ಕಾರವಾರ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಕಾರವಾರ- ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಅವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಕೊನೇ ಕ್ಷಣದವರೆಗೂ ಪ್ರಯತ್ನ ನಡೆಸಿದ್ದರಾದರೂ ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದ ಚೈತ್ರಾ ಕೊಠಾರಕರ್ ಕಳೆದ 2016ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ತಮ್ಮ ಅವಧಿಯ ಕೊನೆಯಲ್ಲಿ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಒಂದು ವರ್ಷದ ಕಾಲ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಪಕ್ಷ ಸಂಘಟನೆಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಚೈತ್ರಾ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳನ್ನು ಕಾಂಗ್ರೆಸ್ ಆಡಳಿತ ಮಾಡುವಲ್ಲಿ ಶ್ರಮಿಸಿದ್ದರು.
ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವ ನಿರೀಕ್ಷೆ ಹೊಂದಿದ್ದು ಆಕಾಂಕ್ಷಿಯಾಗಿ ಪಕ್ಷಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಸಂಬಂಧ ಪಕ್ಷದ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಟಿಕೆಟ್ ಸಿಗುವ ಭರವಸೆ ನೀಡಿದ್ದರಾದರೂ ಕೊನೇ ಕ್ಷಣದಲ್ಲಿ ಮಾಜಿ ಶಾಸಕರಿಗೇ ಪಕ್ಷ ಟಿಕೆಟ್ ನೀಡಿತ್ತು. ಈ ಕಾರಣದಿಂದ ಟಿಕೆಟ್ ನೀಡುವ ಭರವಸೆ ನೀಡಿ ಅನ್ಯಾಯ ಮಾಡಿದ್ದರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚೈತ್ರಾ ಕೊಠಾರಕರ್ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸಂಪರ್ಕಿಸಿ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿದ್ದು ಅದರಂತೆ ಇಂದು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಇದಾದ ಬಳಿಕ ಕುಮಾರಸ್ವಾಮಿ ಅವರು ಚೈತ್ರಾ ಅವರಿಗೆ ಬಿಫಾರಂನ್ನ ಸಹ ನೀಡಿದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಚೈತ್ರಾ ಕೊಠಾರಕರ್ ಸ್ಪರ್ಧಿಸಲಿದ್ದಾರೆ.
ತ್ರಿಕೋನ ಸ್ಪರ್ಧೆಗೆ ಸಿದ್ಧವಾದ ಕಾರವಾರ-ಅಂಕೋಲಾ ಕ್ಷೇತ್ರ
ಕ್ಷೇತ್ರದಲ್ಲಿ ಸದ್ಯ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಹಾಲಿ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಇಬ್ಬರೂ 2018ರ ಚುನಾವಣೆಯಲ್ಲೂ ಪ್ರತಿಸ್ಪರ್ಧಿಗಳಾಗಿದ್ದು, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಆನಂದ್ ಅಸ್ನೋಟಿಕರ್ ಹಾಗೂ ಸತೀಶ್ ಸೈಲ್‌ರನ್ನು ಮಣಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಹಿಳಾ ಶಾಸಕಿಯಾಗಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಆಯ್ಕೆಯಾಗಿದ್ದರು.
ಈ ಬಾರಿ ಜೆಡಿಎಸ್‌ನಿಂದ ಚೈತ್ರಾ ಕೊಠಾರಕರ್ ಕಣಕ್ಕಿಳಿಯುತ್ತಿದ್ದು ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಬಹುತೇಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಇಬ್ಬರು ಮಹಿಳಾ ಅಭ್ಯರ್ಥಿ ಹಾಗೂ ಓರ್ವ ಪುರುಷ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಕಳೆದ ಬಾರಿ ಮೊದಲ ಬಾರಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದು, ಜೊತೆಗೆ ಹಿಂದುತ್ವ, ಬಿಜೆಪಿ ಅಲೆ ಸಹ ಕರಾವಳಿಯಲ್ಲಿ ಜೋರಾಗಿದ್ದರಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಿರುದ್ಧ 14 ಸಾವಿರ ಮತಗಳ ಅಂತರದಿಂದ ರೂಪಾಲಿ ನಾಯ್ಕ ಗೆಲುವು ಸಾಧಿಸಿದ್ದರು. ಈ ಬಾರಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದು ಮತದಾರ ಪ್ರಭು ಯಾರ ಕೈಹಿಡಿಯಲಿದ್ದಾನೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.