ಮೈಸೂರು: ʻʻಇಲ್ಲಿರುವ ಯಾರೂ ಪರಿವಾರವಾದದಿಂದ ಜನಪ್ರತಿನಿಧಿ ಆದವರಲ್ಲ. ಸ್ವಂತ ಪರಿಶ್ರಮದಿಂದ ಮತ್ತು ಕುಟುಂಬದ ಬೆಂಬಲ ಇಲ್ಲದೆ ಜನಪ್ರತಿನಿಧಿ ಆಗಲು ಡಾ. ಬಾಬಾ ಸಾಹೇಬ ಅಂಬೇಡ್ಕರರು ಮಹತ್ವದ ಕೊಡುಗೆ ನೀಡಿದ್ದಾರೆ. ಇಂಥ ಅಂಬೇಡ್ಕರ್ ಅವರನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಪಕ್ಷಕ್ಕೆ ಶಾಪವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದರು. ಮೈಸೂರಿನಲ್ಲಿ ಭಾನುವಾರ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (Karnataka Election) ಅವರು ಮಾತನಾಡಿದರು.
ʻʻಬಾಬಾ ಸಾಹೇಬರ ಸಂವಿಧಾನದ ಕಾರಣಕ್ಕಾಗಿ ನಾನು ಲೋಕಸಭಾ ಸದಸ್ಯನಾಗಲು ಸಾಧ್ಯವಾಗಿದೆ. ಮೈಸೂರು ಸಮಗ್ರ ಅಭಿವೃದ್ಧಿಗೆ ಒಡೆಯರ್ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದೇ ಮಾದರಿಯಲ್ಲಿ ಮುನ್ನಡೆಯುತ್ತಿರುವ ಮತ್ತು ದೇಶವನ್ನು ಸರ್ವತೋಮುಖ ಅಭಿವೃದ್ಧಿಯಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಆ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣʼʼ ಎಂದು ವಿಶ್ಲೇಷಿಸಿದರು.
ʻʻಕಾಂಗ್ರೆಸ್‌ನವರು ಡಾ.ಬಿ.ಆರ್.ಅಂಬೇಡ್ಕರರ ಫೋಟೊ ಇಟ್ಟುಕೊಂಡು ರಾಜಕಾರಣ ಮಾಡಿದರು. ಆದರೆ ಅವರು ಲೋಕಸಭೆಗೆ ಹೋಗದಂತೆ ನೋಡಿಕೊಂಡರು. ಅವರನ್ನು ಅಗೌರವದಿಂದ ನಡೆಸಿಕೊಂಡರು. ಆದರೆ, ಮೋದಿ ಅವರು ಪಂಚತೀರ್ಥಗಳ ಅಭಿವೃದ್ಧಿ ಮಾಡಿ ನ್ಯಾಯ ಕೊಡುವ ಕಾರ್ಯ ಮಾಡಿದ್ದಾರೆʼʼ ಎಂದು ವಿವರಿಸಿದರು.
ಮೋರ್ಚಾದ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಉತ್ತಮವಾಗಿ ಸಂಘಟನೆ ಮಾಡುತ್ತಿದ್ದಾರೆ ಎಂದು ಅವರು ನುಡಿದರು. ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿವಿಧ ರಾಜ್ಯಗಳ ಪದಾಧಿಕಾರಿಗಳು, ರಾಜ್ಯದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ | Santro Ravi Case | ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಪ್ರಭಾವ! ಯುವತಿಗೆ 1.83 ಲಕ್ಷ ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್!