ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಲಿದೆಯಾ? ಚುನಾವಣೆ (Karnataka Elections) ವೇಳೆಯಲ್ಲಿಯೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿದಿದೆ ಧಾರವಾಡದ ಗೊಂಬೆ!
ಹೌದು, ಧಾರವಾಡದ ಉಪ್ಪಿನ ಬೆಟಗೇರಿ ವ್ಯಾಪ್ತಿಯ ಹನುಮನಕೊಪ್ಪದ ಗೊಂಬೆ ಭವಿಷ್ಯ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದೆ. ಈ ಗ್ರಾಮದಲ್ಲಿ ಪ್ರತಿ ವರ್ಷವೂ ಯುಗಾದಿ ದಿನ ಭವಿಷ್ಯ ನುಡಿಯಲಾಗುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿನ ಭವಿಷ್ಯ ನಿಜವಾಗುತ್ತದೆ ಎಂದೇ ಹೇಳಲಾಗಿದೆ. ಹೀಗಾಗಿ ಈ ವರ್ಷದ ಭವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಏನಿದು ಗೊಂಬೆ ಭವಿಷ್ಯ?
ಯುಗಾದಿಯ ಹಿಂದಿನ ದಿನವಾದ ಅಮವಾಸ್ಯೆಯಂದು ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ನಡೆಯುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತಿತ್ತು. ಪಾಡ್ಯದ ದಿನ ನಸುಕಿನ ಜಾವ ಈ ಸ್ಥಳಕ್ಕೆ ಬಂದು ಹಿರಿಯರು ಗೊಂಬೆಗಳನ್ನು ಅವಲೋಕಿಸುತ್ತಾರೆ. ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ನುಡಿಯಲಾಗುತ್ತದೆ.
ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಈ ಬಾರಿ ಕರ್ನಾಟಕದ ದಿಕ್ಕಿನ ಗೊಂಬೆ ಕಾಲಿಗೆ ಧಕ್ಕೆಯಾಗಿದ್ದು, ಹೀಗಾಗಿ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಭವಿಷ್ಯ ನುಡಿಯಲಾಗಿದೆ.
ಹಿಂದಿನ ಭವಿಷ್ಯಗಳೂ ನಿಜವಾಗಿದ್ದವು!
ಎರಡು ವರ್ಷದ ಹಿಂದೆಯೂ ಕರ್ನಾಟಕದ ದಿಕ್ಕಿನ ಗೊಂಬೆಗೆ ಧಕ್ಕೆ ಆಗಿತ್ತು. ಆಗ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಯಿತು. ಅಂದರೆ ಮೊದಲೇ ಗೊಂಬೆ ಭವಿಷ್ಯ ನುಡಿದಂತಾಗಿದೆ. ಅದೇ ರೀತಿ ಇಂದಿರಾ ಗಾಂಧಿ ನಿಧನದ ವರ್ಷವೂ ಭವಿಷ್ಯ ನಿಜವಾಗಿತ್ತು. ಆಗ ರಾಷ್ಟ್ರ ನಾಯಕರ ಗೊಂಬೆ ಸಂಪೂರ್ಣವಾಗಿ ಉರುಳಿ ಬಿದ್ದಿತ್ತು. ಅದೇ ವರ್ಷ ಇಂದಿರಾ ಗಾಂಧಿ ಹತ್ಯೆಯಾಗಿತ್ತು.
ಈ ಬಾರಿಯೂ ನಾಲ್ಕು ತಿಂಗಳ ಮೊದಲೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿಯಲಾಗಿದೆ. ಇದು ಸರಿಯಾಗುತ್ತದೆಯೇ ಎನ್ನುವುದಕ್ಕೆ ಭವಿಷ್ಯವೇ ಉತ್ತರ ಕೊಡಬೇಕಾಗಿದೆ.
ಇದನ್ನೂ ಓದಿ: Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