Site icon Vistara News

Karnataka Elections: ಯಾರು ಬೇಕಾದ್ರೂ ಬನ್ನಿ, ನಂಗೆ ಫೈಟ್‌ ಬೇಕು; ಶಿಗ್ಗಾಂವಿಯಲ್ಲಿ ಕೈಗೆ ಬೊಮ್ಮಾಯಿ ಸವಾಲ್; ಸಲೀಂ ಅಹ್ಮದ್‌ ನಿಲ್ಲಲಿ ಎಂದ ಖಾದ್ರಿ!

CM Bommai Shiggavi

#image_title

ಹಾವೇರಿ: ಚಿತ್ರ ನಟ ಸುದೀಪ್‌ ಬೆಂಬಲ ನೀಡಿದ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಂತಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ʻಯಾರು ಬೇಕಾದ್ರೂ ಬನ್ನಿʼ ಎನ್ನುವ ಮೂಲಕ ಕಾಂಗ್ರೆಸ್‌ಗೆ ಪಂಥಾಹ್ವಾನ ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ (Karnataka Elections) 20 ಕಾಂಗ್ರೆಸ್‌ ಮುಖಂಡರ ಆಪರೇಷನ್‌ ಕಮಲವೂ ನಡೆಯಿತು ಇದೆಲ್ಲವನ್ನೂ ನೋಡಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್‌ ಖಾದ್ರಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹ್ಮದ್‌ ಅವರು ಅಭ್ಯರ್ಥಿಯಾಗಲಿ ಎಂದು ಹೊಸ ವರಸೆ ಶುರು ಮಾಡಿದ್ದಾರೆ! ಶಿಗ್ಗಾವಿಯಲ್ಲಿ ಆದಿ ಬಣಜಿಗ ಸಮಾಜದಿಂದ ಅಭಿನಂದನಾ ಸಮಾರಂಭವೂ ನಡೆಯಿತು.

ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಆದರೂ ಶಿಗ್ಗಾವಿಯಲ್ಲಿ ಸಿಎಂ ವಿರುದ್ದ ತೊಡೆ ತಟ್ಟೋರು ಯಾರು ಎನ್ನುವ ಗೊಂದಲ ಇನ್ನೂ ಮುಂದುವರಿದಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಕಣಕ್ಕಿಳಿಯುತ್ತಾರೆ ಎನ್ನುವ ಚರ್ಚೆಯ ಬೆನ್ನಲ್ಲೇ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ವಿನಯ ಹೆಸರನ್ನು ಘೋಷಣೆ ಮಾಡಲಾಗಿದೆ.

ವಿನಯ ಕುಲಕರ್ಣಿ ಹೆಸರು ಧಾರವಾಡ ಗ್ರಾಮೀಣಕ್ಕೆ ಘೋಷಣೆಯಾಗುತ್ತಿದ್ದಂತೆ ಶುಕ್ರವಾರ ಶಿಗ್ಗಾಂವಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೈ ನಾಯಕರನ್ನು ಕೆರಳಿಸಿದ್ದಾರೆ. ಶಿಗ್ಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಸ್ಥಳೀಯ ಕೈ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಮೂಲಕ ಕೈ ಪಡೆಗೆ ಬಂದ ಬಿಗ್ ಶಾಕ್ ನೀಡಿದ್ದಾರೆ.

ಇದೆ ವೇಳೆ ಮಾತನಾಡಿದ ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ಅಬ್ಬರಿಸಿ ಬೊಬ್ಬಿರಿದ್ದಾರೆ. ʻʻಕೆಲವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ನಾನು ಶಿಗ್ಗಾಂವಿಯಿಂದಲೇ ಸ್ಪರ್ದೆ ಮಾಡ್ತೀನಿʼʼ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಅವಿರೋಧ ಆಯ್ಕೆ ನಂಗಿಷ್ಟ ಇಲ್ಲ.

