ಚಿಕ್ಕಮಗಳೂರು: ಇತ್ತೀಚೆಗಷ್ಟೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದ ಕಡೂರಿನ ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿಲ್ಲ. ಇದರಿಂದ ವೈಎಸ್‌ವಿ ದತ್ತ ಬೇಸರಗೊಂಡಿದ್ದರೆ, ಅಭಿಮಾನಿಗಳು ಕೆರಳಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಹಾಗೂ ಮುಖಂಡರು ದತ್ತ ಅವರನ್ನು ಪಕ್ಷೇತರನಾಗಿ ಇಲ್ಲವೇ ಆಮ್ ಆದ್ಮಿ ಪಾರ್ಟಿ ಮೂಲಕ ಮುಂದಿನ ಚುನಾವಣೆಯಲ್ಲಿ (Karnataka Elections) ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ದತ್ತ ಅವರು ಕಡೂರಿನಿಂದ ಕಾಂಗ್ರೆಸ್ ಟಿಕೆಟ್‌ನ ಭರವಸೆ ಹಿನ್ನೆಲೆಯಲ್ಲಿಯೇ ಜೆಡಿಎಸ್ ಬಿಟ್ಟಿದ್ದರು ಎನ್ನಲಾಗಿದೆ. ಆದರೆ, ಎರಡನೇ ಪಟ್ಟಿ ಬಿಡುಗಡೆಯಾದಾಗ ಅವರಿಗೆ ಆಘಾತ ಕಾದಿತ್ತು. ಕಾಂಗ್ರೆಸ್ ಇಲ್ಲಿ ಕಳೆದ ಬಾರಿ ಸ್ಪರ್ಧಿಸಿ, ಬಿಜೆಪಿಯ ಬೆಳ್ಳಿ ಪ್ರಕಾಶ್ ವಿರುದ್ಧ ಸೋಲು ಕಂಡಿದ್ದ ಆನಂದ್ ಎ.ಎಸ್. ಅವರಿಗೇ ಮತ್ತೆ ಮಣೆ ಹಾಕಿದೆ. ಕಾಂಗ್ರೆಸ್ ದತ್ತ ಅವರಿಗೆ ಮೋಸ ಮಾಡಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಮೋಸವನ್ನೇ ಮುಂದಿಟ್ಟುಕೊಂಡು ಕಣಕ್ಕಿಳಿಯಬೇಕು ಎಂದು ಸಲಹೆ ನೀಡುತ್ತಿದ್ದಾರೆ.
ಗುರುವಾರ ಟಿಕೆಟ್ ಪ್ರಕಟಣೆಯ ಸಂಭ್ರಮದಲ್ಲಿದ್ದ ವೈಎಸ್‌ವಿ ದತ್ತ ಅವರು ಬಳಿಕ ಬೇಸರಗೊಂಡು ಕಡೂರು ತಾಲೂಕಿನ ಯಗಟಿಯಲ್ಲಿರುವ ಮನೆಗೆ ಮರಳಿದರು. ಆಗ ಊರಿನಲ್ಲಿ ಸಾವಿರಾರು ಜನರು ಸೇರಿ ಅವರಿಗೆ ಸಮಾಧಾನ ಹೇಳಿದರು. ಈ ವೇಳೆ ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್‌ಗೆ ಧಿಕ್ಕಾರ ಕೂಗಲಾಯಿತು.
