ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅವರ ಕ್ಷೇತ್ರ ಶಿಗ್ಗಾಂವಿಯಲ್ಲೇ (Karnataka Elections 2023) ಕಾಂಗ್ರೆಸ್ ಬಿಗ್ ಶಾಕ್ ನೀಡಿದೆ. ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ, ಮಾಜಿ ಶಾಸಕ, ಪ್ರಬಲ ಪಂಚಮಸಾಲಿ ಮುಖಂಡ ಮಂಜುನಾಥ್ ಕುನ್ನೂರು ಅವರನ್ನು ಬಿಜೆಪಿಯಿಂದ ಸೆಳೆದುಕೊಂಡಿದೆ. ಮಂಜುನಾಥ್ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಅವರು ಬಹುತೇಕ ಸೋಮವಾರವೇ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.
ಸಿಎಂ ಬೊಮ್ಮಾಯಿ ಅವರಿಗೆ ಅವರದೇ ಕ್ಷೇತ್ರದಲ್ಲಿ ದೊಡ್ಡದೊಂದು ಆಘಾತ ನೀಡಲು ಕಾಂಗ್ರೆಸ್ ಕಳೆದ ಹಲವು ಸಮಯದಿಂದ ಪ್ರಯತ್ನಿಸುತ್ತಿದೆ. ಅವರನ್ನು ಶಿಗ್ಗಾಂವಿಯಲ್ಲೇ ಕಟ್ಟಿಹಾಕುವುದು ಕಾಂಗ್ರೆಸ್‌ನ ಉದ್ದೇಶ ಮತ್ತು ಸೋಲಿಸುವ ಮೂಲಕ ಶಾಕ್ ನೀಡುವ ಪ್ರಯತ್ನ ಅದರದು.
ಶಿಗ್ಗಾಂವಿಯಲ್ಲಿ ಕಳೆದ ಹಲವು ಚುನಾವಣೆಗಳಿಂದ ಬೊಮ್ಮಾಯಿ ಅವರು ನಿರಂತರವಾಗಿ ಗೆಲ್ಲುತ್ತಿದ್ದಾರೆ. ಅಲ್ಲಿ ಅವರಿಗೆ ಕಾಂಗ್ರೆಸ್‌ನಿಂದ ಕಾಯಂ ಪ್ರತಿಸ್ಪರ್ಧಿಯಾಗಿರುವ ಅಜ್ಜಂಪೀರ್ ಖಾದ್ರಿ ಅವರನ್ನು ಬದಲಿಸಿ ಈ ಬಾರಿ ಪ್ರಬಲ ಪಂಚಮಸಾಲಿ ಮುಖಂಡನನ್ನು ನಿಲ್ಲಿಸುವುದು ಕಾಂಗ್ರೆಸ್‌ನ ಪ್ಲ್ಯಾನ್ ಆಗಿತ್ತು. ಅದರ ಭಾಗವಾಗಿ ಧಾರವಾಡದ ಮಾಜಿ ಶಾಸಕ ವಿನಯ ಕುಲಕರ್ಣಿ ಅವರನ್ನು ಅಲ್ಲಿಗೆ ಫಿಕ್ಸ್ ಮಾಡಲಾಗಿತ್ತು. ಆದರೆ, ವಿನಯ ಕುಲಕರ್ಣಿ ಧಾರವಾಡ ಬಿಟ್ಟು ಬರಲು ಕೊನೆಗೂ ಒಪ್ಪಲೇ ಇಲ್ಲ. ಇದೀಗ ಒಳಗಿಂದೊಳಗೇ ನಡೆಯುತ್ತಿದ್ದ ಸೆಕೆಂಡ್ ಪ್ಲ್ಯಾನ್ ವರ್ಕೌಟ್ ಆಗಿದೆ.
ಮೂಲ ಕಾಂಗ್ರೆಸ್ ಮತಗಳ ಜತೆಗೆ ಪಂಚಮಸಾಲಿ ಲಿಂಗಾಯತ ಮತಗಳಲ್ಲಿ ಸ್ವಲ್ಪ ಶಿಫ್ಟ್ ಆದರೂ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಇದೀಗ ಪ್ರಬಲ ಪಂಚಮಸಾಲಿ ಮುಖಂಡ ಮಂಜುನಾಥ ಕುನ್ನೂರು ಅವರನ್ನು ಸೆಳೆಯಲಾಗಿದೆ.