ತಮ್ಮನ್ನು ಶಿಗ್ಗಾಂವಿಯಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್‌ ನಾಯಕರು ಹೆಣೆದಿದ್ದ ತಂತ್ರ ಅರಿತಿದ್ದ ಬೊಮ್ಮಾಯಿ, ಆಪರೇಷನ್ ಕಮಲದ ಮೂಲಕ ಕೈ ನಾಯಕರಿಗೆ ಶಾಕ್ ನೀಡಿದ್ದು ಮಾತ್ರವಲ್ಲ, ಶಿಗ್ಗಾಂವಿಯ ಕುಸ್ತಿ ಅಖಾಡಕ್ಕೆ ಯಾರು ಬೇಕಾದರೂ ಬನ್ನಿ, ನಾನು ಸಿದ್ದನಿದ್ದೇನೆ, ಅವಿರೋಧ ಆಯ್ಕೆ ನನಗಿಷ್ಟವಿಲ್ಲ, ನನಗೆ ಕುಸ್ತಿ ಬೇಕು, ಸೆಡ್ಡು ಹೊಡೆದಾಗಲೇ ಯಾರ ಶಕ್ತಿ ಎಷ್ಟು ಎನ್ನೋದು ಗೊತ್ತಾಗಲಿದೆ. ಕುಸ್ತಿಗೆ ಬರುವಾಗ ಹೊಸ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ ಎಂದು ಸವಾಲ್ ಹಾಕಿದ್ದಾರೆ.

ಸ್ಥಳೀಯ ಕೈ ಮುಖಂಡರು ಬಿಜೆಪಿ ಸೇರಿದ್ದು ದೊಡ್ಡ ಶಕ್ತಿ ಬಂದಂತಾಗಿದೆ ಎಂದ ಸಿಎಂ, ಶಿಗ್ಗಾಂವಿಯಲ್ಲಿ ಗೆಲುವಿಗಾಗಿ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ಮತ್ತೊಂದೆಡೆ ಯಾರನ್ನ ಕಣಕ್ಕಿಳಿಸಬೇಕು ಎನ್ಬುವ ಗೊಂದಲದಲ್ಲಿರುವ ಕೈ ನಾಯಕರಿಗೆ ಬೊಮ್ಮಾಯಿ ರಣತಂತ್ರ ಶಾಕ್ ‌‌ನೀಡಿದೆ. ಕಾಂಗ್ರೆಸ್ ತೊರೆದ ಕೈ ಮುಖಂಡರ ಬಗ್ಗೆ ಹರಿಹಾಯ್ದಿರುವ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಅವರು ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದರು.

ವಿನಯ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಅವರಿಗೆ ಧಾರವಾಡದ ಟಿಕೆಟ್‌ ನೀಡಲಾಗಿದೆ. ಸಲೀಂ ಅಹ್ಮದ್‌ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಂದು ಎಂದು ಹೇಳಿದ ಖಾದ್ರಿ ಅವರು ತಾವು ನಿಲ್ಲುವ ವಿಚಾರವನ್ನೇ ಎತ್ತಲಿಲ್ಲ. ಹಿಂದೆ ತನಗಲ್ಲದೆ ಬೇರೆಯವರಿಗೆ ಟಿಕೆಟ್‌ ಕೊಟ್ಟರೆ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ ಎಂದೆಲ್ಲ ಹೆದರಿಸಿದ್ದ ಖಾದ್ರಿ ಅವರನ್ನು ದೆಹಲಿಗೆ ಕರೆಸಿ ಸಮಾಧಾನ ಮಾಡಲಾಗಿತ್ತು. ಈಗ ಟಿಕೆಟ್‌ ಕೊಟ್ಟರೂ ಬೇಡ ಎನ್ನುವ ಹಾಗೆ ಆಗಿದ್ದಾರೆ!

ಇದನ್ನೂ ಓದಿ : SC ST Reservation: “ನಾನು ಬೇರೆ ಥರ ಮುಖ್ಯಮಂತ್ರಿ ಅಲ್ಲ…”: ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

Exit mobile version