ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಕಾಂಗ್ರೆಸ್‌ನ ಹಾಲಿ ಶಾಸಕರಲ್ಲಿ ಏಳು ಮಂದಿಗೆ ಟಿಕೆಟಿಲ್ಲ ಎಂಬುದು ಸರಿಯಾದ ಮಾಹಿತಿಯಲ್ಲ. ಕೇವಲ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಟಿಕೆಟ್ ದೊರೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಶನಿವಾರ ಮರಳಿದ ಡಿ.ಕೆ.ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಹಾಲಿ ಶಾಸಕರಿಗೆ ಯಾವುದೇ ಸಮಸ್ಯೆ ಇಲ್ಲ. 7 ಜನ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂಬುದು ಸುಳ್ಳು. ಇಬ್ಬರು ಶಾಸಕರು ಅವರೇ ಸ್ವಯಂಪ್ರೇರಿತವಾಗಿ ನಿಲ್ಲುವುದಿಲ್ಲ ಎಂದು ಬೇರೆಯವರನ್ನು ಸೂಚಿಸಿದ್ದಾರೆ ಎಂದು ಹೇಳಿದರು.
ಯುಗಾದಿ ದಿನ ಪಟ್ಟಿ ಬಿಡುಗಡೆ ಸಾಧ್ಯತೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾರ್ಚ್ 20ರಂದು ಬೆಳಗಾವಿಯಲ್ಲಿ ನಡೆಯುವ ಯುವ ಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದರ ಬಳಿಕ ಯುಗಾದಿ (ಮಾರ್ಚ್ 22) ಹೊತ್ತಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು ಡಿ.ಕೆ.ಶಿವಕುಮಾರ್.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಬೇಡ ಎಂಬ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಈ ವಿಚಾರವನ್ನು ಸಿದ್ದರಾಮಯ್ಯ ಅವರನ್ನೆ ಕೇಳಿ ಎಂದರು ಡಿ.ಕೆ.ಶಿವಕುಮಾರ್.
ವಿಮಾನ ನಿಲ್ದಾಣದಲ್ಲೇ ಆಕಾಂಕ್ಷಿಗಳ ಮುತ್ತಿಗೆ
ದೆಹಲಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮರಳುವ ದಾರಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಕೆಲವು ಕ್ಷೇತ್ರಗಳ ಆಕಾಂಕ್ಷಿಗಳು ಭೇಟಿಯಾದರು.
ವಿಮಾನ ನಿಲ್ದಾಣದ ಗೇಟ್ ಬಳಿ ಆಕಾಂಕ್ಷಿಗಳ ಜೊತೆ ಡಿ.ಕೆ ಶಿವಕುಮಾರ್ ಮಾತುಕತೆ ನಡೆಸಿದರು. ದೇವನಹಳ್ಳಿ ಮತ್ತು ಬಸವಕಲ್ಯಾಣ ಕ್ಷೇತ್ರದ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಿದರು. ಕೆಲವು ಆಕಾಂಕ್ಷಿಗಳು ಶಿವಕುಮಾರ್ ಅವರು ಬರುತ್ತಿದ್ದಂತೆಯೇ ಕಾಲಿಗೆ ಬಿದ್ದು ನಮಸ್ಕರಿಸಿದರು.
ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ ದೇವನಹಳ್ಳಿ ಟಿಕೆಟ್ ಆಕಾಂಕ್ಷಿ ಶಾಂತಕುಮಾರ್ ದೇವನಹಳ್ಳಿ ಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ ಎಂದು ತಿಳಿಸಿದ್ದೇವೆ. ಜೊತೆಗೆ ನನ್ನ ಸೇರಿದಂತೆ ಸ್ಥಳೀಯರಿಗೆ ಮಣೆ ಹಾಕಿದರೆ ಮಾತ್ರ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೇವೆ ಎಂದರು.
ಇದನ್ನೂ ಓದಿ : Karnataka Elections : ಕೋಲಾರ ಬಿಟ್ಟು ವರುಣಾಗೆ ಹೋಗಿ ಎಂದು ರಾಹುಲ್ ಹೇಳಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದ ಸಿದ್ದರಾಮಯ್ಯ