ಗದಗ: ಇದು ಒಂಥರಾ ಸಹೋದರರ ಕಾಳಗ. ರೋಣ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಹಾಲಿ ಶಾಸಕ ಕಳಕಪ್ಪ ಬಂಡಿ ಮತ್ತು ಅವರ ಸೋದರ ಸಿದ್ದಪ್ಪ ಬಂಡಿ ಫೈಟ್ ಮಾಡಿದ್ದರು. ಸೋದರನ ಮೇಲೆ ಹಲವು ಆರೋಪಗಳನ್ನು ಮಾಡಿದ್ದ ಸಿದ್ದಪ್ಪ ಟಿಕೆಟ್ ಕೊಡಬಾರದು ಎಂಬ ವಾದ ಮಾಡಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಹಾಲಿ ಶಾಸಕ ಕಳಕಪ್ಪ ಬಂಡಿ ಅವರಿಗೇ ಮಣೆ ಹಾಕಿದೆ. ಇದೀಗ ಸೋದರ ಸಿದ್ದಪ್ಪ ಬಂಡಿ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ಸೋದರನ ವಿರುದ್ಧವೇ ತೊಡೆ ತಟ್ಟಿದ್ದಾರೆ.
ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ್ ಅವರ ಜೊತೆ ಕೈ ಜೋಡಿಸಿದ ಸಿದ್ದಪ್ಪ ಬಂಡಿ ಎಲ್ಲರೂ ಸೇರಿ ಪಾಟೀಲ್ ಅವರನ್ನೇ ಗೆಲ್ಲಿಸೋಣ ಎಂದು ಕರೆ ನೀಡಿದ್ದಾರೆ. ಸಿದ್ದಪ್ಪ ಬಂಡಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕೂಡಾ ದೊಡ್ಡ ಮಟ್ಟದ ಕಾರ್ಯಕ್ರಮವನ್ನೇ ಆಯೋಜಿಸಿ ಜಯಕಾರ ಹಾಕಿದೆ.
ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ನಡೆಸಿದ್ದ ಕಳಕಪ್ಪ ಬಂಡಿ ಸಹೋದರ ಸಿದ್ಧಪ್ಪ ಬಂಡಿ ಮತ್ತು ಇತರ ಕೆಲವರು ಕಳಕಪ್ಪ ಬಂಡಿಗೆ ಟಿಕೆಟ್ ಕೊಡಲೇಬಾರದು. ಕಳಕಪ್ಪ ಬಂಡಿ ಬಿಟ್ಟು ಬೇರೆ ಯಾರಿಗೇ ಟಿಕೆಟ್ ನೀಡಿದರೂ ಪರಸ್ಪರ ಬೆಂಬಲಿಸುವುದಾಗಿ ಪ್ರಕಟಿಸಿದ್ದರು.
ಆದರೆ, ಈ ಬಾರಿಯೂ ಕಳಕಪ್ಪ ಬಂಡಿಗೇ ಕೊಟ್ಟ ಹಿನ್ನೆಲೆಯಲ್ಲಿ ಸೋದರ ಸಿಡಿದೆದ್ದು ಶತಾಯಗತಾಯ ಕಳಕಪ್ಪ ಬಂಡಿ ಅವರನ್ನು ಸೋಲಿಸಲು ಪಣ ತೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಜತೆಗೆ ಅವರ ಕೆಲವು ಬೆಂಬಲಿಗರೂ ಸೇರಿದ್ದಾರೆ.
ರೋಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೇರ್ಪಡೆಯಾದ ಸಿದ್ದಪ್ಪ ಬಂಡಿ ಮತ್ತು ಬೆಂಬಲಿಗರು ಜಿ.ಎಸ್ ಪಾಟೀಲ್ ಗೆಲುವು ಶತಸ್ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ : Karnataka Election 2023: ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರ, ಇಂದು ಟೆಂಪಲ್ ರನ್