ಯಗಟಿಯ ನಿವಾಸದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜತೆ ಸಭೆ ನಡೆಸಿದ ಅವರು ಒಂದು ಹಂತದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವ ಚಿಂತನೆ ನಡೆಸಿದರೆ ಕೆಲವರು ಮಾನ್ಯತೆ ಇರುವ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಹೇಳಿದರು. ಎಲ್ಲ ವಿಚಾರಗಳನ್ನು ಇನ್ನೊಂದು ಸುತ್ತು ಚರ್ಚಿಸಿ ಬಹುತೇಕ ಆಪ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಆಮ್ ಆದ್ಮಿ ಪಾರ್ಟಿ ಸೇರುವುದಾದರೆ ಶುಕ್ರವಾರ ಸಮಾವೇಶ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಜೆಡಿಎಸ್‌ಗೆ ಮರಳಿ ಬನ್ನಿ ದತ್ತಣ್ಣ
ಈ ನಡುವೆ ದತ್ತ ಅಭಿಮಾನಿಗಳು ಮರಳಿ ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಡಿಯೋ ವೈರಲ್ ಆಗುತ್ತಿದೆ. ʻʻಒಳ್ಳೆ ಮನುಷ್ಯನಿಗೆ ಟಿಕೆಟ್ ಸಿಕ್ಕಿಲ್ಲ ಅಂದಮೇಲೆ ಕಾಂಗ್ರೆಸ್ ಸೋಲೋದು ಪಕ್ಕ. ದತ್ತ ಅವರು ಜೆಡಿಎಸ್ ಗೆ ಬಂದರೆ ನಾವಂತೂ ಗೆದ್ದೇ ಗೆಲ್ಲಿಸ್ತೀವಿ. ದತ್ತಣ್ಣಂಗೆ ಟಿಕೆಟ್ ಕೊಡ್ಲಿಲ್ಲ ಅಂದ್ರೆ ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ. ಗುಡ್ಡೆ ಹಳ್ಳಿ ಕೆಂಚಪ್ಪನ ಆಣೆಯಾಗೂ ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆʼʼ ಎಂದು ಅಭಿಮಾನಿಯೊಬ್ಬ ಶಾಪ ಹಾಕಿದ್ದು ಭಾರಿ ವೈರಲ್ ಆಗಿದೆ. ಇತರ ಅಭಿಮಾನಿಗಳು ಕೂಡಾ ಜೆಡಿಎಸ್ ಸೇರುವಂತೆ ಮನವಿ ಮಾಡಿದ್ದಾರೆ.
ಕಡೂರಿನ ಜೆಡಿಎಸ್ ಅಭ್ಯರ್ಥಿಯಾಗಿರುವ ಧನಂಜಯ್ ಅವರು ಕೂಡಾ, ʻʻಕಾಂಗ್ರೆಸ್ ವೈ.ಎಸ್.ವಿ ದತ್ತ ಅವರಿಗೆ ವಿಶ್ವಾಸ ದ್ರೋಹ ಮಾಡಿದೆ. ವೈ.ಎಸ್.ವಿ. ದತ್ತ ಅವರು ಮತ್ತೆ ಜೆಡಿಎಸ್ ಗೆ ಬಂದರೆ ಸ್ವಾಗತ. ನಮ್ಮ ನಾಯಕರು ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂಬ ನಂಬಿಕೆ ಇದೆʼʼ ಎಂದು ಹೇಳಿದರು.
ʻʻದತ್ತಗೆ ಕಾಂಗ್ರೆಸ್ ಗೆ ಹೋಗಿ ಅವಮಾನವಾಗಿದೆ. ಕಾಂಗ್ರೆಸ್ ಬಿ ಟೀಂ ಆಫ್ ಬಿಜೆಪಿ. ಅವರು ಬಂದರೆ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ಲಾಭವಾಗುತ್ತದೆʼʼ ಎಂದು ಧನಂಜಯ್ ನೇರವಾಗಿ ಆಹ್ವಾನ ಕೊಟ್ಟರು.
ಇತ್ತ ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು, ʻʻದತ್ತ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಯಾಕೆ ಟಿಕೆಟ್ ಮಿಸ್ ಮಾಡಿಕೊಂಡರೋ ಗೊತ್ತಿಲ್ಲ. ಅವರ ಬಗ್ಗೆ ನಾನು ಮಾತನಾಡಲ್ಲ. ಅವರವರು ಬಗೆಹರಿಸಿಕೊಳ್ಳುತ್ತಾರೆʼʼ ಎಂದರು.
ಇದನ್ನೂ ಓದಿ ; Karnataka Election | ವೈಎಸ್‌ವಿ ದತ್ತ ಜೆಡಿಎಸ್‌ಗೆ ಗುಡ್‌ಬೈ, ಡಿ. 17ರಂದು ಕಾಂಗ್ರೆಸ್‌ಗೆ ಸೇರ್ಪಡೆ ಫಿಕ್ಸ್