Site icon Vistara News

Karnataka Elections : ಕಾಂಗ್ರೆಸ್‌ಗೆ ಬೀದಿ ಪಕ್ಕದ ಜಾಗವೂ ಸಿಗಬಾರದು ಎಂದ ಸ್ಮೃತಿ ಇರಾನಿ; ಸಿಲಿಂಡರ್‌ ಇಟ್ಟು ಪ್ರತಿಭಟನೆ!

Smrithi Irani

#image_title

ಧಾರವಾಡ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smrithi Irani) ಅವರು ಗುರುವಾರ ಧಾರವಾಡ, ಗದಗದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಗದಗದಲ್ಲಿ ರೋಡ್‌ ಶೋ ನಡೆಸಿದ ಅವರಿಗೆ ನವಲಗುಂದ ಪಟ್ಟಣದ ರೈತ ಹುತಾತ್ಮ ಸ್ಮಾರಕದ ಎದುರು ಪುಷ್ಪವೃಷ್ಟಿ ಮಾಡಲಾಯಿತು. ಸಂಕಲ್ಪ ಯಾತ್ರೆಯ ನಡುವೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿಧಾನಸೌಧದಲ್ಲಿ ಮಾತ್ರವಲ್ಲ ಬೀದಿ ಬದಿಯಲ್ಲೂ ಸಣ್ಣ ಜಾಗ ಸಿಗಬಾರದು, ಹಾಗೆ ಮಾಡಬೇಕು ಎಂದು ಕರೆ ನೀಡಿದರು.

ಮೊದಲು ಧಾರವಾಡಕ್ಕೆ ಆಗಮಿಸಿದ ಅವರು, ನವಲಗುಂದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದರು. ನವಲಗುಂದ ಪಟ್ಟಣದ ರೈತ ಹುತಾತ್ಮ ಸ್ಮಾರಕ ಎದುರು ಸಚಿವರಿಗೆ ರಸ್ತೆಯ ಎರಡು ಬದಿಯಲ್ಲಿ ಜೆಸಿಬಿ ಮೂಲಕ ಹೂ ಮಳೆ ಸುರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಅವರು, ನವಲಗುಂದದ ಜನ ಭೂಮಿಯನ್ನು ತಾಯಿ ಎಂದು ನಂಬಿದವರು. ನಾವೆಲ್ಲರೂ ದೇಶವನ್ನೇ ತಾಯಿ ಎಂದು ನಂಬಿದವರಿದ್ದೇವೆ. ಆದರೆ, ಒಬ್ಬ ವ್ಯಕ್ತಿ ಮಾತ್ರ ವಿದೇಶದಲ್ಲಿ ಹೋಗಿ ದೇಶದ ಮಾನ ಕಳೆಯುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಅವರ ಕುರಿತು ಆಕ್ಷೇಪಿಸಿದರು. ಇವರಿಗೆಲ್ಲಾ ಸರಿಯಾದ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು ಸ್ಮೃತಿ ಇರಾನಿ.

ಗದಗದಲ್ಲಿ ಬೈಕ್‌ ರ‍್ಯಾಲಿಗೆ ಬಂದವರಿಗೆ ಪೆಟ್ರೋಲ್‌ ಫ್ರೀ

ಈ ನಡುವೆ, ಗದಗದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಪಾರ್ವತಿ ಪೆಟ್ರೋಲ್‌ ಪಂಪ್‌ನಲ್ಲಿ ಉಚಿತ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿತ್ತು. ಬೈಕ್‌ಗೆ 200 ರೂ. ಪೆಟ್ರೋಲ್‌ ಉಚಿತವಾಗಿ ನೀಡಲಾಗಿತ್ತು. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ರ‍್ಯಾಲಿಯಲ್ಲಿ ಭಾಗಿಯಾಗುವ ಕಾರ್ಯಕರ್ತರಿಗೆ ಇದು ವಿಶೇಷ ಆಫರ್ ಆಗಿತ್ತು.

ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಈ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗದಗದಲ್ಲಿ ರೋಡ್‌ ಶೋ ನಡೆಸುವ ವೇಳೆ ಕಾಂಗ್ರೆಸ್‌ನಿಂದ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು.

ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಕಾಂಗ್ರೆಸ್ ಕಾರ್ಯಕರ್ತರು ಗ್ಯಾಸ್ ಸಮೇತ ಪ್ರತಿಭಟನೆಗೆ ಹಾಜರಾಗಿದ್ದರು. ಅವರು ತಲೆಯ ಮೇಲೆ ಗ್ಯಾಸ್ ಹೊತ್ತುಕೊಂಡು ಪ್ರತಿಭಟನೆ ನಡೆಸಿದರು. ಸ್ಮೃತಿ ಇರಾನಿ ಅವರ ರೋಡ್‌ ಶೋ ಆಗಮಿಸುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳಾಂತರ ಮಾಡಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ಬೆಲೆ ಸಣ್ಣದಾಗಿ ಏರಿದರೂ ಸ್ಮೃತಿ ಇರಾನಿ ಬೀದಿಗಿಳಿಯುತ್ತಿದ್ದರು. ಈಗ ಒಂದೇ ಏಟಿಗೆ ಐವತ್ತು, ನೂರು ರೂ. ಏರಿಸಿದರು ಸುಮ್ಮನಿದ್ದಾರೆ ಎಂದು ಪ್ರತಿಭಟನಾಕಾರರು ಗೇಲಿ ಮಾಡಿದರು.

ಇದನ್ನೂ ಓದಿ : Karnataka Elections : ಅಪಾಯದಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್‌ ಎಂದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

Exit mobile version