Site icon Vistara News

Karnataka Elections : ಭಟ್ಕಳದಲ್ಲಿ ಕೈ ಅಭ್ಯರ್ಥಿ ಮಂಕಾಳು ವೈದ್ಯ ಶಕ್ತಿಪ್ರದರ್ಶನ; ಅಭಿಮಾನಿಗಳಿಂದ 400 ದೇವಸ್ಥಾನಗಳಲ್ಲಿ ಪೂಜೆ

Mankalu vaidya

#image_title

ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕೇತ್ರದ (Karnataka Elections) ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಮಂಕಾಳು ವೈದ್ಯ ಸೋಮವಾರ ಸಹಸ್ರಾರು ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆ ಮೂಲಕ ತಾಲ್ಲೂಕು ಆಡಳಿತ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಮಮತಾ ದೇವಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ ಕ್ಷೇತ್ರದ ನಾನಾ ಕಡೆಗಳಲ್ಲಿ ಸುಮಾರು 400 ದೇವಸ್ಥಾನಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಮೆರವಣಿಗೆಗೂ ಮುನ್ನ ಮಂಕಾಳು ವೈದ್ಯ ಅವರು, ತಾಲೂಕಿನ ಗ್ರಾಮ ದೇವತೆಯಾದ ಚನ್ನಪಟ್ಟಣ ಹನುಮಂತ ದೇವರಿಗೆ ಪತ್ನಿ ಹಾಗೂ ಬೆಂಬಲಿಗರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಜೊತೆಗೂಡಿ ಹೂವಿನ ಮಾರುಕಟ್ಟೆ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿಬಂದು ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ತಾಲ್ಲೂಕು ಆಡಳಿತ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಭಟ್ಕಳ ಹಾಗೂ ಹೊನ್ನಾವರದಿಂದ ಆಗಮಿಸಿದ್ದ ಅಂದಾಜು 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಮಾಜಿ ಶಾಸಕರ ಜೊತೆ ಹೆಜ್ಜೆ ಹಾಕಿ ಅವರ ಪರ ಘೋಷಣೆ ಕೂಗಿದರು. ಸೋಮವಾರ ಮುಂಜಾನೆಯಿಂದ ಮಂಕಾಳು ವೈದ್ಯರ ಅಭಿಮಾನಿಗಳು ಕ್ಷೇತ್ರದಾದ್ಯಂತ ಸುಮಾರು 400 ದೇವಸ್ಥಾನಗಳಲ್ಲಿ ಗೆಲುವಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಂಕಾಳು ವೈದ್ಯ ಅವರು, “ನನ್ನ ಜೊತೆ ಜನರು ಹಾಗೂ ಪಕ್ಷದ ಕಾರ್ಯಕರ್ತರಿದ್ದಾರೆ. ಗೆದ್ದು ಬಂದಾಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನನ್ನಿಂದ ಸಹಾಯವಾಗಬೇಕು ಎನ್ನುವ ಆಶಯವಿದೆ. ಭಟ್ಕಳದಲ್ಲಿ ಉದ್ಯೋಗ ಸೃಷ್ಠಿಮಾಡುವಂತಹ ಕೆಲಸ ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎನ್ನುವ ಗುರಿಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಕಳೆದ ಬಾರಿ ಶಾಸಕನಿದ್ದಾಗ ನಾನು ಸ್ಪಂದಿಸಿದ ರೀತಿಯನ್ನು ನೆನೆದು ಈ ಬಾರಿ ಜನರೇ ಮುಂದೆ ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಈ ಬಾರಿ ಗೆಲವು ಖಚಿತ” ಎಂದು ಹೇಳಿದರು.

ಇದನ್ನೂ ಓದಿ : Karnataka Elections : ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಮಂಕಾಳು ವೈದ್ಯ ತೇಜೋವಧೆಗೆ ಯತ್ನ: ಇಬ್ಬರ ಮೇಲೆ ಕೇಸು

Exit mobile version