ಮಂಜುನಾಥ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು, ಅದರ ಲಾಭ ಎತ್ತಲು ಪ್ರಯತ್ನ ಸಾಗಿದೆ. ಟಿಕೆಟ್ ತಂದೆಗೆ ಕೊಡುತ್ತಾರೋ, ಮಗನಿಗೆ ಕೊಡುತ್ತಾರೋ ಎನ್ನುವುದು ಸ್ಪಷ್ಟವಿಲ್ಲ. ಮಂಜುನಾಥ ಕುನ್ನೂರು ಅವರು ಸೋಮವಾರ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭೇಟಿಗೆ ತೆರಳಿದ್ದು, ಬೆಂಗಳೂರಿನಲ್ಲೇ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಅಲ್ಲೇ ಟಿಕೆಟ್ ಬಗ್ಗೆಯೂ ಅಂತಿಮ ತೀರ್ಮಾನ ಆಗಬಹುದು. ಹಾಗೊಂದು ವೇಳೆ ಮಂಜುನಾಥ ಕುನ್ನೂರು ಅವರು ಅಥವಾ ಕುಟುಂಬಕ್ಕೆ ಟಿಕೆಟ್ ನೀಡಿದರೆ ಇದುವರೆಗೆ ಸ್ಪರ್ಧಿಸುತ್ತಿದ್ದ, ಒಂದು ಬಾರಿ ಶಾಸಕರೂ ಆಗಿದ್ದ ಅಜ್ಜಂ ಪೀರ್ ಖಾದ್ರಿ ಪ್ರತಿಕ್ರಿಯೆ ಏನು ಎನ್ನುವುದನ್ನು ನೋಡಬೇಕಾಗುತ್ತದೆ.
ವಿನಯ ಕುಲಕರ್ಣಿ ಅವರು ಕಣಕ್ಕಿಳಿದರೆ ಬೆಂಬಲ ನೀಡುತ್ತೇನೆ. ಇದುವರೆಗೆ ಬಿಜೆಪಿ ಜತೆ ಸೇರಿಕೊಂಡವರು ಕಣಕ್ಕಿಳಿಯುವುದಾದರೆ ಬೆಂಬಲ ಇಲ್ಲ ಎಂದು ಇತ್ತೀಚೆಗೆ ಖಾದ್ರಿ ಹೇಳಿದ್ದರು. ಅದು ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದು ಸ್ಪಷ್ಟವಿಲ್ಲ.
ಮಂಜುನಾಥ ಕುನ್ನೂರು ರಾಜಕೀಯ ಹಾದಿ
ಮಂಜುನಾಥ್ ಕುನ್ನೂರು ಅವರು ಹಿಂದೆ ಶಿಗ್ಗಾವಿ ಕ್ಷೇತ್ರದಿಂದ ಹಿಂದೆ ಶಾಸಕರಾಗಿದ್ದರು.
1989 – 1994, 1994-1999 ಅವಧಿಯಲ್ಲಿ ಶಿಗ್ಗಾವಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
2004ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಗೆದ್ದಿದ್ದರು ಮಂಜುನಾಥ್ ಕುನ್ನೂರು.
2009ರಲ್ಲಿ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಹ್ಲಾದ್ ಜೋಶಿ ವಿರುದ್ಧ ಸೋತಿದ್ದರು,
2018ರಲ್ಲಿ ಮತ್ತೆ ಬಿಜೆಪಿ ಸೇರಿದ್ದರು.
2023ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ
ಇದನ್ನೂ ಓದಿ : Karnataka Election: ಅಜ್ಜಂಪೀರ್ ಖಾದ್ರಿ ಬಂಡಾಯ ವಾಪಸ್; ವಿನಯ್ ಕುಲಕರ್ಣಿಗೆ ಶಿಗ್ಗಾಂವಿ ಟಿಕೆಟ್ ಕೊಟ್ಟರೆ ಬೆಂಬಲಿಸುವೆ