಮ್ಮಪ್ಪ ಅವರ ಕುಟುಂಬ ಒಡೆದದ್ದು, ಸಚಿವ ಅರಗ ಜ್ಞಾನೇಂದ್ರ ಕುಟುಂಬದಲ್ಲಿ ಹಸ್ತಕ್ಷೇಪ ಹಾನಗಲ್ ಕುಮಾರಸ್ವಾಮಿ ಶಿವಯೋಗಿ ಸ್ವಾಮಿಗಳು ಸ್ಥಾಪಿಸಿದ ವೀರಶೈವ ಮಹಾಸಭಾ ವಿಭಜನೆ ಹೀಗೆ ಅನೇಕ ಸಂಸ್ಥೆಗಳ ಅಸ್ಥಿರತೆಗೆ ಶಾಸಕ ಹಾಲಪ್ಪ ನೇರ ಕಾರಣವಾಗಿದ್ದಾರೆ. ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಊರಿನ ತುಂಬಾ ಎಂಎಸ್ಐಎಲ್ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಟ್ಟಿರುವ ಶಾಸಕ ಹಾಲಪ್ಪ ಹರತಾಳು ಅವರ ವೈಫಲ್ಯವನ್ನು ಕರಪತ್ರ ಮೂಲಕ ಮನೆಮನೆಗೆ ತಲುಪಿಸುವ ಕೆಲಸ ನೊಂದ ನಿಷ್ಠಾವಂತ ಕಾರ್ಯಕರ್ತರ ಪಡೆ ಮಾಡಲಿದೆʼʼ ಎಂದು ಹೇಳಿದರು.

ಗೋಷ್ಠಿಯಲ್ಲಿ ಎಸ್.ವಿ.ಕೃಷ್ಣಮೂರ್ತಿ, ಕಸ್ತೂರಿ ಸಾಗರ್, ಜಗದೀಶ್ ಗೌಡ, ಚಂದ್ರಶೇಖರ್, ಶ್ರೀಧರ್, ಪ್ರಶಾಂತ್ ಹೆಗಡೆ, ನಾಗರಾಜ್ ಮೊಗವೀರ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ : Karnataka Elections : ನೀವು ಮತ ನೀಡುತ್ತಿರುವುದು ಹಾಲಪ್ಪ ಅವರಿಗಲ್ಲ, ಸಾಗರದ ಸಮಗ್ರ ಅಭಿವೃದ್ಧಿಗೆ ಎಂದ ಸಂಸದ ಬಿ.ವೈ ರಾಘವೇಂದ್ರ

Exit mobile version