Site icon Vistara News

Karnataka Elections 2023 : ಕಾಂಗ್ರೆಸಿಗರಿಗೆ ಜನರ ಎದುರು ನಿಂತು ಮಾತನಾಡುವ ನೈತಿಕತೆ ಇಲ್ಲ ಎಂದ ಸಿಎಂ ಬೊಮ್ಮಾಯಿ

CM Bommai Nirani

#image_title

ಬಾಗಲಕೋಟೆ: ಕಾಂಗ್ರೆಸ್‌ ನಾಯಕರಿಗೆ ಜನರ ಎದುರು ನಿಂತು ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಂಗಳವಾರ ಬೀಳಗಿಯಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ಮುರುಗೇಶ ನಿರಾಣಿ ಅವರ ನಾಮಪತ್ರ ಸಲ್ಲಿಕೆ (Karnataka Elections 2023) ನಂತರ ಸಾರ್ವಜನಿಕರನ್ನು ಉದ್ದೇಶಿ೨೦೧ಸಿ ಮಾತನಾಡಿದರು.

ಮುರುಗೇಶ ನಿರಾಣಿ ಅವರನ್ನು 50 ಸಾವಿರ ಅಂತರದಿಂದ ಗೆಲ್ಲಿಸುತ್ತೀರಿ ಎಂದು ನಂಬಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಒಂದು ಚುನಾವಣೆ ಗೆಲ್ಲಲು ಉತ್ಸಾಹ ಬೇಕು. ಅದಕ್ಕೆ ಕಾರ್ಯಕರ್ತರ ಪಡೆ ಬೇಕು. ಕಾರ್ಯಕರ್ತರ ಉತ್ಸಾಹ ಇರುವುದರಿಂದ ಮುರುಗೇಶ ನಿರಾಣಿ ಗೆಲ್ಲಿಸಬೇಕು ಎಂದರು. ಮುರುಗೇಶ ನಿರಾಣಿ ಅವರು ದಾಖಲೆ ಪ್ರಮಾಣದ ಅಭಿವೃದ್ಧಿ ಮಾಡಿದ್ದಾರೆ. ತಮ್ಮ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳುತ್ತಾರೆ ಎಂದರು.

ಕಾಂಗ್ರೆಸ್‌ನಿಂದ ಜನರಿಗೆ ದ್ರೋಹ

ʻʻಕಾಂಗ್ರೆಸ್‌ನವರು ಬಹಿರಂಗವಾಗಿ ಮತಯಾಚನೆ ಮಾಡಲಿ ನೋಡೋಣ. ಅವರು ಒಂದು ಕಾರಿನಲ್ಲಿ ನಾಲ್ಕೈದು ಜನ ಬೀಗರ ಮನೆಗೆ ಬಂದಂತೆ ಬಂದು ಹೋಗುತ್ತಾರೆʼʼ ಎಂದು ಲೇವಡಿ ಮಾಡಿದರು. ಉತ್ತರ ಕರ್ನಾಟಕದ ಬೀಳಗಿ ತಾಲೂಕಿನ ಜನರಿಗೆ ಕಾಂಗ್ರೆಸ್‌ನವರು ದ್ರೋಹ ಮಾಡಿದ್ದಾರೆ. ಸಿದ್ದರಾಮಯ್ಯ ಕೃಷ್ಣೆ ಮೇಲೆ ಆಣೆ ಮಾಡಿದ್ದರು. ಅವರದ್ದು ಬೊಗಸ್ ಗ್ಯಾರಂಟಿ. ಈಗ ಕೃಷ್ಣೆ ಹೆಸರು ಹೇಳಿದರೆ ಜನರು ನಂಬಲ್ಲ ಅಂತ ಅದನ್ನು ಬಿಟ್ಟು ಈಗ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ ಎಂದರು ಟೀಕಿಸಿದರು.

2018ಕ್ಕೂ ಮೊದಲು 10 ಕೆಜಿ ಅಕ್ಕಿ ಸಿಗುತ್ತಿತ್ತು

2018ಕ್ಕೂ ಮುಂಚೆ ಎಲ್ಲ ಕುಟುಂಬಗಳಿಗೆ 10 ಕೆಜಿ ಅಕ್ಕಿ ಸಿಗುತ್ತಿತ್ತು. ಇವರು ಬಂದು ಐದು ಕೆಜಿಗೆ ಇಳಿಸಿದರು. ಮತ್ತೆ ಚುನಾವಣೆ ಸಂದರ್ಭದಲ್ಲಿ ಮತ್ತೆ 10 ಕೆಜಿ ‌ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಈಗ ಚುನಾವಣೆ ಬಂದಾಗ 2000 ರೂ ಕೊಡುತ್ತೇವೆ ಅಂತ ಕಾರ್ಡ್ ಕೊಡಲು ಶುರು ಮಾಡಿದ್ದಾರೆ. ಅದು ಬೋಗಸ್ ಭರವಸೆ. ಕಾಂಗ್ರೆಸ್ ನಾಯಕರೇ ಅದು ಬೋಗಸ್ ಕಾರ್ಡ್ ಎನ್ನುತ್ತಿದ್ದಾರೆ. ಅವರು 24 ಸಾವಿರ ಕೋಟಿ ರೂ‌ ಬ್ಯಾಂಕಿನಲ್ಲಿ ಇಟ್ಟು ಅವರು ಭರವಸೆ ಕೊಟ್ಟಿದ್ದರೆ, ಒಪ್ಪಬಹುದಿತ್ತು ಎಂದರು..

ಚುನಾವಣೆ ಮುಗಿಯುವವರೆಗೂ ಭರವಸೆ

ʻʻಅವರದು ಚುನಾವಣೆ ಮುಗಿವವರೆಗೂ ಭರವಸೆ, ನಂತರ ಗಳಗಂಟೆ. ನಮ್ಮ ಸರ್ಕಾರ ದುಡಿಯುವ ಮಹಿಳೆಯರಿಗೆ 1000 ರೂ. ಕೊಡುವುದಾಗಿ ಹೇಳಿದ್ದು, ಚುನಾವಣೆ ಮುಗಿದ ಕೂಡಲೆ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲಾಗುವುದುʼʼʼ ಎಂದು ಸ್ಪಷ್ಟಪಡಿಸಿದರು.

ಮುರುಗೇಶ್‌ ನಿರಾಣಿ ಸಾಧನೆಗೆ ಶ್ಲಾಘನೆ

ʻʻಮುರುಗೇಶ ನಿರಾಣಿ ಅವರು ಏತ ನೀರಾವರಿ ಮೂಲಕ 1.20 ಲಕ್ಷ ಎಕರೆ ನೀರಾವರಿ ಮಾಡಿದ್ದಾರೆ. ಈ ತಾಲೂಕಿಗೆ ಬೇಕಾಗಿರುವ ಎಲ್ಲ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ. ಚುನಾವಣೆ ಮುಗಿದ ಕೂಡಲೇ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಮುರುಗೇಶ ನಿರಾಣಿಯವರನ್ನು ಐವತ್ತು ಸಾವಿರ ಮತಗಳಿಂದ ಗೆಲ್ಲಿಸಬೇಕು. ಮುರುಗೇಶ ನಿರಾಣಿಯನ್ನು ಆಯ್ಕೆ ಮಾಡುವ ಮೂಲಕ ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕುʼʼ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ‌ಕಾರಜೋಳ ಹಾಗೂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ : Karnataka Election: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಲಿಂಗಾಯತರ ಮೇಲೆ ಪ್ರೀತಿ: ಸಿಎಂ ಬೊಮ್ಮಾಯಿ

Exit mobile version