ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಅವಕಾಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟುಕೊಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಈ ಹುದ್ದೆಯನ್ನು ಬಯಸುವುದಾದರೆ ನಾನು ರೇಸ್‌ನಿಂದ ಹಿಂದೆ ಸರಿಯುತ್ತೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಜನಪ್ರಿಯ ನಾಯಕ. ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಪಕ್ಷದ ಬೆಳವಣಿಗೆಯಲ್ಲಿ ಅವರ ಕೊಡುಗೆ ತುಂಬಾ ದೊಡ್ಡದು. ನನಗಿಂತಲೂ 20 ವರ್ಷಗಳ ಕಾಲ ಹಿರಿಯ ರಾಜಕಾರಣಿ. ಅವರು ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಕೆಲಸಕ್ಕೆ ಮುಂದಾದವರು. ಹೀಗಾಗಿ ಖರ್ಗೆಯವರು ಬಯಸಿದ್ರೆ ನಾನು ನನ್ನ ಅವಕಾಶ ಬಿಟ್ಟು ಕೊಡ್ತೀನಿ. ಅವರ ಕೈಕೆಳಗೆ ಕೆಲಸ ಮಾಡಲು ಸಿದ್ಧನಿದ್ದೇನೆʼʼ- ಹೀಗೆಂದು ಹೇಳಿದರು ಡಿ.ಕೆ. ಶಿವಕುಮಾರ್.
ಸಿದ್ದರಾಮಯ್ಯಗೆ ಠಕ್ಕರಾ? ದಲಿತಾಸ್ತ್ರ ಪ್ರಯೋಗನಾ?
ಏಪ್ರಿಲ್ 9ಕ್ಕೆ ನಿಗದಿಯಾಗಿದ್ದ ರಾಹುಲ್ ಗಾಂಧಿ ಅವರು ಭಾಗವಹಿಸಬೇಕಾಗಿದ್ದ ಸತ್ಯಮೇವ ಜಯತೇ ಕಾರ್ಯಕ್ರಮ ಏಪ್ರಿಲ್ 16ಕ್ಕೆ ಮುಂದೂಡಲ್ಪಟ್ಟಿದೆ ಎಂದು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಅವರು ಏಕಾಏಕಿಯಾಗಿ ಖರ್ಗೆ ಸಿಎಂ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದರ ಬಗ್ಗೆ ರಾಜಕೀಯ ವಲಯದಲ್ಲಿ ಆಗಲೇ ಚರ್ಚೆಗಳು ಶುರುವಾಗಿದೆ.
ಡಿ.ಕೆ. ಶಿವಕುಮಾರ್ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ನಡೆಸಿದರೇ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಒಂದೊಮ್ಮೆ ಕಾಂಗ್ರೆಸ್ ಗೆದ್ದರೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗಾಗಿ ಪರಸ್ಪರ ಬಡಿದಾಡುವುದು ಖಚಿತವಾಗಿದೆ.
ಈಗ ಡಿ.ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿರುವುದು ಒಂದೊಮ್ಮೆ ತಮ್ಮ ನಡುವಿನ ಸ್ಪರ್ಧೆ ಬಿರುಸುಗೊಂಡರೆ ತಮ್ಮಿಬ್ಬರನ್ನೂ ಬಿಟ್ಟು ಮೂರನೇ ವ್ಯಕ್ತಿಯೊಬ್ಬರಿಗೆ ಬಿಟ್ಟುಕೊಡುವಂಥ ವಾತಾವರಣ ನಿರ್ಮಾಣವಾಗುತ್ತದೆ. ಆಗ ತಾನೂ ಖರ್ಗೆ ಪರವಾಗಿ ನಿಲ್ಲುತ್ತೇನೆ ಎಂದು ಶಿವಕುಮಾರ್ ಹೇಳಿದಂತಿದೆ.
ಡಿ.ಕೆ. ಶಿವಕುಮಾರ್ ಅವರು ಖರ್ಗೆ ಅವರನ್ನು ಸಿಎಂ ಮಾಡಲು ಸಿದ್ಧ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ದಲಿತಾಸ್ತ್ರ ಪ್ರಯೋಗ ಮಾಡಿದರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಬಿಜೆಪಿ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಮತಗಳು ಬಿಜೆಪಿ ಕಡೆಗೆ ಹೋಗುವ ಭಯ ಪಕ್ಷಕ್ಕೆ ಕಾಡಿದೆ. ಹೀಗೆ ಕಾಂಗ್ರೆಸ್‌ನಿಂದ ದೂರವಾಗುತ್ತಿವೆ ಎಂದು ಹೇಳಲಾಗುತ್ತಿರುವ ಮತಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು, ಎಲ್ಲ ಕ್ಷೇತ್ರಗಳಲ್ಲಿರುವ ಸಾಂಪ್ರದಾಯಿಕ ದಲಿತ ಮತಗಳನ್ನು ಇನ್ನಷ್ಟು ಗೆದ್ದುಕೊಳ್ಳುವುದು ಡಿ.ಕೆ.ಶಿವಕುಮಾರ್ ಮಾತಿನ ಹಿಂದಿನ ವರಸೆ ಎಂದು ಹೇಳಲಾಗುತ್ತಿದೆ.
ದಲಿತ ಸಮುದಾಯದ ಪರಮೋಚ್ಚ ನಾಯಕನಿಗೆ ಸಿಎಂ ಸ್ಥಾನ ಬಿಟ್ಟು ಕೊಡುವ ವಿಚಾರ ಕಾಂಗ್ರೆಸ್‌ನಲ್ಲಿ ಚರ್ಚೆಯಲ್ಲಿದೆ ಎನ್ನುವ ಅಂಶವೇ ಒಂದಷ್ಟು ಮತಗಳನ್ನು ತಂದುಕೊಡಬಹುದು ಎನ್ನುವ ನಿರೀಕ್ಷೆಯೂ ಪಕ್ಷದಲ್ಲಿದೆ.
ಇದನ್ನೂ ಓದಿ : Inside Story: AICC ಅಧ್ಯಕ್ಷರಾದರೂ ಬದಲಾಗಲಿಲ್ಲ ಸೀನಿಯರ್ ಖರ್ಗೆ ʼಎಡ-ಬಲʼ ರಾಜಕಾರಣ