Site icon Vistara News

Karnataka Elections : ರಾಜನಂದಿನಿ ಬಿಜೆಪಿ ಸೇರ್ಪಡೆಯಿಂದ ಪರಿಣಾಮವಿಲ್ಲ ಎಂದ ಮಧು ಬಂಗಾರಪ್ಪ, ತಮ್ಮನ ಪರ ನಿಂತ ಬಂಗಾರಪ್ಪ ಹಿರಿಯ ಪುತ್ರಿ

Madhu Bangarapp

#image_title

ಸೊರಬ: ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಅವರು ಬಿಜೆಪಿ ಸೇರಿದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಚುನಾವಣಾ ನಿರ್ವಹಣಾ ಕಚೇರಿಯಲ್ಲಿ ಶನಿವಾರ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ʻʻರಾಜನಂದಿನಿ ಅವರ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ. ಈ ಬಗ್ಗೆ ಅವರ ತಂದೆ ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. ತಿಮ್ಮಪ್ಪ ಅವರು ಸೂಕ್ಷ್ಮವಾಗಿ ಅನೇಕ ವಿಷಯಗಳನ್ನು ಸಹ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಟಿಕೆಟ್ ಘೋಷಣೆಯಾದ ತರುವಾಯ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ್ದವು. ಮುನಿಸಿಕೊಂಡವರನ್ನು ಮನವೊಲಿಸುವ ಯತ್ನ ಮಾಡಲಾಗಿದೆ. ಶೀಘ್ರದಲ್ಲಿಯೇ ಎಲ್ಲಾ ಭಿನ್ನಾಭಿಪ್ರಾಯಗಳು ಶಮನವಾಗಲಿದೆʼʼ ಎಂದರು.

ʻʻರಾಜ್ಯದಲ್ಲಿ ಕಾಂಗ್ರೆಸ್ 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆಯ ಪರ್ವವೇ ಆರಂಭವಾಗಿದ್ದು, ಜನತೆ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಸೇರ್ಪಡೆಯಾಗುತ್ತಿದ್ದಾರೆ. ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಜನತೆಯಲ್ಲಿ ನಂಬಿಕೆ ಮೂಡಿದ್ದು, ಸ್ವಯಂ ಪ್ರೇರಿತರಾಗಿ ಕಾರ್ಡ್ ಪಡೆದ ಉದಾಹರಣೆ ಕ್ಷೇತ್ರದಲ್ಲಿ ಸಾಕಷ್ಟಿದೆ” ಎಂದರು.

ಅಂಡಿಗೆ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರಪ್ಪ, ಕೊಡಕಣಿ ಗ್ರಾಪಂ ಮಾಜಿ ಅಧ್ಯಕ್ಷ ಹೂವಪ್ಪ, ಗಣಪತಿ ಯಂಕೇನ್ ಸೇರಿದಂತೆ ಸುಮಾರು 150ಕ್ಕೂ ಅಧಿಕ ಜನ ವಿವಿಧ ಪಕ್ಷಗಳನ್ನು ತೊರೆದು ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಬಂಗಾರಪ್ಪ, ತಾಯಿಯ ಸಮಾಧಿಗೆ ನಮನ

ಇದಕ್ಕೂ ಮೊದಲು ಮಧು ಬಂಗಾರಪ್ಪ ಅವರು ಹಿರಿಯ ಸಹೋದರಿ ಸುಜಾತಾ ಅವರ ಜೊತೆಗೆ ಬಂಗಾರಧಾಮಕ್ಕೆ ತೆರಳಿ ತಂದೆ ಎಸ್. ಬಂಗಾರಪ್ಪ ಮತ್ತು ತಾಯಿ ಶಕುಂತಲಮ್ಮ ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಲ್ಲಾ ಉಪಾಧ್ಯಕ್ಷ ಡಾ. ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಮಾಜಿ ಸದಸ್ಯರಾದ ನಾಗರಾಜ ಚಿಕ್ಕಸವಿ, ಪುರುಷೋತ್ತಮ ಕುಪ್ಪಗಡ್ಡೆ, ಪ್ರಮುಖರಾದ ಎಲ್.ಜಿ. ರಾಜಶೇಖರ ಕುಪ್ಪಗಡ್ಡೆ, ಎಂ.ಡಿ. ಶೇಖರ್, ಸಂತೋಷ್ ಕೊಡಕಣಿ, ಕೆ.ಪಿ. ಪ್ರವೀಣ್ ಶಾಂತಗೇರಿ, ಶ್ರೀಕಾಂತ ಚಿಕ್ಕಶಕುನ, ರವಿ ಕೇಸರಿ ಸೇರಿದಂತೆ ಇತರರಿದ್ದರು.

ತಮ್ಮನ ಪರ ಮತಯಾಚಿಸಿದ ಅಕ್ಕ

ʻʻಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ನಮ್ಮ ಕುಟುಂಬ ಕ್ಷೇತ್ರದ ಜನತೆಯಲ್ಲಿ ನೋಡುತ್ತಿದ್ದೇವೆ. ಮುಂದಿನ ಪೀಳಿಗೆಗಾಗಿ ಬಂಗಾರಪ್ಪ ಅವರಿಗೆ ತೋರಿದ ಪ್ರೀತಿ ವಿಶ್ವಾಸವನ್ನು ಮಧು ಬಂಗಾರಪ್ಪ ಅವರಿಗೂ ನೀಡುವ ಮೂಲಕ ಪ್ರೋತ್ಸಾಹ ನೀಡಿ, ಓಟು ಕೇಳುವ ಅರ್ಹತೆ ಇರುವ ನನ್ನ ತಮ್ಮ ಮಧು ಬಂಗಾರಪ್ಪ ಅವರಿಗೆ ಮತ ನೀಡಿʼʼ ಎಂದು ಎಸ್. ಬಂಗಾರಪ್ಪ ಅವರ ಹಿರಿಯ ಪುತ್ರಿ ಸುಜಾತಾ ಅವರು ವಿನಂತಿ ಮಾಡಿಕೊಂಡರು.

ಇದನ್ನೂ ಓದಿ : Karnataka Elections: ಸೊರಬ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಠೇವಣಿಗೆ ಹಿರೇಶಕುನ ಗ್ರಾಮದ ಅಭಿಮಾನಿಗಳ ದೇಣಿಗೆ

Exit mobile version